ಮುಳಗುಂದ: ಪಟ್ಟಣದ ಹಳೆಹುಡ ಓಣಿಯಲ್ಲಿ ನೆಲೆಸಿದ ಶ್ರೀಗ್ರಾಮ ದೇವತೆಯೇ ಟೋಪ ಜಾತ್ರಾ ಮಹೋತ್ಸವ ಮಂಗಳವಾರ ಪ್ರಾರಂಭವಾಗಿದ್ದು, ಮೊದಲ ದಿನ ಭಕ್ತರ ಮನೆಗೆ ಭೇಟಿ ನೀಡಿ ಶ್ರೀ ಗ್ರಾಮ ದೇವತೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಸಡಗರ,ಸಂಭ್ರಮದಿಂದ ಜರುಗಿತು.
ಗ್ರಾಮ ದೇವತೆ ಉತ್ಸವದಲ್ಲಿ ಪಟ್ಟಣದ ಭಕ್ತರು ಶ್ರದ್ಧಾಭಕ್ತಿಯಿಂದ ಸೌಹಾರ್ಧತೆಯಿಂದ ಜಾತಿ, ಮತ, ಬೇಧವಿಲ್ಲದೆ ಸರ್ವ ಜನಾಂಗದವರೂ ಭಾಗವಹಿಸಿದ್ದು ವಿಶೇಷವಾಗಿತ್ತು. ಯಾವುದೇ ತಂಟೆ ತಕರಾರುಗಳಿಗೆ ಆಸ್ಪದ ನೀಡದಂತೆ ಮೆರವಣಿಗೆ ಸಾಗಿತು. ಇದರಲ್ಲಿ ರೈತರು, ಕಾರ್ಮಿಕರು, ಎಲ್ಲ ನೌಕರರು ಪಟ್ಟಣಕ್ಕೆ ಆಗಮಿಸಿ ಭಾಗವಹಿಸಿದ್ದು ಜಾತ್ರೆಗೆ ಮೆರಗು ತಂದಿತು.
ಜಾತ್ರೆಗೆ ಮೆರಗು ತಂದ ಜೋಕಾಲಿ:ಗ್ರಾಮದೇವತೆ ಟೋಪ ಜಾತ್ರೆಯಲ್ಲಿ ಮಕ್ಕಳು ಸಾರ್ವಜನಿಕರು, ಮಹಿಳೆಯರ ಮನರಂಜನೆಗಾಗಿ ಪಟ್ಟಣದ ಬಸ್ ನಿಲ್ದಾಣದ ಹತ್ತಿರವಿರುವ ಬಯಲು ಜಾಗೆಯಲ್ಲಿ ವಿವಿಧ ಆಟೋಟಗಳ ವ್ಯವಸ್ಥೆ ಅಮ್ಯೂಜಮೆಂಟ್ ಪಾರ್ಕನವರಿಂದ ವಿಶೇಷ ದರದಲ್ಲಿ ಆಯೋಜನೆ ಮಾಡಲಾಗಿದೆ. ಸಾರ್ವಜನಿಕರು ಜೋಕಾಲಿಯಲ್ಲಿ ಜೀಕಿ ಖುಷಿ ಪಟ್ಟರು.ಊಟದ ವ್ಯವಸ್ಥೆ:ಪಟ್ಟಣದ ಬಾಲಲೀಲಾ ಮಹಾಂತ ಶಿವಯೋಗಿ ಕಲಾಭವನದಲ್ಲಿ ಬಡ್ನಿಯವರ ಕುಟುಂಬದಿಂದ, ಆಂಗ್ಲೋ ಉರ್ದು ಸ್ಕೂಲ್ ಮುಳಗುಂದದಲ್ಲಿ ನೀಲಗುಂದ ಕುಟುಂಬದವರಿಂದ ಬಂಡಿಯವರ ಓಣಿಯಲ್ಲಿ ಆರ್.ಸಿ.ಕಮಾಜಿ ಸಹೋದರರಿಂದ ಪ್ರಸಾದ ಸೇವೆಗೆ ಆಯೋಜನೆ ಮಾಡಲಾಗಿದೆ. ಅಲ್ಲದೇ ಇತರ ಕಟ್ಟೆಗಳಿಗೆ ದೇವಿ ಭೇಟಿ ನೀಡುವ ಸ್ಥಳಗಳಲ್ಲಿ ಅಲ್ಪೋಪಹಾರದ ವ್ಯವಸ್ಥೆ ಮಾಡಲಾಗಿದೆ.
ಕಾಲಲ್ಲಿ ಪಾದರಕ್ಷೆಗಳಿಲ್ಲ: ಜಾತ್ರೆಯ ಮೆರವಣಿಗೆ ನೋಡಲು ಬಂದ ಭಕ್ತರು ಸ್ವಯಂ ಪ್ರೇರಿತವಾಗಿ ಪಾದರಕ್ಷೆಗಳನ್ನು ಮನೆಯಲ್ಲಿಯೇ ಬಿಟ್ಟು ಭಾವಹಿಸಿ ದೇವಿ ಆರಾಧನೆ ಮಾಡಿದ್ದು ಗಮನ ಸೆಳೆಯಿತು. ಅಲ್ಲದೇ ಮುಸ್ಲಿಂ ಬಾಂಧವರು ಕೂಡಾ ಮನೆಗಳಲ್ಲಿ ಮಾಂಸಾಹಾರ ಸೇವನೆ ಮಾಡದೇ ಸಾಮೂಹಿಕವಾಗಿ ಸಿಹಿ ಭೋಜನ ಸವಿದರು.
ಉತ್ಸವ ಉತ್ತಮ ರೀತಿಯಲ್ಲಿ ಸಾಗಿದ್ದು, ಎಲ್ಲಿಯೂ ಯಾವುದೇ ರೀತಿಯಿಂದ ತೊಂದರೆಯಾಗದಂತೆ ಸಾಗುತ್ತಿದೆ. ಪ್ರಸಾದ ಸೇವೆಯು ಸುಗಮವಾಗಿದೆ. ಎಲ್ಲ ಕಾರ್ಯಕ್ರಮಗಳು ಯಾವುದೇ ಕೊರತೆಯಾಗದಂತೆ ನಡೆದಿದೆ. ಆದರೆ ಬೈಕನವರ ಕಿರಿಕಿರಿ ಆಗುತ್ತಿದೆ. ನಾಳೆ ಹೆಚ್ಚಿನ ಬಂದೋಬಸ್ತ್ ಒದಗಿಸಲು ಇಲಾಖೆಗೆ ಸೂಚಿಸಲಾಗಿದೆ ಎಂದು ದೇವಿ ಜಾತ್ರಾ ಕಮೀಟಿ ಗೌರವಾಧ್ಯಕ್ಷ ಎಸ್.ಎಂ. ನೀಲಗುಂದ ತಿಳಿಸಿದ್ದಾರೆ.