ಜಿಲ್ಲೆಯಲ್ಲಿ ಶೇ.46 ರಷ್ಟು ಬೆಳೆ ಹಾನಿ ಪರಿಹಾರ ಬಾಕಿ

KannadaprabhaNewsNetwork | Published : May 14, 2024 1:09 AM

ಸಾರಾಂಶ

ಚುನಾವಣೆ ಕಾರಣವನ್ನಿಟ್ಟುಕೊಂಡು ಅಧಿಕಾರಿಗಳು ಮಾಡಿದ ನಿರ್ಲಕ್ಷ್ಯವೋ, ತಾಂತ್ರಿಕ ದೋಷ ಅಥವಾ ರೈತರ ಖಾತೆಗಳಲ್ಲಿರುವ ಗೊಂದಲಗಳಿಂದಾದ ಸಮಸ್ಯೆಯೋ ಗೊತ್ತಿಲ್ಲ, ಆದರೆ ತೊಂದರೆ ಆಗುತ್ತಿರುವುದಂತೂ ಸಾಮಾನ್ಯ ರೈತರಿಗೆ ಎನ್ನುವುದು ಬೇಸರದ ಸಂಗತಿ

ಮಹೇಶ ಛಬ್ಬಿ ಗದಗ

ಭೀಕರ ಬರದಿಂದ ಕಂಗೆಟ್ಟಿರುವ ಜಿಲ್ಲೆಯ ಶೇ.45.96 ರೈತರಿಗೆ 2023ನೇ ಸಾಲಿನ ಬರ ಪರಿಹಾರ ಇನ್ನೂ ಬರುವುದು ಬಾಕಿ ಇದೆ. ದಶಕದ ಭೀಕರ ಬರದಿಂದ ಕಂಗೆಟ್ಟ ರೈತರು ಈ ಪರಿಹಾರವೆಂಬ ಅಲ್ಪ ನೆರವಿಗೆ ಕಾಯುತ್ತಿದ್ದಾರೆ.

ಚುನಾವಣೆ ಕಾರಣವನ್ನಿಟ್ಟುಕೊಂಡು ಅಧಿಕಾರಿಗಳು ಮಾಡಿದ ನಿರ್ಲಕ್ಷ್ಯವೋ, ತಾಂತ್ರಿಕ ದೋಷ ಅಥವಾ ರೈತರ ಖಾತೆಗಳಲ್ಲಿರುವ ಗೊಂದಲಗಳಿಂದಾದ ಸಮಸ್ಯೆಯೋ ಗೊತ್ತಿಲ್ಲ, ಆದರೆ ತೊಂದರೆ ಆಗುತ್ತಿರುವುದಂತೂ ಸಾಮಾನ್ಯ ರೈತರಿಗೆ ಎನ್ನುವುದು ಬೇಸರದ ಸಂಗತಿಯಾಗಿದೆ.

ಜಿಲ್ಲೆಯ ಅಲ್ಲಲ್ಲಿ ಸಾಧಾರಣ ಮಳೆಯಾಗುತ್ತಿದ್ದು, ಮುಂಗಾರು ಬಿತ್ತನೆಗೆ ಈಗಾಗಲೇ ರೈತರು ಸಿದ್ಧತೆ ನಡೆಸಿದ್ದಾರೆ, ಉತ್ತಮ ಮಳೆಯಾದರೆ ಕೃಷಿ ಚಟುವಟಿಕೆ ಚುರುಕುಗೊಳ್ಳಲಿದೆ. ಆದರೆ ಸತತ ಅತಿವೃಷ್ಟಿ, ಅನಾವೃಷ್ಟಿಯಿಂದ ರೈತರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಕಳೆದ ಸಾಲಿನಲ್ಲಿ ಮುಂಗಾರು ವೈಫಲ್ಯದಿಂದ ಸರ್ಕಾರ ಜಿಲ್ಲೆಯನ್ನು ಬರಗಾಲ ಪ್ರದೇಶವೆಂದು ಘೋಷಣೆ ಮಾಡಿತು. ಆದರೆ ಇದರಿಂದ ತೊಂದರೆಯಾಗಿರುವ ರೈತರಿಗೆ ಬರ ಪರಿಹಾರ ನೀಡುವ ವಿಷಯದಲ್ಲಿ ಕೇಂದ್ರದ ಮೇಲೆ ರಾಜ್ಯ ಸರ್ಕಾರ, ರಾಜ್ಯದ ಮೇಲೆ ಕೇಂದ್ರ ಸರ್ಕಾರ ಆರೋಪ, ಪ್ರತ್ಯಾರೋಪ ಮಾಡುತ್ತಾ ಕಾಲಹರಣ ಮಾಡಿತೇ ವಿನಃ ರಾಜ್ಯದ ರೈತರ ಸಂಕಷ್ಟಕ್ಕೆ ತಕ್ಷಣವೇ ಸ್ಪಂದಿಸಲಿಲ್ಲ ಎಂಬುದು ರೈತರ ಆರೋಪವಾಗಿದೆ.

ಬೆಳೆ ಹಾನಿ ಪರಿಹಾರ ಕೆಲ ರೈತರಿಗೆ ಬಂದಿದ್ದು, ಇನ್ನೂ ಕೆಲವರಿಗೆ ಬಂದಿಲ್ಲ. ತಾಂತ್ರಿಕ ದೋಷ ಇನ್ನಿತರೆ ಕಾರಣ ನೀಡದೆ ಎಲ್ಲ ರೈತರಿಗೂ ಬೆಳೆ ಹಾನಿ ಪರಿಹಾರ ಆದಷ್ಟು ಬೇಗ ಹಾಕಬೇಕು. ರೈತರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಇದರಿಂದ ಬೀಜ, ಗೊಬ್ಬರ ಖರೀದಿಗೆ ಅನುಕೂಲವಾಗುತ್ತದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ ಬೆಳೆ ಪರಿಹಾರ ತಕ್ಷಣ ಹಾಕಿಸಲು ಕ್ರಮ ಕೈಗೊಳ್ಳಬೇಕು ಎಂಬುದು ಜಿಲ್ಲೆಯ ಬಹುತೇಕ ರೈತರ ಆಗ್ರಹವಾಗಿದೆ.

ಬೆಳೆ ಹಾನಿ ಪರಿಹಾರ ಬಾಕಿ ತಾಲೂಕಗಳ ಶೇಕಡಾವಾರ ವಿವರ:

ಗದಗ69.9%

ರೋಣ74%

ಮುಂಡರಗಿ 59%

ಶಿರಹಟ್ಟಿ 25.86%

ಲಕ್ಷ್ಮೇಶ್ವರ 74%

ಗಜೇಂದ್ರಗಡ 4.67% ಬಾಕಿ ಇದೆ

ನರಗುಂದ-100% ಪರಿಹಾರ ಬಂದಿದೆ.

ತಾಂತ್ರೀಕ ದೋಷಗಳಿಂದ ಕೆಲ ರೈತರಿಗೆ ಪರಿಹಾರ ಬಂದಿಲ್ಲ. ಹಂತ ಹಂತವಾಗಿ ಬೆಳೆ ಹಾನಿ ಪರಿಹಾರ ರೈತರ ಖಾತೆಗೆ ಜಮಾ ಮಾಡಲಾಗುವುದು ಎಂದು ಕೃಷಿ ಅಧಿಕಾರಿ ಮಲ್ಲಯ್ಯ ಕೊರಗಣ್ಣವರ ತಿಳಿಸಿದ್ದಾರೆ.

ಸದ್ಯ ಕಳೆದೆರಡು ದಿನಗಳಿಂದ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆ ಪ್ರಾರಂಭವಾಗಲಿವೆ. ಬೀಜ, ಗೊಬ್ಬರ ಖರೀದಿಗೆ, ಬಿತ್ತನೆಗೆ ರೈತರ ಬಳಿ ಹಣವಿಲ್ಲ. ಕಳೆದ ವರ್ಷ ಬರಗಾಲ ಬಿದ್ದು ರೈತರು ಸಂಕಷ್ಟದಲ್ಲಿದ್ದಾರೆ. ಬೆಳೆ ಹಾನಿ ಪರಿಹಾರ ಕೆಲ ರೈತರಿಗೆ ಬಂದರೆ, ಇನ್ನು ಕೆಲವರಿಗೆ ಬಂದಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ತಾಂತ್ರಿಕ ದೋಷದ ಕಾರಣ ನೀಡುತ್ತಾರೆ. ಸರ್ಕಾರ ಎಲ್ಲ ರೈತರಿಗೂ ಪರಿಹಾರ ನೀಡಬೇಕು ಮುಳಗುಂದ ರೈತ ಸಂಘದ ಅಧ್ಯಕ್ಷ ಬಸವರಾಜ ಕರಿಗಾರ ಹೇಳಿದರು.

Share this article