ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆಯಿಂದ ತೆರವಾಗಿರುವ ರಾಜ್ಯ ಸಚಿವ ಸಂಪುಟ ಸೇರಲು ಶಾಸಕರು, ವಿಧಾನಪರಿಷತ್ ಸದಸ್ಯರು ಶುಕ್ರವಾರವಿಡೀ ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಮುಂದೆ ಪರೇಡ್ ನಡೆಸಿದರು.
ಯಾರ್‍ಯಾರಿಂದ ಲಾಬಿ?
- ಶಿವಲಿಂಗೇಗೌಡ, ನಾರಾಯಣಸ್ವಾಮಿ, ಅಜಯ್ ಸಿಂಗ್, ಬೇಳೂರು, ಟಿ.ಬಿ.ಜಯಚಂದ್ರ, ಶ್ರೀನಿವಾಸ ಮಾನೆ, ರಿಜ್ವಾನ್ ಅರ್ಷದ್, ಯಾಸಿರ್ ಖಾನ್ ಪಠಾಣ್ ಸೇರಿ 30ಕ್ಕೂ ಹೆಚ್ಚಿನ ಶಾಸಕರಿಂದ ಕಾಂಗ್ರೆಸ್ ನಾಯಕರ ಭೇಟಿ
- ಸಲೀಂ ಅಹಮದ್, ಪುಟ್ಟಣ್ಣ ಸೇರಿ 10ಕ್ಕೂ ಹೆಚ್ಚಿನ ಎಂಎಲ್ಸಿಗಳಿಂದಲೂ ದಿಲ್ಲಿಯಲ್ಲಿ ಲಾಬಿ
- ಡಿಕೆಶಿ ಜತೆಗೆ ದೆಹಲಿಗೆ ತೆರಳಿರುವ ಶಾಸಕ ಹ್ಯಾರಿಸ್‌ರಿಂದಲೂ ಸಚಿವ ಸ್ಥಾನಕ್ಕಾಗಿ ಮನವಿ
- ಪ್ರಿಯಾಂಕ್ ಖರ್ಗೆ, ಬಿ.ಎಸ್.ಸುರೇಶ್, ಎಂ.ಬಿ.ಪಾಟೀಲ್ ಅವರಿಂದ ಸಚಿವ ಸ್ಥಾನದಲ್ಲಿ ಮುಂದುವರಿಸಲು ಕೋರಿಕೆ
ಕನ್ನಡಪ್ರಭ ವಾರ್ತೆ ಬೆಂಗಳೂರು
ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆಯಿಂದ ತೆರವಾಗಿರುವ ರಾಜ್ಯ ಸಚಿವ ಸಂಪುಟ ಸೇರಲು ಶಾಸಕರು, ವಿಧಾನಪರಿಷತ್ ಸದಸ್ಯರು ಶುಕ್ರವಾರವಿಡೀ ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಮುಂದೆ ಪರೇಡ್ ನಡೆಸಿದರು.
ರಾಜ್ಯದ ನೂತನ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಶನಿವಾರ ಅಂತಿಮಗೊಳ್ಳಲಿದೆ. ಅದರ ಜತೆಗೆ ನೂತನ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಸಚಿವ ಸಂಪುಟಕ್ಕೆ ಸೇರ್ಪಡೆಯಾಗುವವರ ಪಟ್ಟಿಯೂ ಸಿದ್ಧಗೊಳ್ಳಲಿದೆ. ಹೀಗೆ ಸಿದ್ಧವಾಗುವ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆ ಮಾಡಲು ಶುಕ್ರವಾರ 40ಕ್ಕೂ ಹೆಚ್ಚಿನ ಶಾಸಕರು, ವಿಧಾನಪರಿಷತ್ ಸದಸ್ಯರು ದೆಹಲಿಯಲ್ಲಿ ಕಸರತ್ತು ನಡೆಸಿದರು. ತಾವು ಸಚಿವರಾಗಿ ನೇಮಕವಾಗಲು ಇರುವ ಕಾರಣಗಳನ್ನು ಹೈಕಮಾಂಡ್ ನಾಯಕರ ಮುಂದಿಟ್ಟಿರುವ ಶಾಸಕರು, ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಟ್ಟರು.
ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಸಾಧ್ಯತೆಯಿರುವ ಡಿ.ಕೆ.ಶಿವಕುಮಾರ್ ಅವರು ಗುರುವಾರ ರಾತ್ರಿಯೇ ದೆಹಲಿಗೆ ತೆರಳಿದ್ದು, ಅವರೊಂದಿಗೆ ಶಾಸಕ ಎನ್.ಎ.ಹ್ಯಾರೀಸ್ ಸೇರಿ ಇನ್ನಿತರರೂ ದೆಹಲಿಗೆ ಹೋಗಿದ್ದರು. ಅವರೂ ಶುಕ್ರವಾರ ಸಚಿವ ಸ್ಥಾನಕ್ಕಾಗಿ ಹೈಕಮಾಂಡ್ ನಾಯಕರಲ್ಲಿ ಮನವಿ ಮಾಡಿದ್ದಾರೆ.
ಅದರೊಂದಿಗೆ ಶಾಸಕರಾದ ಶಿವಲಿಂಗೇಗೌಡ, ನಾರಾಯಣಸ್ವಾಮಿ, ಅಜಯ್ ಸಿಂಗ್, ಬೇಳೂರು ಗೋಪಾಲಕೃಷ್ಣ, ಟಿ.ಬಿ. ಜಯಚಂದ್ರ, ಶ್ರೀನಿವಾಸ ಮಾನೆ, ರಿಜ್ವಾನ್ ಅರ್ಷದ್, ಯಾಸಿರ್ ಖಾನ್ ಪಠಾಣ್ ಸೇರಿ 30ಕ್ಕೂ ಹೆಚ್ಚಿನ ಶಾಸಕರು, ಸಲೀಂ ಅಹಮದ್, ಪುಟ್ಟಣ್ಣ ಸೇರಿ 10ಕ್ಕೂ ಹೆಚ್ಚಿನ ವಿಧಾನಪರಿಷತ್ ಸದಸ್ಯರು ಶುಕ್ರವಾರ ದೆಹಲಿಯಲ್ಲಿ ಬೀಡು ಬಿಟ್ಟಿದ್ದರು. ಈ ಎಲ್ಲ ಶಾಸಕರು, ವಿಧಾನಪರಿಷತ್ ಸದಸ್ಯರು ಹೈಕಮಾಂಡ್ ನಾಯಕರ ಜತೆಗೆ ಡಿ.ಕೆ.ಶಿವಕುಮಾರ್ ಅವರ ಮುಂದೆಯೂ ಸಚಿವ ಸ್ಥಾನದ ಇಂಗಿತ ವ್ಯಕ್ತಪಡಿಸಿದರು.
ಉಳಿದಂತೆ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರು ಶುಕ್ರವಾರ ತಮ್ಮ ತಂದೆಯೊಂದಿಗೆ ಓಡಾಡಿದರು. ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿ ಇನ್ನಿತರ ಹೈಕಮಾಂಡ್ ನಾಯಕರನ್ನು ಭೇಟಿಯಾದಾಗಲೂ ಯತೀಂದ್ರ ಜತೆಗಿದ್ದರು. ಆ ಮೂಲಕ ನೂತನ ಸಚಿವ ಸಂಪುಟದಲ್ಲಿ ಅವಕಾಶಕ್ಕಾಗಿ ಸಿದ್ದರಾಮಯ್ಯ ಮೂಲಕ ಮನವಿ ಮಾಡಿಕೊಂಡರು.
ಹಾಲಿ ಸಚಿವರೂ ದೌಡು:
ಸಚಿವ ಸ್ಥಾನಕ್ಕಾಗಿ ಶಾಸಕರಷ್ಟೇ ಅಲ್ಲದೆ ಹಾಲಿ ಸಚಿವ ಸ್ಥಾನದಲ್ಲಿದ್ದವರೂ ಲಾಬಿ ನಡೆಸಿದರು. ಪ್ರಿಯಾಂಕ್ ಖರ್ಗೆ, ಬಿ.ಎಸ್. ಸುರೇಶ್, ಎಂ.ಬಿ.ಪಾಟೀಲ್ ಸೇರಿ ಇನ್ನಿತರರು ಶುಕ್ರವಾರ ಬೆಳಗ್ಗೆ ದೆಹಲಿಗೆ ತೆರಳಿ ಸಚಿವ ಸ್ಥಾನದಲ್ಲಿ ಮುಂದುವರಿಸುವಂತೆ ಕೋರಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.