ಚಿಕ್ಕಮಗಳೂರು: ಭದ್ರಾ ಅಭಯಾರಣ್ಯದ ಹುಲಿ ಮೀಸಲು ವ್ಯಾಪ್ತಿಯ ಮುತ್ತೊಡಿ ವಲಯದಲ್ಲಿ ಒತ್ತುವರಿ ಮಾಡಲಾಗಿದ್ದ 43 ಎಕರೆ ಪ್ರದೇಶವನ್ನು ಅರಣ್ಯ ಇಲಾಖೆಯವರು ತೆರವು ಮಾಡಿದ್ದಾರೆ.
ನ್ಯಾಯಾಲಯದ ಆದೇಶ:
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವರಾತ್ರೀಶ್ವರಸ್ವಾಮಿ ಅವರು ಘನ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ, ಅರಣ್ಯ ಒತ್ತುವರಿ ಅಂಶ ಸಾಬೀತಾದ ಹಿನ್ನೆಯಲ್ಲಿ ಒತ್ತುವರಿ ತೆರವು ಮಾಡಿಕೊಡುವಂತೆ ಒತ್ತುವರಿದಾರರಿಗೆ ಏಪ್ರಿಲ್‌ನಲ್ಲಿ ಒಂದು ತಿಂಗಳು ಕಾಲಾವಕಾಶ ನೀಡಿ ಆದೇಶ ಮಾಡಲಾಗಿತ್ತು.ಸದರಿ ಒತ್ತುವರಿದಾರರು ಯಾವುದೇ ಅರಣ್ಯ ಒತ್ತುವರಿ ತೆರವು ಮಾಡಿಕೊಡದ ಹಿನ್ನೆಯಲ್ಲಿ ಇಲಾಖಾ ಮುಖ್ಯಸ್ಥರ ಸಮ್ಮುಖದಲ್ಲಿ ಕಳೆದ 3 ದಿನಗಳಿಂದ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿ ಬೆಳೆದಿದ್ದ ಕಾಫಿ ಗಿಡಗಳನ್ನು ತೆಗೆದು ಭದ್ರಾ ಅಭಯಾರಣ್ಯ ಹುಲಿ ಮೀಸಲು ಇಲಾಖಾ ವ್ಯಾಪ್ತಿಗೆ ಸದರಿ 43 ಎಕರೆ ಪ್ರದೇಶವನ್ನು ವಶಕ್ಕೆ ಪಡೆಯಲಾಗಿದೆ.
ಒತ್ತುವರಿ ತೆರವಿಗೆ ಒತ್ತಾಯ:
ಹಲವು ವರ್ಷಗಳಿಂದ ಭದ್ರಾ ಅಭಯಾರಣ್ಯ ವ್ಯಾಪ್ತಿಯ ಅರಣ್ಯ ಒತ್ತುವರಿ ತೆರವು ಮಾಡಬೇಕೆಂದು ಒತ್ತಾಯ ಕೇಳಿ ಬಂದಿತ್ತು. ಅದರಲ್ಲೂ ಪ್ರತಿಷ್ಠಿತ ವ್ಯಕ್ತಿಗಳೇ ಅರಣ್ಯ ಒತ್ತುವರಿಗೆ ಮುಂದಾಗಿದ್ದಾರೆ. ಭದ್ರಾ ಅಭಯಾರಣ್ಯ ಹುಲಿ ಮೀಸಲು ವ್ಯಾಪ್ತಿಗೆ ಒಳಪಟಿದ್ದು, ಇಲ್ಲಿ ಯಾವುದೇ ರೀತಿಯಲ್ಲೂ ಒತ್ತುವರಿಗೆ ಅವಕಾಶ ನೀಡಬಾರದು ಎಂದು ಪರಿಸರವಾದಿಗಳು ಆಗ್ರಹಿಸಿದ್ದಾರೆ.ಇತ್ತೀಚೆಗೆ ರಾಜ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಅರಣ್ಯ ಒತ್ತುವರಿ ತೆರವು ಮಾಡಿ ಅರಣ್ಯ ವನ್ಯಜೀವಿ ನೆಲೆಗಳನ್ನು ರಕ್ಷಿಸಬೇಕೆಂದು ಆದೇಶ ಮಾಡಿದ್ದರು. ಸದ್ಯ ಯಾವುದೇ ಮುಲಾಜು ಇಲ್ಲದೆ ಎಷ್ಟೇ ಒತ್ತಡ ಬಂದರೂ ಅಧಿಕಾರಿಗಳು ಒತ್ತುವರಿ ತೆರವು ಮಾಡಿದ್ದಾರೆ.
ತ್ವರಿತವಾಗಿ ಒತ್ತುವರಿ ಪ್ರಕರಣವನ್ನು ಇಲಾಖೆ ಕೈಗೆತ್ತಿಕೊಂಡಿದ್ದು, ಈ ಕ್ರಮವನ್ನು ಪರಿಸರಸಕ್ತರು ಸ್ವಾಗತಿಸಿದ್ದಾರೆ.