ಕೋಟಿಲಿಂಗೇಶ್ವರ ದೇವಸ್ಥಾನ ನಿರ್ಮಾಣದಿಂದ ಕುಷ್ಟಗಿ ಸುಕ್ಷೇತ್ರ ಆಗಲಿದೆ

KannadaprabhaNewsNetwork |  
Published : Jun 04, 2025, 12:16 AM IST
ಪೋಟೊ3ಕೆಎಸಟಿ3: ಕುಷ್ಟಗಿ ಪಟ್ಟಣದಲ್ಲಿ ಕೋಟಿ ಲಿಂಗೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ನೇರವೇರಿಸಲಾಯಿತು. ಸದಾನಂದ ಮಹಾರಾಜರು, ಶಾಸಕ ದೊಡ್ಡನಗೌಡ ಪಾಟೀಲ, ಮಾಜಿ ಸಚಿವ ಅಮರೇಗೌಡ ಬಯ್ಯಾಪೂರ ಇದ್ದರು. | Kannada Prabha

ಸಾರಾಂಶ

ಕೋಟಿ ಲಿಂಗೇಶ್ವರ ದೇವಸ್ಥಾನ ನಿರ್ಮಾಣಕ್ಕೆ ದುರ್ಗಾಪರಮೇಶ್ವರಿ ಆಶ್ರಮದ ಸದಾನಂದ ಮಹಾರಾಜರು ಮುಂದಾಗಿದ್ದು ಈ ದೇವಸ್ಥಾನದಿಂದ ಕುಷ್ಟಗಿಯು ಮುಂದಿನ ದಿನಗಳಲ್ಲಿ ಸುಕ್ಷೇತ್ರವಾಗಲಿದೆ.

ಕುಷ್ಟಗಿ:

ಪಟ್ಟಣದಲ್ಲಿ ಕೋಟಿ ಲಿಂಗೇಶ್ವರ ದೇವಸ್ಥಾನ ನಿರ್ಮಾಣಕ್ಕೆ ದುರ್ಗಾಪರಮೇಶ್ವರಿ ಆಶ್ರಮದ ಸದಾನಂದ ಮಹಾರಾಜರು ಮುಂದಾಗಿದ್ದು ಈ ದೇವಸ್ಥಾನದಿಂದ ಕುಷ್ಟಗಿಯು ಮುಂದಿನ ದಿನಗಳಲ್ಲಿ ಸುಕ್ಷೇತ್ರವಾಗಲಿದೆ ಎಂದು ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು.

ಪಟ್ಟಣದ ದೋಟಿಹಾಳ ರಸ್ತೆಯಲ್ಲಿರುವ ಸಂತೋಷ ಪಟ್ಟಣಶೆಟ್ಟರ ಸಾಮಿಲ್‌ ಹತ್ತಿರದ ಜಮೀನಿನಲ್ಲಿ ನಡೆದ ಕೋಟಿ ಲಿಂಗೇಶ್ವರ ದೇವಸ್ಥಾನದ ಭೂಮಿ ಪೂಜಾ ಹಾಗೂ ಅಡಿಗಲ್ಲು ಸಮಾರಂಭದ ವೇದಿಕೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ದೇವಸ್ಥಾನ ನಿರ್ಮಾಣದ ಕನಸು ಆದಷ್ಟು ಬೇಗನೆ ಈಡೇರಲಿ. ಕುಷ್ಟಗಿ ಸುಕ್ಷೇತ್ರವಾಗಿ ನಿರ್ಮಾಣವಾಗಲಿ ಎಂದು ಹಾರೈಸಿದರು. ಈ ಮಹತ್ಕಾರ್ಯಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದರು.

ದುರ್ಗಾಪರಮೇಶ್ವರಿ ಆಶ್ರಮದ ಸದಾನಂದ ಮಹಾರಾಜರು ಮಾತನಾಡಿ, ಲೋಕ ಕಲ್ಯಾಣಾರ್ಥವಾಗಿ ಈ ಕೋಟಿಲಿಂಗೇಶ್ವರ ದೇವಸ್ಥಾನ ನಿರ್ಮಾಣವಾಗಲಿದೆ. ಇಲ್ಲಿ ಅನಾಥ, ಅಂಧ ಮಕ್ಕಳಿಗೆ ಆಶ್ರಯ, ಹಸಿದ ಹೊಟ್ಟೆಗೆ ಆಹಾರ ನೀಡುವ ಮೂಲಕ ಸಾಮಾಜಿಕ ಸೇವೆಗೆ ಮುಂದಾಗುತ್ತೇವೆ. ಈ ದೇವಸ್ಥಾನದ ನಿರ್ಮಾಣಕ್ಕೆ ಭಕ್ತರ ಸಹಾಯ, ಸಹಕಾರ ಅವಶ್ಯಕತೆ ಇದ್ದು ಸಹಕರಿಸಬೇಕು. ಈ ದೇವಸ್ಥಾನವೂ ಮುಂದೊಂದು ದಿನ ಜಾಗೃತ ಸ್ಥಳವಾಗಲಿದೆ ಎಂದು ಹೇಳಿದರು.

ಬೆಳಗ್ಗೆ ಪುರೋಹಿತ ವರ್ಗದವರು ವಿವಿಧ ಧಾರ್ಮಿಕ ಪೂಜಾ ವಿಧಿ-ವಿಧಾನ ಅನುಸರಿಸಿ ಹೋಮ-ಹವನಗಳನ್ನು ನೂರಾರು ಭಕ್ತರ ಸಮುಖದಲ್ಲಿ ನಡೆಸಿಕೊಟ್ಟರು. ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಶಾಸಕ ದೊಡ್ಡನಗೌಡ ಪಾಟೀಲ, ಮಾಜಿ ಸಚಿವ ಅಮರೇಗೌಡ ಬಯ್ಯಾಪೂರ, ಶೇಖರಗೌಡ ಮಾಲಿಪಾಟೀಲ್ ಭಾಗವಹಿಸಿದ್ದರು.

ವೇದಿಕೆ ಕಾರ್ಯಕ್ರಮದಲ್ಲಿ ಚಳಗೇರಿಯ ವೀರಸಂಗಮೇಶ್ವರ ಶಿವಾಚಾರ್ಯರು, ಕುಷ್ಟಗಿ ಕರಿಬಸವ ಶಿವಾಚಾರ್ಯರು, ನಿಡಶೇಸಿ ಅಭಿನವ ಕರಿಬಸವಶಿವಾಚಾರ್ಯರು ಸೇರಿದಂತೆ ಅನೇಕ ಶ್ರೀಗಳು ಇದ್ದರು. ದೇವಸ್ಥಾನ ಸಮಿತಿಯ ಪ್ರಮುಖರಾದ ಸಂತೋಷ ಪಟ್ಟಣಶೆಟ್ಟರ, ಮುತ್ತಣ್ಣ ಪಟ್ಟಣಶೆಟ್ಟರ, ಬಾಲಚಂದ್ರಪ್ಪ ಹಿರೆಮನ್ನಾಪೂರ, ಬಸನಗೌಡ ಪಾಟೀಲ್, ಮಲ್ಲಿಕಾರ್ಜುನ ಸೇರಿದಂತೆ ಸಾಕೇಶ್ವರ ಟ್ರಸ್ಟ್ ಪದಾಧಿಕಾರಿಗಳು ನೂರಾರು ಜನ ಭಕ್ತರು ಭಾಗವಹಿಸಿದ್ದರು.

PREV

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್