ಮಲ್ಲಕಂಬ ಭಾರತದ ಪ್ರಾಚೀನ ಕ್ರೀಡೆ

KannadaprabhaNewsNetwork |  
Published : Nov 03, 2025, 02:15 AM IST
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್‌.ಕೆ.ಪಾಟೀಲ ಮಾತನಾಡಿದರು. | Kannada Prabha

ಸಾರಾಂಶ

ಮಲ್ಲಕಂಬ ನಮ್ಮ ದೇಶದ ಪ್ರಾಚೀನ ಕ್ರೀಡೆ. ಆದರೆ, ಈ ವರೆಗೆ ಈ ಕ್ರೀಡೆ ಏಷ್ಯನ್‌ ಗೇಮ್ಸ್‌ ಅಥವಾ ಒಲಿಂಪಿಕ್ಸ್‌ಗೆ ಸೇರ್ಪಡೆಯಾಗಿಲ್ಲ. ಇದಕ್ಕೆ ಸರ್ಕಾರ, ರಾಜಕಾರಣಿಗಳು ಅಥವಾ ಅಧಿಕಾರಿಗಳು ಯಾರು ಕಾರಣ ಎಂಬುದರ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

ಗದಗ:

ಮಲ್ಲಕಂಬ ಶ್ರೇಷ್ಠ ಕ್ರೀಡೆ. ಇದು ಭಾರತದ ಪ್ರಾಚೀನ ಕ್ರೀಡೆಯಾಗಿದ್ದು, ಇತ್ತೀಚಿನ ದಿನಗಳಲ್ಲಿ ವಿಶೇಷ ಮಹತ್ವ ಪಡೆದುಕೊಳ್ಳುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್‌.ಕೆ. ಪಾಟೀಲ ತಿಳಿಸಿದರು.

ನಗರದ ಕೆ.ಎಚ್‌. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಪಂ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಡೆದ ರಾಜ್ಯಮಟ್ಟದ ಮಲ್ಲಕಂಬ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯಮಟ್ಟದ ಮಲ್ಲಕಂಬ ಸ್ಪರ್ಧೆ ಜಿಲ್ಲೆಯಲ್ಲಿ ನಡೆಯುತ್ತಿರುವುದು ಸಂತಸದ ಸಂಗತಿ ಎಂದ ಅವರು, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಹಾಗೂ ಸಿಬ್ಬಂದಿ ಕ್ರೀಡಾಪಟುಗಳಿಗೆ ಎಲ್ಲ ರೀತಿಯ ಅನುಕೂಲ ಮಾಡಿಕೊಡುವ ಮೂಲಕ ಕ್ರೀಡಾಕೂಟದ ಯಶಸ್ಸಿಗೆ ನೆರವಾಗಬೇಕು ಎಂದು ತಿಳಿಸಿದರು.

ವಿಪ ಶಾಸಕ ಎಸ್‌.ವಿ. ಸಂಕನೂರ ಮಾತನಾಡಿ, ಗದಗ ಜಿಲ್ಲೆ ಕ್ರೀಡೆ, ಸಂಗೀತ ಹಾಗೂ ಸಹಕಾರ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದೆ. ಇಲ್ಲಿನ ಕ್ರೀಡಾಪಟುಗಳು ಹಾಕಿ, ಸೈಕ್ಲಿಂಗ್‌ ಹಾಗೂ ಕುಸ್ತಿ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ತರುವ ಮೂಲಕ ಜಿಲ್ಲೆಯ ಕೀರ್ತಿಯನ್ನು ದೇಶದ ಉದ್ದಗಲಕ್ಕೂ ಪಸರಿಸಿದ್ದಾರೆ ಎಂದರು.

ಮಲ್ಲಕಂಬ ನಮ್ಮ ದೇಶದ ಪ್ರಾಚೀನ ಕ್ರೀಡೆ. ಆದರೆ, ಈ ವರೆಗೆ ಈ ಕ್ರೀಡೆ ಏಷ್ಯನ್‌ ಗೇಮ್ಸ್‌ ಅಥವಾ ಒಲಿಂಪಿಕ್ಸ್‌ಗೆ ಸೇರ್ಪಡೆಯಾಗಿಲ್ಲ. ಇದಕ್ಕೆ ಸರ್ಕಾರ, ರಾಜಕಾರಣಿಗಳು ಅಥವಾ ಅಧಿಕಾರಿಗಳು ಯಾರು ಕಾರಣ ಎಂಬುದರ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.

ನರೇಂದ್ರ ಮೋದಿ ಪ್ರಧಾನಿ ಆದನಂತರ ಕ್ರೀಡೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಖೇಲೋ ಇಂಡಿಯಾ ಸ್ಥಾಪಿಸಿ, ಅದಕ್ಕೆ ಮಲ್ಲಕಂಬವನ್ನು ಜೋಡಿಸಲಾಗಿದೆ. ಆದರೂ, ದೇಶದಲ್ಲಿ ಕ್ರಿಕೆಟ್‌, ಪುಟ್‌ಬಾಲ್‌ಗಿಂತ ಬೇರೆ ಯಾವುದೇ ಕ್ರೀಡೆ ಮುನ್ನೆಲೆಗೆ ಬರದಿರುವುದು ಬೇಸರದ ವಿಷಯ ಎಂದರು.

ರಾಜ್ಯದಲ್ಲಿ 35 ಶೈಕ್ಷಣಿಕ ಜಿಲ್ಲೆಗಳಿದ್ದು, ಮಲ್ಲಕಂಬ ರಾಜ್ಯಮಟ್ಟದ ಸ್ಪರ್ಧೆಯಲ್ಲಿ 20 ಜಿಲ್ಲೆಯ ಕ್ರೀಡಾಪಟುಗಳು ಮಾತ್ರ ಭಾಗವಹಿಸಿದ್ದಾರೆ. ಅಂದರೆ, ಈ ಕ್ರೀಡೆ ಎಲ್ಲೆಡೆ ಪ್ರಚಲಿತವಿಲ್ಲ. ಹಾಗಾಗಿ, ಇದನ್ನು ಜನಪ್ರಿಯಗೊಳಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಬೇಕಿದೆ. ಸರ್ಕಾರ ಎಲ್ಲ ಹಂತದ ಶಾಲಾ-ಕಾಲೇಜುಗಳಿಗೆ ದೈಹಿಕ ಶಿಕ್ಷಣ ಶಿಕ್ಷಕರ ನೇಮಕ ಮಾಡಲು ಕ್ರಮವಹಿಸಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಸಿ.ಎನ್‌. ಶ್ರೀಧರ್‌ ಮಾತನಾಡಿ, ಮಲ್ಲಕಂಬ ಒಂದು ರೋಮಾಂಚನಕಾರಿ ಕ್ರೀಡೆ. ದೈಹಿಕ ಮತ್ತು ಮಾನಸಿಕ ಸಮತೋಲನದಿಂದ ಕೂಡಿರುವ ಈ ಕ್ರೀಡೆಯನ್ನು ಅಭ್ಯಾಸ ಮಾಡುವುದರಿಂದ ಮಕ್ಕಳಲ್ಲಿ ಆತ್ಮಸೈರ್ಯ ಮೂಡುತ್ತದೆ. ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಬೆಳೆಸುವ ಮಲ್ಲಕಂಬದಂತಹ ಕ್ರೀಡೆ ಇನ್ನೂ ಜನಪ್ರಿಯಗೊಳ್ಳಬೇಕಿದ್ದು, ಈ ನಿಟ್ಟಿನಲ್ಲಿ ಮಲ್ಲಕಂಬ ಪಠ್ಯದ ಒಂದು ಭಾಗವಾಗಬೇಕಿದೆ ಎಂದರು.

ರಾಜ್ಯಮಟ್ಟದ ಮಲ್ಲಕಂಬ ಸ್ಪರ್ಧೆಯಲ್ಲಿ 20 ಜಿಲ್ಲೆಗಳ 310 ಕ್ರೀಡಾಪಟುಗಳು ಭಾಗವಹಿಸಿದ್ದಾರೆ. ಸೋಲು-ಗೆಲುವು ಮುಖ್ಯವಲ್ಲ. ಕ್ರೀಡೆಯಲ್ಲಿ ಕ್ರೀಡಾ ಮನೋಭಾವದಿಂದ ಭಾಗವಹಿಸುವುದು ಮುಖ್ಯ ಎಂದರು.

ಈ ವೇಳೆ ಡಿಡಿಪಿಐ ಆರ್‌.ಎಸ್‌. ಬುರಡಿ ಪ್ರಾಸ್ತಾವಿಕ ಮಾತನಾಡಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಬಳ್ಳಾರಿ, ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಫ್‌. ಪೂಜಾರ, ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಎಂ.ಕೆ. ಲಮಾಣಿ, ಕೊಡ್ಲಿ, ಪ್ರಕಾಶ ಮ್ಯಾಗೇರಿ, ಸಿ.ಕೆ. ಚೆನ್ನಾಳ, ಶರಣು ಗೊಗೇರಿ, ಎಸ್.ಎನ್. ಬಳ್ಳಾರಿ, ಎಂ.ಕೆ. ಲಮಾಣಿ ಇದ್ದರು. ಎಂ.ಎ. ಯರಗುಡಿ ನಿರೂಪಿಸಿದರು. ಬಿಇಒ ವಿ.ವಿ. ನಡುವಿನಮನಿ ವಂದಿಸಿದರು.

PREV

Recommended Stories

2028ರ ವರೆಗೂ ಸಿದ್ದರಾಮಯ್ಯ ಸಿಎಂ : ಸಚಿವ ಜಮೀರ್ ಅಹ್ಮದ್
ನಾವು ಆರೆಸ್ಸೆಸ್‌ ಗುಲಾಮರಲ್ಲ : ಪ್ರಿಯಾಂಕ್‌ ಖರ್ಗೆ