ಸಾಗರ: ಕರ್ನಾಟಕವು ಸಾಹಿತ್ಯ, ಸಾಂಸ್ಕೃತಿಕ ಹಾಗೂ ಸೌಜನ್ಯತೆಯ ನೆಲವೀಡಾಗಿದ್ದು, ಕನ್ನಡಿಗರು ಎಲ್ಲಾ ಕ್ಷೇತ್ರಗಳಲ್ಲೂ ಅದ್ವಿತೀಯ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಉಪವಿಭಾಗಾಧಿಕಾರಿ ವೀರೇಶ್ ಕುಮಾರ್ ಅಭಿಪ್ರಾಯಪಟ್ಟರು.ಪಟ್ಟಣದ ನೆಹರೂ ಮೈದಾನದಲ್ಲಿ ಶನಿವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೭೦ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ನಮ್ಮಲ್ಲಿ ಕನ್ನಡಿಗರೆಂಬ ಹೆಮ್ಮೆ ಸದಾ ಇರಬೇಕು. ನಾಡುನುಡಿ ಅಸ್ತಿತ್ವವನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಕನ್ನಡಿಗ ಕಟಿಬದ್ಧರಾಗಿರಬೇಕು. ರಾಜ್ಯ ಸರ್ಕಾರ ಕನ್ನಡ ಭಾಷೆ ಬೆಳವಣಿಗೆಗೆ ವಿಶೇಷ ಆದ್ಯತೆ ನೀಡುತ್ತಿದೆ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಗೋಪಾಲಕೃಷ್ಣ ಬೇಳೂರು, ಕನ್ನಡ ಭಾಷೆ ಅತ್ಯಂತ ಸುಂದರ ಭಾಷೆಯಾಗಿದ್ದು, ಡಾ.ರಾಜಕುಮಾರ್ ನೇತೃತ್ವದಲ್ಲಿ ನಡೆದ ಗೋಕಾಕ ಚಳವಳಿ ನಂತರ ಕನ್ನಡ ನಾಡು ಅತ್ಯಂತ ಸದೃಢವಾಗಿದೆ. ತಾಲೂಕಿನ ಜಾನಪದ ಕಲಾವಿದ ಬಿ.ಟಾಕಪ್ಪ ಸೇರಿ ಜಿಲ್ಲೆಯ ಮೂವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದು, ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್ ಮಾತನಾಡಿದರು. ಉಪಾಧ್ಯಕ್ಷೆ ಸವಿತಾ ವಾಸು, ತಹಸೀಲ್ದಾರ್ ರಶ್ಮಿ, ಪೌರಾಯುಕ್ತ ಎಚ್.ಕೆ.ನಾಗಪ್ಪ, ಕಾರ್ಯನಿರ್ವಹಣಾಧಿಕಾರಿ ಶಿವಪ್ರಕಾಶ್.ಬಿ.ಎಲ್, ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ, ಎಎಸ್ಪಿ ಡಾ.ಬೆನಕ ಪ್ರಸಾದ್ ಇನ್ನಿತರರು ಹಾಜರಿದ್ದರು.ಕನ್ನಡಿಗರು ಒಗ್ಗಟ್ಟಾಗಿರಬೇಕು: ಬೇಳೂರುಕನ್ನಡ ನಾಡುನುಡಿ ವಿಷಯ ಬಂದಾಗ ನಾವೆಲ್ಲಾ ಒಗ್ಗಟ್ಟಿನ ಧ್ವನಿ ಮೊಳಗಿಸಬೇಕು. ಕನ್ನಡ ನಾಡಿನ ಒಂದಿಂಚು ಭೂಮಿ ಅನ್ಯರಾಜ್ಯಗಳಿಗೆ ಬಿಟ್ಟುಕೊಡುವ ಪ್ರಶ್ನೆಯೆ ಇಲ್ಲ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.ಪಟ್ಟಣದ ಕೆಳದಿ ರಾಣಿ ಚೆನ್ನಮ್ಮಾಜಿ ವೃತ್ತದಲ್ಲಿ ಕೆಳದಿಯಿಂದ ಬಂದ ವಿದ್ಯಾರಣ್ಯ ಜ್ಯೋತಿಯನ್ನು ಸ್ವಾಗತಿಸಿ ಮಾತನಾಡಿದ ಅವರು, ಕಾಸರಗೋಡು, ಬೆಂಗಳೂರಿನ ಹೊಸೂರು, ಬೆಳಗಾವಿ ಭಾಗದಲ್ಲಿ ಕರ್ನಾಟಕ ಗಡಿಯಲ್ಲಿ ಸದಾ ತಕರಾರು ತೆಗೆದು ಕನ್ನಡಿಗರ ತಾಳ್ಮೆ ಪರೀಕ್ಷೆ ಮಾಡುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಕನ್ನಡದ ವಿಷಯ ಬಂದಾಗ ನಾವೆಲ್ಲರೂ ಕಟ್ಟೆಚ್ಚರದಿಂದ ಇರಬೇಕು ಎಂದರು.ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ವಿದ್ಯಾರಣ್ಯ ಯುವಕ ಸಂಘದ ಅಧ್ಯಕ್ಷ ಅಮಿತ್ ಕುಮಾರ್, ಉಪವಿಭಾಗಾಧಿಕಾರಿ ವಿರೇಶ್ ಕುಮಾರ್, ನಗರಸಭೆ ಉಪಾಧ್ಯಕ್ಷೆ ಸವಿತಾ ವಾಸು, ತಹಸೀಲ್ದಾರ್ ರಶ್ಮಿ, ಪೌರಾಯುಕ್ತ ಎಚ್.ಕೆ.ನಾಗಪ್ಪ, ಎಎಸ್ಪಿ ಡಾ.ಬೆನಕ ಪ್ರಸಾದ್ ಇನ್ನಿತರರು ಹಾಜರಿದ್ದರು.ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿದ್ಯಾರಣ್ಯ ಕನ್ನಡ ಜ್ಯೋತಿ ಮೆರವಣಿಗೆ ನಡೆಯಿತು. ವಿವಿಧ ಶಾಲೆಗಳ ಸ್ತಬ್ಧಚಿತ್ರಗಳು ಮೆರವಣಿಗೆಗೆ ಮೆರಗು ನೀಡಿತು.