ದ.ಕ.ದಲ್ಲಿ ಮಿಡ್‌ನೈಟ್‌ ಕಾರ್ಯಾಚರಣೆ ವಿರುದ್ಧ ಎಸ್ಪಿ, ಕಮಿಷನರ್‌ ಭೇಟಿಯಾದ ಬಿಜೆಪಿ ನಿಯೋಗ

KannadaprabhaNewsNetwork |  
Published : Jun 04, 2025, 12:16 AM IST
೩೨ | Kannada Prabha

ಸಾರಾಂಶ

ದ.ಕ. ಜಿಲ್ಲೆಯಲ್ಲಿ ಕೋಮು ಹಿಂಸೆ ತಡೆಗೆ ಪೊಲೀಸರ ಮಿಡ್‌ನೈಟ್‌ ಕಾರ್ಯಾಚರಣೆ ಬೆನ್ನಲ್ಲೇ ಬಿಜೆಪಿ ನಿಯೋಗ ಮಂಗಳವಾರ ಮಂಗಳೂರಲ್ಲಿ ಪೊಲೀಸ್‌ ಕಮಿಷನರ್‌ ಮತ್ತು ಎಸ್ಪಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ. ಸುಮಾರು ಒಂದು ಗಂಟೆಗೂ ಅಧಿಕ ಕಾಲ ಮಾತುಕತೆ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ದ.ಕ. ಜಿಲ್ಲೆಯಲ್ಲಿ ಕೋಮು ಹಿಂಸೆ ತಡೆಗೆ ಪೊಲೀಸರ ಮಿಡ್‌ನೈಟ್‌ ಕಾರ್ಯಾಚರಣೆ ಬೆನ್ನಲ್ಲೇ ಬಿಜೆಪಿ ನಿಯೋಗ ಮಂಗಳವಾರ ಮಂಗಳೂರಲ್ಲಿ ಪೊಲೀಸ್‌ ಕಮಿಷನರ್‌ ಮತ್ತು ಎಸ್ಪಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ. ಸುಮಾರು ಒಂದು ಗಂಟೆಗೂ ಅಧಿಕ ಕಾಲ ಮಾತುಕತೆ ನಡೆಸಿದ್ದಾರೆ.

ಬಳಿಕ ಸುದ್ದಿಗಾರರಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ, ಶಾಸಕರಾದ ಹರೀಶ್‌ ಪೂಂಜಾ, ಡಾ.ಭರತ್‌ ಶೆಟ್ಟಿ, ಒಂದು ಸಮುದಾಯವನ್ನು ಕೇಂದ್ರೀಕರಿಸಿ ರಾತ್ರಿ ಮನೆಗಳಿಗೆ ಪೊಲೀಸರು ತೆರಳಿ ತನಿಖೆ ನಡೆಸುವುದು ಸರಿಯಲ್ಲ. ಈ ಬಗ್ಗೆ ಪೊಲೀಸ್‌ ಅಧಿಕಾರಿಗಳಿಗೆ ಮನವರಿಕೆ ಮಾಡಲಾಗಿದೆ. ಪೊಲೀಸರ ಅತಿರೇಕದ ಕ್ರಮ ಮುಂದುವರಿದರೆ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ನೇತೃತ್ವದಲ್ಲಿ ಸಭೆ ನಡೆಸಿ ಶಾಸಕರ ನಿಯೋಗ ಪೊಲೀಸ್‌ ಅಧಿಕಾರಿಗಳನ್ನು ಭೇಟಿ ಮಾಡಿ ಮನವರಿಕೆ ಮಾಡುವುದು ಎಂದು ತೀರ್ಮಾನಿಸಲಾಯಿತು. ಬಿಜೆಪಿ ಶಾಸಕರಾದ ಡಾ. ಭರತ್ ಶೆಟ್ಟಿ, ಹರೀಶ್ ಪೂಂಜಾ, ರಾಜೇಶ್ ನಾಯ್ಕ್, ಉಮಾನಾಥ್ ಕೋಟ್ಯಾನ್, ಭಾಗೀರಥಿ ಮುರುಳ್ಯ, ಕಿಶೋರ್‌ ಕುಮಾರ್‌ ಪುತ್ತೂರು ಭಾಗಿಯಾಗಿದ್ದರು.

ಹಸ್ತಕ್ಷೇಪ ರಹಿತ ತನಿಖೆ ನಡೆಯಲಿ:

ಮಂಗಳೂರು ಕಮಿಷನರ್ ಹಾಗೂ ಎಸ್ಪಿ ಭೇಟಿ ಬಳಿಕ ಶಾಸಕ ಡಾ. ಭರತ್ ಶೆಟ್ಟಿ ಸುದ್ದಿಗಾರರಲ್ಲಿ ಮಾತನಾಡಿ, ದ.ಕ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಅವರಿಗೆ ಬಿಜೆಪಿ ಸಹಕಾರ ನೀಡಲಿದೆ. ಕಾಂಗ್ರೆಸ್ ನಾಯಕರು ಪೊಲೀಸ್ ಠಾಣೆಗಳನ್ನು ಕಾಂಗ್ರೆಸ್ ಕಚೇರಿ ರೀತಿ ಬಳಸುತ್ತಿದ್ದಾರೆ. ಇಂಥವುಗಳಿಗೆ ಕಡಿವಾಣ ಹಾಕುವಂತೆ ಅಧಿಕಾರಿಗಳಿಗೆ ಹೇಳಿದ್ದೇವೆ. ಯಾವುದೇ ರಾಜಕೀಯ ಹಸ್ತಕ್ಷೇಪ ಇಲ್ಲದೇ ತನಿಖೆ ನಡೆಯಲಿ ಎಂದಿದ್ದೇವೆ ಎಂದರು. ನಡುರಾತ್ರಿಯಲ್ಲಿ ಕಾರ್ಯಕರ್ತರ ಮನೆಗೆ ಪೊಲೀಸರು ಹೋಗೋದನ್ನು ಒಪ್ಪಲು ಸಾಧ್ಯವಿಲ್ಲ. ಯಾವುದೇ ಕೇಸ್ ಇಲ್ಲದ ಹಿರಿಯರ ಮನೆಗಳಿಗೆ ಹೋಗೋದನ್ನು ಒಪ್ಪುವುದಿಲ್ಲ. ಇಂಥದ್ದನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಅವರಿಗೆ ಹೇಳಿದ್ದೇವೆ ಎಂದರು. ಭಾಷಣಗಳ ವಿಚಾರದಲ್ಲಿ ಯಾವುದು ಕೋಮು ಭಾಷಣ, ಯಾವುದು ಅಲ್ಲ ಎಂದು ನೋಡಬೇಕು. ರಾಜಕೀಯಕ್ಕಾಗಿ ಸುಳ್ಳು ಕೇಸ್ ಹಾಕಬಾರದು. ಡಾ. ಪ್ರಭಾಕರ ಭಟ್ ಅವರ ಮೇಲೆ ಕೇಸ್ ಹಾಕಲು 20 ದಿನದ ತಯಾರಿ ಆಗಿದೆ. ಆದರೆ ಹೈಕೋರ್ಟ್ ತಡೆ ನೀಡಿದ್ದನ್ನು ಸ್ವಾಗತಿಸುತ್ತೇವೆ ಎಂದರು. ಗಡೀಪಾರು ಪಟ್ಟಿ ಕಾಂಗ್ರೆಸ್ ನಾಯಕರು, ಕಾಂಗ್ರೆಸ್ ಮಂತ್ರಿಗಳು ಕೂತು ಮಾಡಿದ ಲಿಸ್ಟ್ ಆಗಿದೆ. ಗಡೀಪಾರು ಮಾಡಲು ಫೈಲ್ ರೆಡಿ ಆಗಬೇಕು, ಅದಕ್ಕೆ ಎರಡು ತಿಂಗಳ ಹಿಂದೆ ಕೆಲಸ ಆಗಿದೆ. ಕಾಂಗ್ರೆಸ್ ನಾಯಕರೇ ಕೂತು ಈ ಗಡೀಪಾರು ಲಿಸ್ಟ್ ಮಾಡಿದ್ದಾರೆ. ಬಹಳ ಹಿಂದೆ ಕೇಸ್ ಇದ್ದವರ ಹೆಸರನ್ನು ಸೇರಿಸಿ ಕಾಂಗ್ರೆಸ್ ರಾಜಕೀಯ ಮಾಡಿದೆ. ಎಸ್ಪಿ ಮತ್ತು ಕಮಿಷನರ್ ನಮ್ಮ ಮನವಿಗೆ ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಕಾನೂನು ಮೀರಿ ಕಿರುಕುಳ ನೀಡುವುದಿಲ್ಲ ಎಂದಿದ್ದಾರೆ. ಹಾಗಾಗಿ ನಾವು ಸದ್ಯ ಕಾದು ನೋಡ್ತೇವೆ, ಅನ್ಯಾಯ ಆದರೆ ನಾವು ಸಹಿಸುವುದಿಲ್ಲ. ಕಾಂಗ್ರೆಸ್ ನಿಯೋಗ ಬರುವುದಾದರೆ ಪೊಲೀಸರು ಯಾಕೆ? ಅವರು ಏನು ವರದಿ ಕೊಡುತ್ತಾರೆ. ಅವರಿಗೆ ಕಾನೂನು ವ್ಯಾಪ್ತಿ ಇಲ್ಲ, ಅವರು ಮುಸ್ಲಿಂ ನಾಯಕರ ಸಮಾಧಾನ ಮಾಡಲು ಬರುತ್ತಿದ್ದಾರೆ ಎಂದರು.

ಒನ್‌ಸೈಡ್‌ ಕೇಸ್‌:

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮಾತನಾಡಿ, ಕಳೆದೊಂದು ತಿಂಗಳ ವಿದ್ಯಮಾನಗಳ ಬಗ್ಗೆ ಅವರ ಜೊತೆ ಚರ್ಚೆ ಮಾಡಿದ್ದೇವೆ. ಹಿಂದೂ ಸಮಾಜದ ಮೇಲೆ ಕಾಂಗ್ರೆಸ್ ಸರ್ಕಾರದ ಜೊತೆ ಸೇರಿ ಮಾಡುವ ದೌರ್ಜನ್ಯ ನಿಲ್ಲಿಸಲು ಆಗ್ರಹಿಸಿದ್ದೇವೆ. ಸದ್ಯ ಇಬ್ಬರು ಅಧಿಕಾರಿಗಳು ಶಾಂತಿ ಕಾಪಾಡಲು ಒಳ್ಳೆಯ ಚಿಂತನೆ ಇಟ್ಟಿದ್ದಾರೆ. ಸರ್ಕಾರದ ಮಾತು ಕೇಳಿ ಕೆಲಸ ಮಾಡುವುದಿಲ್ಲ ಎನ್ನುವ ಭಾವನೆ ನಮಗೆ ಬಂದಿದೆ. ಶಾಂತಿ‌ ಕಾಪಾಡಲು ಜಿಲ್ಲೆಯಲ್ಲಿ ಕೆಲಸ ಮಾಡುತ್ತಾರೆ. ಪ್ರಚೋದನಕಾರಿ ಭಾಷಣಗಳಿಗೆ ಈಗಾಗಲೇ ಎಫ್ಐಆರ್ ಆಗಿದೆ. ಆದರೆ ಅದೆಲ್ಲವೂ ಒನ್ ಸೈಡ್ ಆಗಿದೆ, ಹಿಂದೂ ಸಮಾಜದ ಮೇಲೆ ಮಾತ್ರ ಆಗಿದೆ. ಮುಸಲ್ಮಾನರ ಪ್ರಚೋದನೆಗಳಿಗೆ ಯಾವುದೇ ರೀತಿಯ ಎಫ್ಐಆರ್ ಆಗಿಲ್ಲ. ಕಾರ್ಯಕರ್ತರು ಮತ್ತು ಹಿರಿಯರ ಮನೆಗೆ ಭೇಟಿ ಕೊಡುವುದನ್ನು ತಕ್ಷಣಕ್ಕೆ ನಿಲ್ಲಿಸಬೇಕು ಎಂದು ಹೇಳಿದ್ದೇವೆ. ಅಪರಾಧ ಹಿನ್ನೆಲೆ ಇಲ್ಲದವರ ಮನೆಗಳಿಗೆ ಹೋಗೋದನ್ನು ಸರಿಯಲ್ಲ ಎಂದಿದ್ದೇವೆ. ನಾವು ಆಗ್ರಹ ಮಾಡಿದ್ದೇವೆ, ಹಾಗಾಗಿ ಅವರ ಗಮನಕ್ಕೆ ತಂದಿದ್ದೇವೆ ಎಂದರು. ಅಶಾಂತಿ ಸೃಷ್ಟಿಸುವವರ ಹೆಸರೇ ಇಲ್ಲ:

ಗಡೀಪಾರು ಪಟ್ಟಿಯಲ್ಲಿ ಇರುವ ವ್ಯಕ್ತಿಗಳಲ್ಲಿ ಮುಸಲ್ಮಾನರ ಹೆಸರುಗಳು ಇವೆ ಎನ್ನುತ್ತಾರೆ. ಆದರೆ ಈ ಪಟ್ಟಿ ಮಾಡಿದ್ದು ಯಾರು? ಯಾವಾಗ ತಯಾರಾಯ್ತು? ಈ ಪಟ್ಟಿಯಲ್ಲಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಮುಸಲ್ಮಾನರ ಹೆಸರುಗಳಿಲ್ಲ. ಆದರೆ ಸಮಾಜ ಕಾರ್ಯ ಮಾಡುವ ಹಿಂದೂ ಮುಖಂಡರ ಹೆಸರುಗಳು ಇದೆ. ಮುಸಲ್ಮಾನ ಸಂಘಟನೆ ಪ್ರಮುಖರ ಯಾವುದೇ ಹೆಸರುಗಳು ಇಲ್ಲಿಲ್ಲ. ಕೆಪಿಸಿಸಿ ನಿಯೋಗ ಇಲ್ಲಿಗೆ ಯಾಕೆ ಬರಬೇಕು? ಅವರದ್ದೇ ಸರ್ಕಾರ ಇದೆ. ಜಿಲ್ಲೆಯಲ್ಲಿ ರಾಜಕೀಯ ಮಾಡಲು ಅವರು ಇಲ್ಲಿಗೆ ಬರುತ್ತಿದ್ದಾರೆ ಎಂದು ಅವರು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ