10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ: ನಾಲ್ವರು ಸಿಡಿಲಿಗೆ ಬಲಿ

KannadaprabhaNewsNetwork | Published : Jun 6, 2024 12:31 AM

ಸಾರಾಂಶ

ರಾಜ್ಯದ ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಅದರಲ್ಲೂ ಉತ್ತರ ಕರ್ನಾಟಕದ ಕೆಲವೆಡೆ ಮಂಗಳವಾರ ರಾತ್ರಿಯಿಂದೀಚೆಗೆ ಉತ್ತಮ ಮಳೆಯಾಗಿದೆ. ಮಳೆ ಸಂಬಂಧಿ ಅನಾಹುತಕ್ಕೆ ಹಾಸನದಲ್ಲಿ ಇಬ್ಬರು ಮಹಿಳೆಯರು ಸೇರಿ ನಾಲ್ವರು ಬಲಿಯಾಗಿದ್ದಾರೆ.

- ಚಿತ್ರದುರ್ಗದಲ್ಲಿ ಉತ್ತಮ ಮಳೆ, ಕರಾವಳಿಯಲ್ಲಿ 5 ದಿನ ಭಾರೀ ಮಳೆ ನಿರೀಕ್ಷೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದ ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಅದರಲ್ಲೂ ಉತ್ತರ ಕರ್ನಾಟಕದ ಕೆಲವೆಡೆ ಮಂಗಳವಾರ ರಾತ್ರಿಯಿಂದೀಚೆಗೆ ಉತ್ತಮ ಮಳೆಯಾಗಿದೆ. ಮಳೆ ಸಂಬಂಧಿ ಅನಾಹುತಕ್ಕೆ ಹಾಸನದಲ್ಲಿ ಇಬ್ಬರು ಮಹಿಳೆಯರು ಸೇರಿ ನಾಲ್ವರು ಬಲಿಯಾಗಿದ್ದಾರೆ.

ಬಾಗಲಕೋಟೆ, ಕಲಬುರಗಿ, ಬೆಳಗಾವಿ, ಚಿತ್ರದುರ್ಗ, ಹಾವೇರಿ, ಮೈಸೂರು, ಬೆಂಗಳೂರು, ಉಡುಪಿ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕೆಲಕಾಲ ಉತ್ತಮ ಮಳೆಯಾಗಿದೆ. ಚಿತ್ರದುರ್ಗ ಮತ್ತು ಹಾವೇರಿಯಲ್ಲಿ ಮಂಗಳವಾರ ರಾತ್ರಿಯಿಂದಲೇ ಉತ್ತಮ ಮಳೆಯಾಗಿದ್ದು, ಕೆಲ ಹಳ್ಳಕೊಳ್ಳಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.

ಹಾಸನದಲ್ಲಿ ಕೆಲಕಾಲ ಉತ್ತಮ ಮಳೆಯಾಗಿದ್ದು, ಅರಕಲಗೂಡು ತಾಲೂಕಿನ ದೊಡ್ಡಮಗ್ಗೆ ಗ್ರಾಮದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಧ್ಯಾವಮ್ಮ (50) ಮತ್ತು ಪುಟ್ಟಮ್ಮ (50) ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಮೂವರಿಗೆ ಗಂಭೀರ ಗಾಯಗಳಾಗಿವೆ.

ಇನ್ನು ವಿಜಯಪುರ ಜಿಲ್ಲೆಯ ಕೊಟ್ಟೂರು ತಾಲೂಕಿನ ದೂಪದಹಳ್ಳಿಯಲ್ಲಿ ಕುರಿ ಕಾಯುತ್ತಿದ್ದ ಡಾಬಗಲ್ ಮದ್ದಾನಿ (೧೫) ಹಾಗೂ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಿಕಿ ಗ್ರಾಮದಲ್ಲಿ ಕುರಿಗಳೊಂದಿಗೆ ಮರದ ಕೆಳಗೆ ನಿಂತಿದ್ದ ಅಮೋಘ ಶಿವನಿಂಗ ಶಿವಣಗಿ(40) ಸಿಡಿಲಿಗೆ ಸ್ಥಳದಲ್ಲೇ ಬಲಿಯಾಗಿದ್ದಾರೆ. ಘಟನೆಯಲ್ಲಿ 20ಕ್ಕೂ ಹೆಚ್ಚು ಕುರಿಗಳೂ ಮೃತಪಟ್ಟಿವೆ.

ಚಿತ್ರದುರ್ಗದಲ್ಲಿ ಸಿಡಿಲಬ್ಬರದೊಂದಿಗೆ ಉತ್ತಮ ಮಳೆಯಾಗಿದ್ದು, ಕೆಲವೆಡೆ ಮನೆಗಳು ಕುಸಿದ ವರದಿಗಳಾಗಿವೆ. ಚಳ್ಳಕೆರೆ-ನನ್ನಿವಾಳ ಸಂಪರ್ಕ ಕಲ್ಪಿಸುವ ಗರ‍್ಲಕಟ್ಟೆ ಬಳಿ ಹಳ್ಳದ ನೀರು ನದಿಯಂತೆ ರಭಸದಿಂದ ಹರಿದ ಪರಿಣಾಮ ಕೆಲಹೊತ್ತು ವಾಹನ ಸಂಚಾರ ಸ್ಥಗಿತವಾಗಿತ್ತು. ನಗರದ ಚಿತ್ರದುರ್ಗ ರಸ್ತೆಯ ಬಿಇಒ ಕಚೇರಿ ಎದುರಿನಲ್ಲಿ ಬಿಎಂಜಿಎಚ್‌ಎಸ್ ಹಾಗೂ ಎಚ್‌ಟಿಟಿ ಶಾಲೆಯ ಮೂಲಕ ಹರಿದ ನೀರು ನದಿಯೋಪಾದಿಯಲ್ಲಿ ರಸ್ತೆಯಲ್ಲೇ ನಿಂತು ಸಣ್ಣವ್ಯಾಪಾರಿಗಳಿಗೆ ಕೆಲಕಾಲ ಸಮಸ್ಯೆ ಆಗಿತ್ತು.

ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 5 ದಿನಗಳ ಕಾಲ ಭಾರೀ ಮಳೆಯಾಗುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Share this article