ಕನ್ನಡಪ್ರಭ ವಾರ್ತೆ ಭಾರತೀನಗರ
ಜಾಗತಿಕ ತಾಪಮಾನ ಏರಿಕೆಯಿಂದ ಅತಿವೃಷ್ಟಿ, ಅನಾವೃಷ್ಟಿಗಳು ಸಂಭವಿಸಿ ಭಾರತೀಯ ರೈತರಿಗೆ ಪ್ರತಿ ವರ್ಷ 5 ಲಕ್ಷ ಕೋಟಿ ರು.ಗೂ ಅಧಿಕ ಬೆಳೆ ನಷ್ಟವಾಗುತ್ತಿದೆ ಎಂದು ಹಿರಿಯ ವಿಜ್ಞಾನಿ ಡಾ.ಸಧಿ ಶೇಷಾದ್ರಿ ತಿಳಿಸಿದರು.ಭಾರತೀಕಾಲೇಜಿನ ಕುವೆಂಪು ಸಭಾಂಗಣದಲ್ಲಿ ತುಮಕೂರು ಗಾಂಧೀಜಿ ಸಹಜ ಬೇಸಾಯ ಆಶ್ರಮ, ಭಾರತೀ ಶಿಕ್ಷಣ ಸಂಸ್ಥೆ ಸಂಪೂರ್ಣ ಸಾವಯವ ಕೃಷಿಕರ ಸಂಘ ಮಳವಳ್ಳಿ ಆಶ್ರಯದಲ್ಲಿ ಕೃಷಿ ಭೂಮಿಯಲ್ಲಿ ಇಂಗಾಲದ ಸಂಗ್ರಹಣೆ ಮತ್ತು ರೈತರಿಗೆ ಸಿಗಬೇಕಾದ ಮನ್ನಣೆ ಎಂಬ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಆರ್ಥಿಕ ಅಭಿವೃದ್ಧಿ ಸಾಧಿಸುವುದು ಮಾತ್ರ ಅಭಿವೃದ್ಧಿಯ ಏಕೈಕ ಮಾನದಂಡ ಎಂಬ ಹುಚ್ಚು ಪೈಪೋಟಿಯಲ್ಲಿ ಪ್ರಮುಖವಾಗಿ ಸಾಗುತ್ತಿರುವ ಚೀನಾ, ಅಮೆರಿಕಾ, ಜಪಾನ್, ಯುರೋಪ್, ರಷ್ಯಾ, ಭಾರತ ಇನ್ನಿತರೇ ದೇಶಗಳು ನೈಸರ್ಗಿಕ ಸಂಪನ್ಮೂಲಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಮುಂದಿನ 50 ರಿಂದ 60 ವರ್ಷದಲ್ಲಿ ಕಲ್ಲಿದ್ದಲು, ತೈಲಬಾವಿಗಳು, ಖನಿಜ ಸಂಪತ್ತು ಬರಿದಾಗುತ್ತದೆ ಎಂದು ವಿಷಾದಿಸಿದರು.ಶಾಸಕ ಮಧು ಜಿ.ಮಾದೇಗೌಡ ಮಾತನಾಡಿ, ಸಂಪೂರ್ಣ ಸಾವಯವ ಕೃಷಿಕರ ಸಂಘ ರೈತರಿಗೆ ಜಾಗೃತಿಯ ಜೊತೆಗೆ ಅಭಿವೃದ್ಧಿ ಪಡಿಸುವುದರ ಬಗ್ಗೆ ಮುಂದಾಗುತ್ತಿದೆ. ಇಂತಹ ಕಾರ್ಯಕ್ರಮಗಳನ್ನು ಮಂಡ್ಯ ಜಿಲ್ಲಾದ್ಯಂತ ಆಯೋಜಿಸುತ್ತಿರುವುದಕ್ಕೆ ನಮ್ಮ ಸಂಸ್ಥೆಯಿಂದ ಸಂಪೂರ್ಣ ಸಹಕಾರದೊಂದಿಗೆ ಬೆಂಬಲವನ್ನು ನೀಡುತ್ತೇವೆ ಎಂದರು.
ತುಮಕೂರಿನ ಚಿಂತಕರು ಹಾಗೂ ಪರಿಸರವಾದಿ ಸಿ.ಯತಿರಾಜ್ ಮಾತನಾಡಿ, ಹವಾಮಾನ ಬದಲಾವಣೆ ಹೆಸರಿನಲ್ಲಿ ಸುಸ್ಥಿರ ಅಭಿವೃದ್ಧಿ ಸಾಧಿಸುವ ಯೋಜನೆ ರೂಪಿಸಲು ಮತ್ತು ಹವಾಮಾನ ಬದಲಾವಣೆ ನಿಧಿಯ ಹಣಕಾಸು ಸೌಲಭ್ಯ ಬಳಸಿಕೊಳ್ಳಲು ಬಂಡವಾಳಶಾಹಿ ಕಾರ್ಪೊರೇಟ್ ಕಂಪನಿಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುತ್ತಿದೆ ಎಂದರು.ಸಮಾಜದಲ್ಲಿ ಸುಸ್ಥಿರ ಅಭಿವೃದ್ಧಿ ಸಾದಿಸಲು ಕೃಷಿ ಕ್ಷೇತ್ರ ಪ್ರಮುಖ ಪಾತ್ರ ವಹಿಸುತ್ತದೆ, ಇಂತಹ ಕೃಷಿ ಕ್ಷೇತ್ರ ಮತ್ತು ರೈತರನ್ನು ಪರಿಗಣಿಸದೆ ಬಹುರಾಷ್ಟ್ರೀಯ ಕಂಪನಿಗಳು ತಯಾರಿಕೆ ಮಾಡುವ ಸೋಲಾರ್ ಎನರ್ಜಿ, ವಿಂಡ್ ಎನರ್ಜಿ, ಬ್ಯಾಟರಿ ಚಾಲಿತ ವಾಹನ ತಯಾರಿಕೆಯನ್ನು ಪ್ರಮುಖವಾಗಿ ತೆಗೆದುಕೊಂಡು ಇವುಗಳ ಮೇಲೆ ಹೆಚ್ಚು ಹಣಕಾಸು ನೆರವು ನೀಡುತ್ತಿರುವುದು ಒಂದು ದೊಡ್ಡ ದಂಧೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಪೂರ್ಣ ಸಾವಯವ ಕೃಷಿಕರ ಸಂಘದ ಅಧ್ಯಕ್ಷ ಮಹೇಶ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಾವಯವ ಕೃಷಿಕ ರೈತ ಬಿ.ಎಂ.ನಂಜೇಗೌಡ, ಕಾರ್ಯಕ್ರಮದ ಆಯೋಜಕರಾರ ಮಳವಳ್ಳಿ ಮಹೇಶ್ ಕುಮಾರ್, ತುಮಕೂರು ಗಾಂಧೀಜಿ ಸಹಜ ಬೇಸಾಯ ಆಶ್ರಮ ಡಾ.ಎಚ್.ಮಂಜುನಾಥ್, ರವೀಶ್, ರಾಷ್ಟ್ರೀಯ ಸ್ವಾಭಿಮಾನ ಆಂದೋಲನದ ಸಿ. ಪಿ.ಮಾಧವನ್, ಕೊಳ್ಳೇಗಾಲ ಜೆ.ಎಸ್.ಬಿ. ಪ್ರತಿಷ್ಠಾನದ ಎಸ್. ಶಶಿಕುಮಾರ್, ಸತ್ತೇಗಾಲದ ಪ್ರಶಾಂತ್ ಜಯರಾಮ್, ಕೆ. ಸಿ. ವೆಂಕಟೇಶ್ ಸೇರಿದಂತೆ ಹಲವು ರೈತ ಮುಖಂಡರು ಪಾಲ್ಗೊಂಡಿದ್ದರು.