ನವೆಂಬರ್‌ 29ರಂದು ಬಡವರಿಗೆ 4200 ಮನೆ ವಿತರಣೆ

KannadaprabhaNewsNetwork |  
Published : Nov 03, 2025, 02:15 AM IST
2ಎಚ್‌ಯುಬಿ28ಸಚಿವ ಜಮೀರ್ ಅಹ್ಮದ್ ಅವರು ಮನೆ ವಿತರಣಾ ಸ್ಥಳ ಪರಿಶೀಲಿಸಿದರು. | Kannada Prabha

ಸಾರಾಂಶ

ಒಟ್ಟು ಮೂರು ಹಂತದಲ್ಲಿ ಮನೆ ವಿತರಿಸುತ್ತಿದ್ದು, ಈಗಾಗಲೇ ಮೊದಲ ಹಂತದಲ್ಲಿ 30,789, ಇದೀಗ 42,345, ಮೂರನೇ ಹಂತದಲ್ಲಿ 30,000 ಮನೆ ವಿತರಿಸಲಾಗುವುದು ಎಂದಿರುವ ಸಚಿವ ಜಮೀರ ಅಹಮದ್‌, ಕೊಳಚೆ ಪ್ರದೇಶದ ಹಕ್ಕುಪತ್ರಗಳನ್ನೂ ಸರ್ಕಾರ ನೀಡುತ್ತಿದೆ ಎಂದು ಹೇಳಿದರು.

ಹುಬ್ಬಳ್ಳಿ:

ನವೆಂಬರ್ 29ರಂದು ಹುಬ್ಬಳ್ಳಿಯಲ್ಲಿ ರಾಜ್ಯದ ಬಡವರಿಗೆ 42,345 ಮನೆ ವಿತರಿಸುವ ಕಾರ್ಯಕ್ರಮ ಇಟ್ಟುಕೊಂಡಿದ್ದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸೇರಿದಂತೆ ಪಕ್ಷದ ನಾಯಕರು ಭಾಗವಹಿಸಲಿದ್ದಾರೆ ಎಂದು ಸಚಿವ ಜಮೀರ್‌ ಅಹ್ಮದ್‌ ಹೇಳಿದರು.

ನಗರದಲ್ಲಿ ಭಾನುವಾರ ಆಶ್ರಯ ಮನೆಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂದು ನಡೆಯುವ ಕಾರ್ಯಕ್ರಮದಲ್ಲಿ ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಿಂದ ನಾಲ್ಕು ಲಕ್ಷ ಜನರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಒಟ್ಟು ಮೂರು ಹಂತದಲ್ಲಿ ಮನೆ ವಿತರಿಸುತ್ತಿದ್ದು, ಈಗಾಗಲೇ ಮೊದಲ ಹಂತದಲ್ಲಿ 30,789, ಇದೀಗ 42,345, ಮೂರನೇ ಹಂತದಲ್ಲಿ 30,000 ಮನೆ ವಿತರಿಸಲಾಗುವುದು ಎಂದ ಅವರು, ಕೊಳಚೆ ಪ್ರದೇಶದ ಹಕ್ಕುಪತ್ರಗಳನ್ನೂ ಸರ್ಕಾರ ನೀಡುತ್ತಿದೆ ಎಂದರು.

6ನೇ ಗ್ಯಾರಂಟಿ:

ಮನೆ ವಿತರಣೆ ಆರನೇ ಗ್ಯಾರಂಟಿಯಾಗಿದೆ. ನಾವು ಚುನಾವಣೆ ಸಮಯದಲ್ಲಿ ಮನೆ ಕೊಡುವ ಭರವಸೆ ನೀಡಿರಲಿಲ್ಲ. ಆದರೂ ಬಡವರಿಗೆ ಅನುಕೂಲ ಆಗಲಿ ಎನ್ನುವ ಉದ್ದೇಶದಿಂದ ಆಶ್ರಯ ಮನೆ ವಿತರಿಸಲಾಗುತ್ತಿದೆ. ಬಿಜೆಪಿ ಮತ್ತು ಜೆಡಿಎಸ್ ಅಧಿಕಾರದಲ್ಲಿದ್ದಾಗ ಒಂದೇ ಒಂದು ಮನೆ ನೀಡಲಿಲ್ಲ. ಆಗ ಗ್ಯಾರಂಟಿ ಸ್ಕೀಮ್‌ಗಳೂ ಜಾರಿ ಇರಲಿಲ್ಲ ಎಂದು ಕುಟುಕಿದರು.

ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ದಿವಾಳಿ ಆಗುತ್ತದೆ ಎಂದು ಬಿಜೆಪಿಗರು ಆರೋಪಿಸಿದ್ದರು. ಅವರು ಅಂದುಕೊಂಡತೆ ಆಗಿದ್ದರೆ ಮುಖ್ಯಮಂತ್ರಿಗಳು ಆಶ್ರಯ ಮನೆಗಳ ನಿರ್ಮಾಣಕ್ಕೆ ₹9500 ಕೋಟಿ ಕೊಡಲು ಒಪ್ಪಿಕೊಳ್ಳುತ್ತಿದ್ದಾರಾ? ಎಂದು ಪ್ರಶ್ನಿಸಿದರು.

ಎಚ್‌.ಡಿ. ಕುಮಾರಸ್ವಾಮಿ ಅವರು ಒಂದೂವರೆ ವರ್ಷ, ಯಡಿಯೂರಪ್ಪ ಅವರು ಎರಡೂವರೆ ವರ್ಷ, ಬಸವರಾಜ ಬೊಮ್ಮಾಯಿ ಎರಡೂವರೆ ವರ್ಷ ಮುಖ್ಯಮಂತ್ರಿ ಆಗಿದ್ದರೂ ಮನೆ ಕೊಡಲಿಲ್ಲ. ವಿ. ಸೋಮಣ್ಣ ಅವರು ಮನೆ ನಿರ್ಮಾಣಕ್ಕೆ ಅನುದಾನ ನೀಡುವಂತೆ ಮನವಿ ಮಾಡಿದರೂ ಸ್ಪಂದಿಸಲಿಲ್ಲ ಎಂದ ಅವರು, ಬಿಜೆಪಿಗರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ ಎಂದು ದೂರಿದರು.

ಈ ವೇಳೆ ಶಾಸಕರಾದ ಪ್ರಸಾದ ಅಬ್ಬಯ್ಯ, ಅಜ್ಜಂಪೀರ್ ಖಾದ್ರಿ, ಸದಾನಂದ ಡಂಗನವರ, ಅಲ್ತಾಫ್ ಹಳ್ಳೂರ, ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಪೊಲೀಸ್ ಆಯುಕ್ತ ಎನ್‌. ಶಶಿಕುಮಾರ, ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

17 ಎಕರೆ ಜಾಗದಲ್ಲಿ ಕಾರ್ಯಕ್ರಮ

ನ. 29ರಂದು ಹುಬ್ಬಳ್ಳಿಯ ಮಂಟೂರು ರಸ್ತೆಯಲ್ಲಿ 17 ಎಕರೆ ಪ್ರದೇಶದಲ್ಲಿ ಬೃಹತ್‌ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. 15ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಗೆ ಭೇಟಿ ನೀಡಲಿದ್ದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆಹ್ವಾನ ನೀಡಲಿದ್ದೇವೆ. ಈಗಾಗಲೇ ರಾಹುಲ್ ಗಾಂಧಿ ಅವರನ್ನು ಆಹ್ವಾನಿಸಲಾಗಿದೆ ಎಂದು ಸಚಿವ ಜಮೀರ್‌ ಅಹಮದ್‌ ತಿಳಿಸಿದರು.

PREV

Recommended Stories

2028ರ ವರೆಗೂ ಸಿದ್ದರಾಮಯ್ಯ ಸಿಎಂ : ಸಚಿವ ಜಮೀರ್ ಅಹ್ಮದ್
ನಾವು ಆರೆಸ್ಸೆಸ್‌ ಗುಲಾಮರಲ್ಲ : ಪ್ರಿಯಾಂಕ್‌ ಖರ್ಗೆ