ಭಟ್ಕಳದಲ್ಲಿ 4 ದಿನಗಳ ಬೃಹತ್ ಹಲಸು ಮತ್ತು ಹಣ್ಣುಗಳ ಮೇಳಕ್ಕೆ ಚಾಲನೆ

KannadaprabhaNewsNetwork |  
Published : May 17, 2026, 02:15 AM IST
ಭಟ್ಕಳದಲ್ಲಿ ನಡೆಯುತ್ತಿರುವ ಹಲಸು ಮೇಳದಲ್ಲಿ ವಿವಿಧ ಮಾದರಿಯ ಹಲಸು ಹಣ್ಣನ್ನು ಖರೀದಿಸುತ್ತಿರುವ ಗ್ರಾಹಕರು. | Kannada Prabha

ಸಾರಾಂಶ

ಪಟ್ಟಣದ ಮಾರುತಿ ನಗರದ ರಾಘವೇಂದ್ರ ಸ್ವಾಮಿ ಮಠದ ಸಭಾಭವನದಲ್ಲಿ ಸ್ಪಂದನ ಸಂಸ್ಥೆ, ರಂಜನ್ ಇಂಡೇನ್ ಎಜೆನ್ಸಿ ಭಟ್ಕಳ ಹಾಗೂ ಬೆನಕ ಇವೆಂಟ್ಸ ಕುಂದಾಪುರ ಇವರ ಸಹಯೋಗದಲ್ಲಿ ಏರ್ಪಡಿಸಲಾದ 4 ದಿನಗಳ ಬೃಹತ್ ಹಲಸು ಮತ್ತು ಹಣ್ಣಿನ ಮೇಳಕ್ಕೆ ಹಿರಿಯ ಮುಖಂಡ ಎಂ.ಆರ್. ನಾಯ್ಕ ಚಾಲನೆ ನೀಡಿದರು.

ಮೇಳದಿಂದ ಸ್ಥಳೀಯ ವ್ಯಾಪಾರಸ್ಥರು, ರೈತರಿಗೆ ಉತ್ಪನ್ನ ಮಾರಾಟ ಮಾಡಲು ಅನುಕೂಲ

ಕನ್ನಡಪ್ರಭ ವಾರ್ತೆ ಭಟ್ಕಳ

ಪಟ್ಟಣದ ಮಾರುತಿ ನಗರದ ರಾಘವೇಂದ್ರ ಸ್ವಾಮಿ ಮಠದ ಸಭಾಭವನದಲ್ಲಿ ಸ್ಪಂದನ ಸಂಸ್ಥೆ, ರಂಜನ್ ಇಂಡೇನ್ ಎಜೆನ್ಸಿ ಭಟ್ಕಳ ಹಾಗೂ ಬೆನಕ ಇವೆಂಟ್ಸ ಕುಂದಾಪುರ ಇವರ ಸಹಯೋಗದಲ್ಲಿ ಏರ್ಪಡಿಸಲಾದ 4 ದಿನಗಳ ಬೃಹತ್ ಹಲಸು ಮತ್ತು ಹಣ್ಣಿನ ಮೇಳಕ್ಕೆ ಹಿರಿಯ ಮುಖಂಡ ಎಂ.ಆರ್. ನಾಯ್ಕ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಇಂತಹ ಮೇಳಗಳಿಂದ ಸ್ಥಳೀಯ ಹಾಗೂ ದೂರದ ವ್ಯಾಪಾರಿಗಳು ಮತ್ತು ರೈತರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅನುಕೂಲವಾಗಿದೆ. ಮೇಳದಲ್ಲಿನ ಬಹುತೇಕ ಉತ್ಪನ್ನಗಳು ಸ್ವದೇಶಿಯಾಗಿದ್ದು, ಆಹಾರ ಪದಾರ್ಥಗಳ ಜೊತೆಗೆ ಆರೋಗ್ಯ ವೃದ್ಧಿ ಹಾಗೂ ರಕ್ಷಣೆಗೆ ಸಂಬಂಧಿಸಿದ ಪೂರಕ ಉಪಕರಣಗಳ ಮಳಿಗೆಗಳೂ ಇವೆ. ದಾವಣಗೆರೆ, ರಾಮನಗರದಂತಹ ದೂರದ ಪ್ರದೇಶಗಳಿಂದಲೂ ವ್ಯಾಪಾರಿಗಳು ಆಗಮಿಸಿರುವುದು ವಿಶೇಷ. ಇಂತಹ ಮೇಳದ ಸದುಪಯೋಗವನ್ನು ಸಾರ್ವಜನಿಕರು ಪಡೆಯಬೇಕು ಎಂದರು.

ರಂಜನ್ ಇಂಡೇನ್ ಮಾಲಕಿ ಶಿವಾನಿ ಶಾಂತಾರಾಮ ಮಾತನಾಡಿ, ಕಳೆದ ಬಾರಿ ಮೂರು ದಿನಗಳ ಕಾಲ ಮೇಳ ಆಯೋಜಿಸಲಾಗಿದ್ದು ಗ್ರಾಹಕರಿಗೆ ಸ್ವಲ್ಪ ಗೊಂದಲ ಉಂಟಾಗಿತ್ತು. ಈ ಹಿನ್ನೆಲೆ ಈ ಬಾರಿ ನಾಲ್ಕು ದಿನಗಳ ಕಾಲ ಮೇಳ ನಡೆಸಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವ ನಿರೀಕ್ಷೆಯಿದ್ದು, ಅಗತ್ಯ ವ್ಯವಸ್ಥೆ ಮಾಡಲಾಗಿದೆ ಎಂದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ ನಾಯ್ಕ ಹಲಸಿನ ಹಣ್ಣಿನ ವಿಶೇಷತೆ ಹಾಗೂ ನಿತ್ಯ ಜೀವನದಲ್ಲಿ ಹಲಸಿನ ಮರದ ಮಹತ್ವದ ಕುರಿತು ವಿವರಿಸಿದರು. ಸ್ಪಂದನ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಾಘವೇಂದ್ರ ನಾಯ್ಕ ಮಾತನಾಡಿ, ಕಳೆದ ವರ್ಷ ಆರಂಭವಾದ ಹಲಸು ಮೇಳಕ್ಕೆ ಭಟ್ಕಳದ ಜನರು ಉತ್ತಮ ಸ್ಪಂದನೆ ನೀಡಿದ್ದರು. ಈ ಬಾರಿ ಪುದುಚೇರಿಯಿಂದಲೂ ವ್ಯಾಪಾರಿಗಳು ಭಾಗವಹಿಸಿರುವುದು ಮೇಳದ ವಿಶೇಷತೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸ್ಥಳೀಯ ವ್ಯಾಪಾರಿಗಳು ಭಾಗವಹಿಸುವಂತಾಗಬೇಕು ಎಂದು ಆಶಿಸಿದರು.ಪತ್ರಕರ್ತ ಈಶ್ವರ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಮೇಳದ ರೂವಾರಿ ಗಣೇಶ್ ಶೆಟ್ಟಿ, ಬೆನಕ ಇವೆಂಟ್ಸನ ವ್ಯವಸ್ಥಾಪಕ ಭಾಸ್ಕರ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಖಾದಿ ಉತ್ಪನ್ನಗಳು, ಚೆನ್ನಪಟ್ಟಣ ಆಟಿಕೆಗಳು, ಗೃಹೋಪಯೋಗಿ ವಸ್ತುಗಳು, ವಿವಿಧ ತಳಿಯ ಹಲಸುಗಳು, ಆಯುರ್ವೇದ ಗಿಡಮೂಲಿಕೆಗಳು, ತಂಪು ಪಾನೀಯಗಳು, ಕೃಷಿ ಹೂವಿನ ಹಾಗೂ ಹಣ್ಣಿನ ಗಿಡಗಳು, ವಿದ್ವಾಂಸರ ಭಾವಚಿತ್ರಗಳು ಹಾಗೂ ಹಲಸಿನ ವಿವಿಧ ಖಾದ್ಯಗಳು ಮೇಳದ ಪ್ರಮುಖ ಆಕರ್ಷಣೆಯಾಗಿದ್ದವು. ಮೊದಲ ದಿನವೇ ಜನರು ಮೇಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಮಗಿಷ್ಟವಾದ ವಸ್ತು ಖರೀದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಮರಗಳ ಕಡಿತ: ಪ್ರಕರಣ ದಾಖಲು
ಶನೈಶ್ಚರ ದೇವರ ಪ್ರತಿಮೆಗೆ ತೈಲಾಭಿಷೇಕ