ಕುಕನೂರು: ರಾಜ್ಯದಲ್ಲಿ ಅಭಿವೃದ್ಧಿಗೆ ಯಾವುದೇ ತರಹದ ಕೊರತೆ ಇಲ್ಲ. ಈ ಹಿಂದಿನ ಬಿಜೆಪಿ ಸರ್ಕಾರ ಅನುದಾನವಿಲ್ಲದೆ ಕಾಮಗಾರಿ ರಚಿಸಿ, ರಾಜ್ಯದಲ್ಲಿ ₹45 ಸಾವಿರ ಕೋಟಿ ಬಿಲ್ ಬಾಕಿ ಉಳಿಸಿದೆ. ಅದನ್ನು ಸಹ ಕಾಂಗ್ರೆಸ್ ಸರ್ಕಾರವೇ ಪಾವತಿ ಮಾಡುತ್ತಿದೆ ಎಂದು ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.
ತಾಲೂಕಿನ ಯಡಿಯಾಪುರ ಗ್ರಾಮದಲ್ಲಿ ₹೧೦ ಕೋಟಿ ವೆಚ್ಚದಲ್ಲಿ ಹಳ್ಳಕ್ಕೆ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಯಿಂದ ರಾಜ್ಯ ಆರ್ಥಿಕ ದಿವಾಳಿಯಾಗಿದೆ ಎಂದು ಬಿಜೆಪಿ ಹೇಳುತ್ತಿದೆ. ನಾವು ಆರ್ಥಿಕ ವ್ಯವಹಾರಗಳನ್ನು ಕಟ್ಟುನಿಟ್ಟಾಗಿ ನಿಭಾಯಿಸುತ್ತಿದ್ದೇವೆ. ಕೆಲವರು ಬಿಟ್ಟಿ ಭಾಗ್ಯವೆಂದು ಲೇವಡಿ ಮಾಡಿದರು. ಈಗ ದೆಹಲಿ ಚುನಾವಣೆಯ ಪ್ರಣಾಳಿಕೆಯಲ್ಲಿ ಬಿಜೆಪಿಯವರೆ ಗ್ಯಾರಂಟಿಗಳನ್ನು ಘೋಷಣೆ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ. ಯಡಿಯಾಪುರ ಗ್ರಾಮದಲ್ಲಿ ಕಲ್ಯಾಣ ಮಂಟಪ ನಿರ್ಮಾಣಕ್ಕೆ ₹೫ ಕೋಟಿ ಅನುದಾನ ನೀಡುತ್ತೇನೆ ಎಂದರು.ಬರಿಗಾಲಿನಲ್ಲಿ ನಡೆದು ಕ್ಷೇತ್ರಾಭಿವೃದ್ಧಿ: ನಾನು ನನ್ನ 29 ವಯಸ್ಸಿನಲ್ಲಿ 1985ರಲ್ಲಿ ಯಲಬುರ್ಗಾ ಕ್ಷೇತ್ರಕ್ಕೆ ಎಂಎಲ್ಎ ಆದಾಗ ಬರಿಗಾಲಿನಲ್ಲಿ ನಡೆದು ಕ್ಷೇತ್ರಾಭಿವೃದ್ಧಿಗೆ ಶ್ರಮಿಸಿದ್ದೇನೆ. ಕೆಲವು ಹಳ್ಳಗಳಿಗೆ ಬ್ರಿಡ್ಜ್ ಇರಲಿಲ್ಲ. ಕರೆಂಟ್ ಇರಲಿಲ್ಲ. ಅಲ್ಲದೆ ರಸ್ತೆಗಳೇ ಇರಲಿಲ್ಲ. ಹಳ್ಳ ದಾಟುವಾಗ ಚಪ್ಪಲಿ ಕೈಯಲ್ಲಿ ಹಿಡಿದು ದಾಟಿ ಹೋಗಿದ್ದೇವೆ. ಆದರೆ ಈಗ ನಮ್ಮ ಕ್ಷೇತ್ರದ ರಸ್ತೆಗಳಲ್ಲಿ ಒಂದೇ ಒಂದು ಹೊಂಡ ಇಲ್ಲ. ಯಲಬುರ್ಗಾ ಕ್ಷೇತ್ರ ದಾಟಿದರೆ ರಸ್ತೆಗಳನ್ನು ನೋಡಿದರೆ ಜನರು ಹಿಡಿಶಾಪ ಹಾಕುವಂತೆ ಇವೆ ಎಂದರು.
ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ಪ್ರಕಾಶ ಪಾಟೀಲ್, ತಹಸೀಲ್ದಾರ್ ಎಚ್. ಪ್ರಾಣೇಶ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸಂಗಮೇಶ ಗುತ್ತಿ, ದೇವಪ್ಪ ಅರಕೇರಿ, ರಹೇಮಾನಸಾಬ ಮಕ್ಕಪ್ಪನವರ್, ಯಂಕಣ್ಣ ಯರಾಸಿ, ಹನುಮಂತಗೌಡ ಚಂಡೂರು, ದೇವನಗೌಡ ಹಿರೇಗೌಡರ್, ಹೊನ್ನಪ್ಪ ಮರಡಿ ಇದ್ದರು.