ಚಿತ್ರದುರ್ಗ: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ದೊಡ್ಡಬಳ್ಳಾಪುರ-ಬೆಂಗಳೂರು ಉತ್ತರ ಶೈಕ್ಷಣಿಕ ಜಿಲ್ಲೆ, ಕರ್ನಾಟಕ ರಾಜ್ಯ ಶಾಲಾ ಕಾಲೇಜುಗಳ ಒಕ್ಕೂಟ, ಕರ್ನಾಟಕ ರಾಜ್ಯ ಮಾನವ ಬಂಧುತ್ವ ವೇದಿಕೆ ಹಾಗೂ ಕರ್ನಾಟಕ ಸರ್ಕಾರದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಇವುಗಳ ಸಹಯೋಗದೊಂದಿಗೆ ಡಿ.28 ಮತ್ತು 29ರಂದು 2 ದಿನಗಳ ಕಾಲ ಬಾಗಲೂರಿನ ವಿ.ಜೆ.ಇಂಟರ್ ನ್ಯಾಷನಲ್ ಶಾಲಾ ಮೈದಾನದಲ್ಲಿ ರಾಜ್ಯ ಮಟ್ಟದ 4ನೇ ವೈಜ್ಞಾನಿಕ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ್ ಸಂಗಂ ತಿಳಿಸಿದರು.ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಡಿನ ಹಿರಿಯ ರಂಗಭೂಮಿ ಕಲಾವಿದೆ, ಚಿತ್ರನಟಿ ಹಾಗೂ ವಿಧಾನಪರಿಷತ್ ಸದಸ್ಯೆ ಉಮಾಶ್ರೀ ಅವರ ಸರ್ವಾಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯಲಿದ್ದು, ವಿವಿಧ ವಿಜ್ಞಾನ ವಸ್ತು ಪ್ರದರ್ಶನ, ವೈವಿಧ್ಯಮಯವಾದ ಆಹಾರ, ಕರಕುಶಲ ಮೇಳ ಹಾಗೂ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮ್ಮೇಳನದಲ್ಲಿ ನಡೆಯಲಿದೆ. ಪ್ರಮುಖ ವೈಜ್ಞಾನಿಕ ವಿಷಯಗಳ ಮೇಲೆ ಬೆಳಕು ಚೆಲ್ಲಲಾಗುತ್ತದೆ ಎಂದರು.
ದುರ್ಗದ ಡಾ.ಪಾಲಾಕ್ಷ, ಸುಧಾ, ಶೋಭಾ ರವರಿಗೆ ಪ್ರಶಸ್ತಿ: ನಾಲ್ಕನೇ ವೈಜ್ಞಾನಿಕ ಸಮ್ಮೇಳನದಲ್ಲಿ ಚಿತ್ರದುರ್ಗದ ಬಸವೇಶ್ವರ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಮೆಡಿಕಲ್ ಸೂಪರಿಡೆಂಟ್ ಮತ್ತು ಪ್ರೊಫೆಸರ್ ಆದ ಡಾ.ಎಲ್.ಪಾಲಕ್ಷಯ್ಯರವರಿಗೆ ರಾಜ್ಯ ಮಟ್ಟದ ಎಚ್.ಎನ್. ಪ್ರಶಸ್ತಿ ಲಭಿಸಿದೆ ಮತ್ತು ಈ ವರ್ಷ ವಿಶೇಷವಾಗಿ ರಾಜ್ಯ ಮಟ್ಟದಲ್ಲಿ ಮಹಿಳೆಯರಿಗಾಗಿ ನೀಡುತ್ತಿರುವ ಚೈತನ್ಯಶ್ರೀ ಪಶಸ್ತಿಗೆ ತಾಲೂಕಿನ ಸೀಬಾರದ ವಿಶ್ವಮಾನವ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಸುಧಾ.ಎಚ್.ಆರ್ ಹಾಗೂ ಶೋಭಾ ಮಲ್ಲಿಕಾರ್ಜನ್ ಅವರಿಗೆ ನೀಡಲಾಗುವುದು ಎಂದು ಹೇಳಿದರು.
ಮುಖ್ಯಮಂತ್ರಿಗಳಿಂದ ಉದ್ಘಾಟನೆ : ಸಮ್ಮೇಳನವನ್ನು ಉದ್ಘಾಟಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಆಹ್ವಾನ ನೀಡಲಾಗಿದ್ದು, ಕೇಂದ್ರ ಹಾಗೂ ರಾಜ್ಯದ ಸಚಿವರುಗಳು, ಸಂಸದರು, ಶಾಸಕರು. ವಿಧಾನಪರಿಷತ್ ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳು, ವಿಜ್ಞಾನಿಗಳು, ಸಾಮಾಜಿಕ ಚಿಂತಕರು, ವಿದ್ಯಾರ್ಥಿಗಳು, ಉಪನ್ಯಾಸಕರು, ಶಿಕ್ಷಕರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಸಮ್ಮೇಳನದಲ್ಲಿ ಭಾಗವಹಿಸುವವರಿಗೆ ಊಟ, ಉಪಹಾರ ವ್ಯವಸ್ಥೆಯನ್ನು ಮಾಡಲಾಗಿದೆ ಹಾಗೂ ಹೊರಗಿನಿಂದ ಬರುವವರಿಗೆ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಲೋಕೇಶ್, ಡಾ.ಮೋಹನ್, ಡಾ.ಕೃಷ್ಣಪ್ಪ, ಸುರೇಶ್, ಎನ್.ದೂಡ್ಡಪ್ಪ, ಡಾ.ತಿಪ್ಪೇಸ್ವಾಮಿ, ವಿ.ಚನ್ನಬಸಪ್ಪ, ದೇವಕಿ ರುದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.ಕುವೆಂಪು ಜನ್ಮದಿನವನ್ನು ವೈಜ್ಞಾನಿಕ
ದಿನವನ್ನಾಗಿ ಆಚರಿಸಿ: ನಾಗರಾಜ್ ಸಂಗಂಚಿತ್ರದುರ್ಗ: ಡಿ.29 ವಿಶ್ವಕವಿ ಕುವೆಂಪು ಜನ್ಮದಿನವಾಗಿದ್ದು, ಆ ದಿನವನ್ನು ವೈಜ್ಞಾನಿಕ ದಿನಾಚರಣೆಯನ್ನಾಗಿ ಆಚರಿಸಬೇಕು. ರಾಜ್ಯ ವಿಜ್ಞಾನ ಅಕಾಡೆಮಿಗೆ ಡಾ.ಹುಲಿಕಲ್ ನಟರಾಜ್‍ರನ್ನು ನೇಮಿಸಬೇಕು. ಪ್ರತಿ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ವಿಜ್ಞಾನ ಕೇಂದ್ರಗಳ ಸ್ಥಾಪನೆ, ಪರಿಷತ್ತು ಪ್ರತಿ ವರ್ಷ ನಡೆಸುವ ರಾಜ್ಯ ಮಟ್ಟದ ವೈಜ್ಞಾನಿಕ ಸಮ್ಮೇಳನಕ್ಕೆ ಅನುದಾನ, ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ವಿಜ್ಞಾನ ಪ್ರಯೋಗಾಲಯಗಳ ಸ್ಥಾಪನೆ, ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ವಿಜ್ಞಾನ ಸಮಿತಿಗಳ ರಚನೆ ಮತ್ತಿತರೆ ಬೇಡಿಕೆಗಳ ಬಗ್ಗೆ ಸಮ್ಮೇಳನದಲ್ಲಿ ಹಕ್ಕೋತ್ತಾಯ ಮಂಡಿಸಲಾಗುವುದು ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ್ ಸಂಗಂ ತಿಳಿಸಿದರು.