ಶಾಲಾ-ಕಾಲೇಜು ಅಭಿವೃದ್ಧಿಗೆ ತಲಾ 5 ಕೋಟಿ ಅನುದಾನ

KannadaprabhaNewsNetwork |  
Published : May 28, 2025, 12:21 AM IST
ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸಚಿವ ಸತೀಶ ಜಾರಕಿಹೊಳಿ ಸನ್ಮಾನಿಸಿದರು | Kannada Prabha

ಸಾರಾಂಶ

ಜಿಲ್ಲೆಯಲ್ಲಿ ವಿನೂತನವಾಗಿ ಆರಂಭಿಸಲಾಗಿರುವ ಸಿಇಟಿ-ಸಕ್ಷಮ್ ಅತ್ಯುತ್ತಮ ಕಾರ್ಯಕ್ರಮವಾಗಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಸಾಧನೆಗೆ ವೇದಿಕೆಯಾಗಬೇಕು.

ಕನ್ನಡಪ್ರಭ ವಾರ್ತೆ ಬೆಳಗಾವಿ

ವಿದ್ಯಾರ್ಥಿಗಳ ಸಾಧನೆಯಲ್ಲಿ ಶಿಕ್ಷಕರು ಮತ್ತು ಅಧಿಕಾರಿಗಳ ಪಾತ್ರ ಮಹತ್ವಾದ್ದಾಗಿದೆ. ಕೆ-ಸಿಇಟಿ ಪರೀಕ್ಷೆಯಲ್ಲಿ ಜಿಲ್ಲೆಯ ಸರಕಾರಿ ಶಾಲೆಯ ಮಕ್ಕಳು ಉತ್ತಮ ಸಾಧನೆಗೈದಿರುವುದು ವಿಶೇಷವಾಗಿದೆ. ಖಾಸಗಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಹೆಚ್ಚಾಗಿರುತ್ತದೆ. ಆದರೆ ಅನೇಕ ಮೂಲಸೌಕರ್ಯಗಳ ಕೊರತೆಯ‌ ಮಧ್ಯೆಯೂ ಉತ್ತಮ ಸಾಧನೆ ಮಾಡಿರುವುದು ಗಮನಾರ್ಹವಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಜಿಲ್ಲಾಡಳಿತ, ಜಿಪಂ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ ಬೆಳಗಾವಿ/ಚಿಕ್ಕೋಡಿ ವತಿಯಿಂದ ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ವಿನೂತನವಾಗಿ ಆರಂಭಿಸಲಾಗಿರುವ ಸಿಇಟಿ-ಸಕ್ಷಮ್ ಅತ್ಯುತ್ತಮ ಕಾರ್ಯಕ್ರಮವಾಗಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಸಾಧನೆಗೆ ವೇದಿಕೆಯಾಗಬೇಕು. ಸರಕಾರಿ ಕಾಲೇಜುಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸಲಾಗುವುದು. ಕೆ-ಸಿಇಟಿಯಲ್ಲಿ ಉತ್ತಮ ಸಾಧನೆಗೈದ ಜಿಲ್ಲೆಯ ವಿದ್ಯಾರ್ಥಿಗಳನ್ನು ಸರಕಾರದ ಪರವಾಗಿ ಅಭಿನಂದನೆ ಸಲ್ಲಿಸಿದರು.

ಕಲಿಯುವವರು ಹಾಗೂ ಕಲಿಸುವವರು ಇಬ್ಬರಿಗೂ ಇಚ್ಛಾಶಕ್ತಿ ಇರಬೇಕು. ಆದ್ದರಿಂದ ಉತ್ತಮ‌ ಕಲಿಕಾ ವಾತಾವರಣ ಹಾಗೂ ಗುಣಮಟ್ಟದ ಶಿಕ್ಷಣ ಒದಗಿಸುವ ಇಚ್ಛಾಶಕ್ತಿ ಬೆಳೆಸಿಕೊಳ್ಳಬೇಕು. ಅಂದಾಗ ಮಾತ್ರ ಸರಕಾರಿ ಶಾಲಾ/ಕಾಲೇಜುಗಳು ಉತ್ಯಮ ಸಾಧನೆ‌ ಮಾಡುವುದು ಸಾಧ್ಯ ಎಂದರು.

ಕಲಿಯುವ ಒಂದೇ ಮಗುವಿದ್ದರೂ ಒಬ್ಬ ಶಿಕ್ಷಕ ಇರಬೇಕು ಎಂಬುದು ತಮ್ಮ ವಾದವಾಗಿದೆ. ಈ ರೀತಿಯ ಸೌಲಭ್ಯ ಒದಗಿಸಿದಾಗ ಮಾತ್ರ ಶೈಕ್ಷಣಿಕ ಪ್ರಗತಿ ಸಾಧ್ಯ. ಕೆ-ಸಿಇಟಿ ರ್‍ಯಾಂಕ್ ಬಂದಿರುವ ವಿದ್ಯಾರ್ಥಿಗಳು ಮುಂದಿನ ಶೈಕ್ಷಣಿಕ ತರಗತಿಯಲ್ಲೂ ಇದೇ ರೀತಿ ಪ್ರಗತಿ ಸಾಧಿಸಬೇಕು. ಯಮಕನಮರಡಿ ಕ್ಷೇತ್ರ ವ್ಯಾಪ್ತಿಯಲ್ಲಿ ನೂರಕ್ಕೂ ಅಧಿಕ‌ ಶಾಲಾ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಇನ್ನೈವತ್ತು ಶಾಲೆಗಳನ್ನು ನಿರ್ಮಿಸಿದರೆ ಮುಂದಿನ ಮೂವತ್ತು ವರ್ಷ ಮೂಲ ಸೌಕರ್ಯಗಳಿಗೆ ತೊಂದರೆಯಿಲ್ಲ. ಬಡವರ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಬೇಕಾದರೆ ಉತ್ತಮ ಮೂಲ ಸೌಕರ್ಯ ಒದಗಿಸುವುದು ಸರಕಾರದ‌ ಕರ್ತವ್ಯವಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಮಜಲಟ್ಟಿ ಹಾಗೂ ಬೈಲಹೊಂಗಲ ಮಾದರಿಯಲ್ಲಿ ನಿರ್ಮಿಸಲು ಅನುಕೂಲವಾಗುವಂತೆ ಪ್ರತಿ ತಾಲೂಕಿನ 2 ಶಾಲೆಗಳಿಗೆ ಒಟ್ಟು ₹5 ಕೋಟಿ ಹಾಗೂ 2 ಕಾಲೇಜುಗಳಿಗೆ ಒಟ್ಟು ₹5 ಕೋಟಿ ಅನುದಾನ ಲೋಕೋಪಯೋಗಿ ಇಲಾಖೆಯಿಂದ ನೀಡಲಾಗುವುದು ಎಂದರು.

ಶಾಸಕ ಆಸಿಫ್(ರಾಜು) ಸೇಠ್ ಮಾತನಾಡಿ, ಶೈಕ್ಷಣಿಕ ಪ್ರಗತಿಗಾಗಿ ಜಿಲ್ಲಾ ಉಸ್ತುವಾರಿ ಸಚಿವರು ಆದ್ಯತೆ ನೀಡಿದ್ದಾರೆ. ಅದೇ ರೀತಿ ಜಿಲ್ಲಾಡಳಿತ ಮತ್ತು ಜಿಪಂ ವತಿಯಿಂದಲೂ ಅಗತ್ಯ ಮೂಲ ಸೌಕರ್ಯ ಒದಗಿಸಲಾಗುತ್ತಿದೆ. ಉತ್ತಮ ಶಿಕ್ಷಣದಿಂದ ಮಾತ್ರ ಜೀವನದಲ್ಲಿ ಸಾಧನೆ ಸಾಧ್ಯವಾಗುತ್ತದೆ. ಆದ್ದರಿಂದ ಈ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸಬೇಕು ಎಂದರು.

ಜಿಪಂ ಸಿಇಒ ರಾಹುಲ್ ಶಿಂಧೆ ಮಾತನಾಡಿ, ಗ್ರಾಮೀಣ ಪ್ರದೇಶದ ಹಾಗೂ ಬಡ ಕುಟುಂಬದ ಮಕ್ಕಳನ್ನು ಸಿಇಟಿ ಪರೀಕ್ಷೆಗೆ ಸಜ್ಜುಗೊಳಿಸಲು ಸರಕಾರಿ ಪದವಿಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಸಿಇಟಿ ಸಕ್ಷಮ್ ಎಂಬ ವಿನೂತನ ತರಬೇತಿ ಕಾರ್ಯಕ್ರಮ ಜಿಲ್ಲೆಯಲ್ಲಿ ಆರಂಭಿಸಲಾಗಿತ್ತು. ಸಿಇಟಿ ಸಕ್ಷಮ್ ಮೂಲಕ ತರಬೇತಿ ಪಡೆಸುಕೊಂಡಿರುವ ಜಿಲ್ಲೆಯ ಒಟ್ಟು 61 ವಿದ್ಯಾರ್ಥಿಗಳು 50 ಸಾವಿರ ಒಳಗೆ ರ್‍ಯಾಕಿಂಗ್ ಪಡೆದುಕೊಂಡಿದ್ದಾರೆ ಎಂದರು.

ಬೆಳಗಾವಿಯಲ್ಲಿ ಕಳೆದ ಬಾರಿ 50 ಸಾವಿರ ರ್‍ಯಾಂಕಿನೊಳಗೆ ಕೇವಲ 4 ಜನರಿದ್ದರು ಈ ಬಾರಿ 18 ಜನರು ಇದ್ದಾರೆ. ಅದೇ ರೀತಿ ಚಿಕ್ಕೋಡಿಯಲ್ಲಿ ಈ ಬಾರಿ 43 ಜನರು ಬಂದಿದ್ದಾರೆ. ಇದು ಸಿಇಟಿ ಸಕ್ಷಮ್ ಯಶಸ್ವಿಗೆ ಸಾಕ್ಷಿಯಾಗಿದೆ ಎಂದರು.

ಮಜಲಟ್ಟಿ ಕಾಲೇಜಿನ ಪ್ರಾಚಾರ್ಯರು ಮಾತನಾಡಿ, ಬಡ ಮಕ್ಕಳಿಗೆ ಇದರಿಂದ ಬಹಳಷ್ಟು ಅನುಕೂಲವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಸ್ವತಃ ನಮ್ಮ ಮಜಲಟ್ಟಿ ಕಾಲೇಜಿಗೆ ಆಗಮಿಸಿ ಅನೇಕ ರೀತಿಯ ಸಲಹೆ ನೀಡಿದ್ದಾರೆ. ರಾಯಬಾಗ ಶಾಸಕರು ಕೂಡ ಸಾಕಷ್ಟು ಪ್ರೋತ್ಸಾಹ ನೀಡಿರುತ್ತಾರೆ. ಸಿಇಟಿ ಸಕ್ಷಮ್ ಸಂಪೂರ್ಣ ಉಚಿತವಾಗಿ ನಡೆಸಲಾಗಿದೆ. ಓಎಂಆರ್‌ ಶೀಟ್ ಗಳನ್ನು ಪೂರೈಸಲಾಗಿರುತ್ತದೆ. ಈ ಬಾರಿ ಲಕ್ಷದೊಳಗೆ 95 ವಿದ್ಯಾರ್ಥಿಗಳು ಬಂದಿದ್ದಾರೆ. ಮುಂದಿನ ಬಾರಿ 20 ಸಾವಿರ ರ್‍ಯಾಂಕಿನೊಳಗೆ ಅತೀ ಹೆಚ್ಚು ರ್‍ಯಾಂಕಗಳನ್ನು ಪಡೆಯಲಾಗುವುದು ಎಂದರು.

ಇದೇ ವೇಳೆ ಮಜಲಟ್ಟಿ ಕಾಲೇಜಿನ ವಿದ್ಯಾರ್ಥಿನಿ ಶಿವಾನಿ ಮತ್ತು ಬೈಲಹೊಂಗಲ ಕಾಲೇಜಿನ ಶಿಲ್ಪಾ ಪಟಾತ್ ಅವರು ಸಿಇಟಿ-ಸಕ್ಷಮನಿಂದ ಆಗಿರುವ ಅನುಕೂಲತೆಗಳನ್ನು ವಿವರಿಸಿದರು. ಸಚಿವ ಸತೀಶ ಜಾರಕಿಹೊಳಿ ಹಾಗೂ ಶಾಸಕ ಆಸೀಫ್ (ರಾಜು) ಸೇಠ ಅವರು ಸರ್ಕಾರದ 2025ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಉನ್ನತ ಶ್ರೇಣಿ ಪಡೆದಿರುವ ಸರ್ಕಾರಿ ವಿಜ್ಞಾನ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸನ್ಮಾನಿಸಿದರು. ರಾಯಬಾಗ ಶಾಸಕ ದುರ್ಯೋಧನ ಐಹೊಳೆ, ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿನಯ ನಾವಲಗಟ್ಟಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೇರಿದಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಮಜಲಟ್ಟಿ ಹಾಗೂ ಬೈಲಹೊಂಗಲ ಕಾಲೇಜುಗಳಿಗೆ ಜಾಸ್ತಿ ಬೇಡಿಕೆಯಿದೆ. ಇದೇ ರೀತಿಯಲ್ಲಿ ಪ್ರತಿ ತಾಲೂಕಿನಲ್ಲೂ ಕನಿಷ್ಠ ಒಂದು ಕಾಲೇಜು ಈ ರೀತಿ ಬೆಳೆಸಬೇಕು. ಚಿಕ್ಕೋಡಿ ಹಾಗೂ ಬೆಳಗಾವಿ ಶೈಕ್ಷಣಿಕ ಜಿಲ್ಲೆಗಳ ಶಾಲೆ ಮತ್ತು ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿಗೆ ಪ್ರತಿವರ್ಷ ಲೋಕೋಪಯೋಗಿ ಇಲಾಖೆಯಿಂದ ಪ್ರತ್ಯೇಕವಾಗಿ ₹5 ಕೋಟಿ ಅನುದಾನ ನೀಡಲಾಗುವುದು. ಸತೀಶ ಜಾರಕಿಹೊಳಿ, ಲೋಕೋಪಯೋಗಿ ಸಚಿವ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!