ಕುಕನೂರು : ತಾಲೂಕಿನ ಕೋನಾಪೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಅಂಗಳದಲ್ಲಿ ಬೆಳೆದ ಅಡವಿ ಔಡಲ ಕಾಯಿಯನ್ನು ತಿಂದು ಶಾಲೆಯ 3 ಮತ್ತು 4ನೇ ತರಗತಿಯ 42 ಮಕ್ಕಳು ಅಸ್ವಸ್ಥರಾದ ಘಟನೆ ಶನಿವಾರ ಜರುಗಿದೆ.
ಶಾಲೆ ಬಿಡುವ ವೇಳೆ ಮಕ್ಕಳು ಶಾಲೆ ಆವರಣದಲ್ಲಿ ಬೆಳೆದಿದ್ದ ಅಡವಿ ಔಡಲ ಕಾಯಿಯನ್ನು ತಿಂದಿದ್ದಾರೆ. ಇದರಿಂದ ಮಕ್ಕಳಿಗೆ ಆರೋಗ್ಯದಲ್ಲಿ ವ್ಯತ್ಯಾಸ ಆಗಿದೆ. ಶಾಲೆ ಬಿಟ್ಟ ನಂತರ ಮಕ್ಕಳು ಮನೆಗೆ ತೆರಳಿದ್ದಾರೆ. ಸಂಜೆ ವೇಳೆ ಮಕ್ಕಳಲ್ಲಿ ವಾಂತಿ ಭೇದಿ ಕಂಡು ಬಂದಿದೆ. ಸುಮಾರು 35ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿದ್ದು, ಪಾಲಕರು ಮಕ್ಕಳೊಂದಿಗೆ ಆಸ್ಪತ್ರೆಗೆ ಬಂದಿದ್ದಾರೆ. ಪಾಲಕರು ಶಾಲೆ ಶಿಕ್ಷಕರಿಗೆ ವಿಷಯ ತಿಳಿಸಿದಾಗ ಶಾಲೆ ಅಂಗಳದಲ್ಲಿ ಬೆಳೆದ ಅಡವಿ ಔಡಲ ಕಾಯಿಯನ್ನು ತಿಂದಿರುವ ಮಾಹಿತಿ ತಿಳಿದು ಬಂದಿದೆ.
ಕೊಠಡಿಯೊಂದರಲ್ಲಿ ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದೆ. ಕೆಲವು ಮಕ್ಕಳಲ್ಲಿ ವಾಂತಿ, ಭೇದಿ ಕಂಡು ಬಂದಿದೆ. ಅದೃಷ್ಟವಶಾತ್ ಯಾವುದೇ ರೀತಿಯ ಜೀವಕ್ಕೆ ಅಪಾಯವಾಗಿಲ್ಲ ಎಂದು ವೈದ್ಯಾಧಿಕಾರಿ ಮಂಜುನಾಥ ಬ್ಯಾಲಹುಣಸಿ ಮಾಹಿತಿ ನೀಡಿದ್ದಾರೆ.
ಆಸ್ಪತ್ರೆಯಲ್ಲಿ ದಾಖಲಾದ ಮಕ್ಕಳನ್ನು ವಿಚಾರಿಸಿದಾಗ ಶಾಲೆ ಆವರಣದಲ್ಲಿ ಬೆಳೆದ ಕಾಯಿ ತಿಂದಿದ್ದೇವೆ, ಮನೆಗೆ ಹೋದ ತಕ್ಷಣ ವಾಂತಿ, ಭೇದಿ ಆರಂಭವಾಯಿತು ಎಂದರು.
ಪಾಲಕರ ಆಕ್ರೋಶ:
ಶಾಲೆ ಆವರಣದಲ್ಲಿ ಒಬ್ಬರಲ್ಲ, ಇಬ್ಬರಲ್ಲ, ಬರೋಬ್ಬರಿ 35 ಮಕ್ಕಳು ಅಡವಿ ಔಡಲ ಕಾಯಿ ತಿಂದಿದ್ದಾರೆ. ಶಿಕ್ಷಕರಾದವರು ಮಕ್ಕಳ ಚಲನ ವಲನ ಬಗ್ಗೆ ಕಾಳಜಿ ವಹಿಸಬೇಕಿತ್ತು. ಆದರೆ ಶಿಕ್ಷಕರು ಮಕ್ಕಳ ಬಗ್ಗೆ ನಿಷ್ಕಾಳಜಿ ವಹಿಸಿದ್ದು ಕಂಡು ಬರುತ್ತಿದೆ ಎಂದು ಪಾಲಕರು ಶಾಲೆ ಶಿಕ್ಷಕರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.ಕೋನಾಪೂರ ಶಾಲೆಯ ಮಕ್ಕಳು ಶಾಲೆ ಆವರಣದಲ್ಲಿ ಬೆಳೆದ ಕಾಯಿ ತಿಂದು ಅಸ್ವಸ್ಥರಾಗಿದ್ದು, ಯಾವುದೇ ರೀತಿಯ ತೊಂದರೆ ಇಲ್ಲ. ಮಕ್ಕಳ ಆರೋಗ್ಯ ಸುಧಾರಣೆ ಬಗ್ಗೆ ಕಾಳಜಿ ವಹಿಸಿದ್ದೇವೆ. ಹೆಚ್ಚುವರಿ ಮಕ್ಕಳ ವೈದ್ಯರನ್ನು ಸಹ ಸ್ಥಳದಲ್ಲಿ ನೇಮಿಸಿದ್ದೇವೆ. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ತೆಗೆದುಕೊಳ್ಳಲಾಗಿದೆ ಎಂದು ಡಿಎಚ್‌ಓ ಲಿಂಗರಾಜ ತಿಳಿಸಿದ್ದಾರೆ.