ಕನ್ನಡಪ್ರಭ ವಾರ್ತೆ ಮದ್ದೂರುಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜತೆಗೆ ಸಬ್ಸಿಡಿ, ಸಹಾಯಧನ, ಪಿಂಚಣಿ ಸೇರಿದಂತೆ ಎಲ್ಲ ಇಲಾಖೆಗಳ ಸೌಲಭ್ಯವನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವಲ್ಲಿ ಯಶಸ್ವಿಯಾಗಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಗುರುವಾರ ಹೇಳಿದರು.
ಶಿಂಷಾ ನದಿ ವ್ಯಾಪ್ತಿಯಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಶಾಸಕ ಕೆ.ಎಂ.ಉದಯ್ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಿದ್ದರು. ಸರ್ಕಾರ 499 ಲಕ್ಷ ರು. ಮಂಜೂರಾತಿ ನೀಡಿದೆ. ಅಧಿಕಾರಕ್ಕೆ ಬಂದ 8 ರಿಂದ 10 ತಿಂಗಳ ಅವಧಿಯಲ್ಲಿ ಮದ್ದೂರು ಕ್ಷೇತ್ರದ ಶಾಸಕ ಕೆ.ಎಂ.ಉದಯ್ ಅಭಿವೃದ್ಧಿಗೆ ಹೆಚ್ಚಿನ ಆಸಕ್ತಿ ತೋರಿ ಕೋಟ್ಯಂತರ ರು .ಅನುದಾನ ತಂದು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಶಾಸಕ ಕೆ.ಎಂ.ಉದಯ್ ಶಾಸಕರಾಗಿ ಆಯ್ಕೆಯಾದಾಗ ಅವರು ಹೊಸ ಶಾಸಕರು ಅವರಿಗೇನು ಗೊತ್ತು ಎನ್ನುತ್ತಿದ್ದರು. ಕೆಲಸ ಮಾಡುವ ಇಚ್ಛಾ ಶಕ್ತಿ ಇದ್ದರೆ ಯಾವುದೇ ಅಭಿವೃದ್ಧಿ ಮಾಡಬಹುದು. ಅದರಂತೆ ಉದಯ್ ಅಭಿವೃದ್ಧಿ ಕೆಲಸಗಳನ್ನು ಹುಡುಕಿ ಹುಡುಕಿ ಮಾಡುತ್ತಿರುವುದೇ ಸಾಕ್ಷಿ ಎಂದರು.ಶಾಸಕ ಕೆ.ಎಂ.ಉದಯ್ ಮಾತನಾಡಿ, ಹೊಳೆ ಆಂಜನೇಯ ದೇವಾಲಯದ ಬಳಿ 307 ಲಕ್ಷ ರು. ಅಂದಾಜು ವೆಚ್ಚದಲ್ಲಿ ತಡೆಗೋಡೆ ನಿರ್ಮಾಣಕ್ಕೆ, ಪಟ್ಟಣದ ಕೊಳಚೆ ನೀರು ಶುದ್ಧೀಕರಣ ಘಟಕದ ಬಳಿ ಇರುವ ಶಿಂಷಾ ನದಿಗೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ 499 ಲಕ್ಷ ರು ಮಂಜೂರಾಗಿದೆ ಎಂದು ತಿಳಿಸಿದರು.
ದೇಗುಲವನ್ನು ಪ್ರವಾಸಿ ತಾಣ ಮಾಡಲಾಗುವುದು. ಪ್ರವಾಹ ಬಂದಾಗ ಶಿಂಷಾ ನದಿ ನೀರು ದೇಗುಲಕ್ಕೆ ಮತ್ತು ಸುತ್ತಮುತ್ತ ಇರುವ ಜಮೀನುಗಳಿಗೆ ನುಗ್ಗಿ ಭಕ್ತಾಧಿಗಳಿಗೆ ಹಾಗೂ ಬೆಳೆಗಳು ನಾಶವಾಗಿ ರೈತರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ತಡೆಗೋಡೆ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಲಾಗಿದೆ ಎಂದರು. ಈ ವೇಳೆ ಡೀಸಿ ಡಾ.ಕುಮಾರ, ಜಿಲ್ಲಾ ಎಸ್ಪಿ ಎನ್. ಯತೀಶ್, ಪುರಸಭಾ ಸದಸ್ಯರಾದ ಸರ್ವಮಂಗಳ, ಸಿದ್ದರಾಜು, ಸಚಿನ್, ಮನೋಜ್ ಮುಖಂಡರಾದ ಫೈರೋಜ್, ಎಂ.ಡಿ.ಮಹಾಲಿಂಗಯ್ಯ, ಯಶವಂತ್ ಹಾಜರಿದ್ದರು.