ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ವಿಶ್ವದಲ್ಲಿ ಪಾರ್ಲಿಮೆಂಟರಿ ವ್ಯವಸ್ಥೆಯನ್ನು ಮೊತ್ತಮೊದಲಾಗಿ ಜಾರಿಗೆ ತಂದಿರುವ ಭಗವಾನ್ ಮಹಾವೀರರು ಬದುಕು ಮತ್ತು ಬದುಕಲು ಬಿಡು ಎಂಬ ತತ್ವವನ್ನು ಸಾರಿದವರು ಎಂದು ಮೂಡುಬಿದಿರೆ ಶ್ರೀ ಜೈನ ಮಠಾಧೀಶ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದ್ದಾರೆ.ಮೂಡುಬಿದಿರೆ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಆಶ್ರಯದಲ್ಲಿ ತಾಲೂಕು ಆಡಳಿತ ಸೌಧದಲ್ಲಿ ಗುರುವಾರ ನಡೆದ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಮಹಾವೀರರ ಭಾವಚಿತ್ರದ ಮುಂದೆ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.ಸರ್ವೋದಯ ಧರ್ಮ ತೀರ್ಥ ಚಿಂತನೆಯ ಮೂಲಕ ಮಹಾವೀರರು ಜಗದ ಎಲ್ಲರಿಗೂ ಕ್ಷೇಮ ಕಲ್ಪಿಸುವ ಯೋಚನೆ, ಚಿಂತನ ಕ್ರಮ ಹೊಂದಿದ್ದರು. ವಿಶ್ವ ಶಾಂತಿಯ ಮೂಲ ಆಶಯವನ್ನು ಈ ಭಾರತ ದೇಶದಿಂದ ಜಗತ್ತಿಗೆ ಬಿತ್ತರಿಸಿದವರು ಭಗವಾನ್ ಮಹಾವೀರರು ಎಂದರು.
ಮಾಜಿ ಸಚಿವ ಕೆ.ಅಭಯಚಂದ್ರ ಮಾತನಾಡಿ, ಅಹಿಂಸಾ ಪರಮೋಧರ್ಮ ಎಂಬ ಮಹಾವೀರರ ಸಂದೇಶ ಇಂದಿಗೂ ಪ್ರಸ್ತುತ ಎಂದರು.ತಹಸೀಲ್ದಾರ್ ಶ್ರೀಧರ ಮುಂದಲಮನಿ ಮಾತನಾಡಿ, ಶಾಂತಿ, ಸಹಬಾಳ್ವೆಯ ಮೂಲಕ ಮನುಕುಲ ಜೀವನ ಸಾಂಗವಾಗಿ ನಡೆಯುವುದನ್ನು ತಿಳಿಸಿಕೊಟ್ಟವರು ಮಹಾವೀರರು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಉಮಾನಾಥ ಎ. ಕೋಟ್ಯಾನ್ ಅವರು, ಇಂದಿನ ಜಗತ್ತಿನ ಸಂಘರ್ಷಗಳನ್ನು ನೋಡಿದರೆ 2624 ವರುಷಗಳ ಹಿಂದೆ ಪರಿಸ್ಥಿತಿ ಎಷ್ಟು ಕ್ರೂರವಾಗಿರಬಹುದು ಎಂಬುದನ್ನು ಊಹಿಸಬಹುದಾಗಿದೆ ಎಂದರು.ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ, ಪುರಸಭಾಧ್ಯಕ್ಷೆ ಜಯಶ್ರೀ ಕೇಶವ, ಉಪಾಧ್ಯಕ್ಷ ನಾಗರಾಜ ಪೂಜಾರಿ, ಮುಡಾ ಅಧ್ಯಕ್ಷ ಹರ್ಷವರ್ಧನ ಪಡಿವಾಳ್, ತಾ.ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅರುಣ್ ಕುಮಾರ ಶೆಟ್ಟಿ, ಬಿಇಓ ವಿರೂಪಾಕ್ಷಪ್ಪ ಮುಖ್ಯ ಅತಿಥಿಗಳಾಗಿದ್ದರು.
ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಅಕ್ಷತಾ ನಾಯಕ್ ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳು, ಉಪತಹಸೀಲ್ದಾರ್ ಬಾಲಚಂದ್ರ, ತಿಲಕ್ ಕುಮಾರ್, ಸಿಬ್ಬಂದಿ ಭಾಗವಹಿಸಿದ್ದರು.ಉಪತಹಸೀಲ್ದಾರ್ ರಾಮ ಕೆ. ಕಾರ್ಯಕ್ರಮ ನಿರೂಪಿಸಿದರು.