ಪೌರಕಾರ್ಮಿಕರಿಗೆ 5 ಲಕ್ಷ ರು. ಆರೋಗ್ಯ ವಿಮೆ: ಜಿಲ್ಲಾಧಿಕಾರಿ ಸೂಚನೆ

KannadaprabhaNewsNetwork |  
Published : Nov 29, 2024, 01:00 AM IST
ಸಭೆಯಲ್ಲಿ ಮಾತನಾಡುತ್ತಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಎಂ.ಪಿ. | Kannada Prabha

ಸಾರಾಂಶ

ಈಗಾಗಲೇ ಮಹಾನಗರ ಪಾಲಿಕೆಯ ನಿಧಿಯಿಂದ 708 ಮಂದಿ ಪೌರ ಕಾರ್ಮಿಕರು ಮತ್ತು ಅವರ ಅವಲಂಬಿತರಿಗೆ ಖಾಸಗಿ ವಿಮಾ ಕಂಪೆನಿ ಮೂಲಕ 3 ಲಕ್ಷ ರು. ಆರೋಗ್ಯ ವಿಮೆ ನೀಡಲಾಗಿದೆ. ಈ ವಿಮಾ ಮೊತ್ತ ಕಡಿಮೆಯಾಗಿದ್ದು, ಗಂಭೀರ ಕಾಯಿಲೆ ಚಿಕಿತ್ಸೆಗಳಿಗೆ ಸಾಕಾಗುವುದಿಲ್ಲ ಎಂದು ಪೌರಕಾರ್ಮಿಕರಿಂದ ಮನವಿಗಳು ಬಂದಿದ್ದು, ಈ ನಿಟ್ಟಿನಲ್ಲಿ ಮುಂದಿನ ಸಾಲಿನಿಂದ ಆರೋಗ್ಯ ವಿಮಾ ಮೊತ್ತವನ್ನು 5 ಲಕ್ಷ ರು.ಗೆ ಏರಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಈಗಾಗಲೇ ನೀಡಿರುವ ಆರೋಗ್ಯ ವಿಮೆ ಕವರೇಜನ್ನು 5 ಲಕ್ಷ ರು.ಗೆ ಏರಿಸುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಸೂಚಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಸಫಾಯಿ ಕರ್ಮಚಾರಿ/ ಮ್ಯಾನುವೆಲ್ ಸ್ಕ್ಯಾವೆಂಜರ್‌ಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈಗಾಗಲೇ ಮಹಾನಗರ ಪಾಲಿಕೆಯ ನಿಧಿಯಿಂದ 708 ಮಂದಿ ಪೌರ ಕಾರ್ಮಿಕರು ಮತ್ತು ಅವರ ಅವಲಂಬಿತರಿಗೆ ಖಾಸಗಿ ವಿಮಾ ಕಂಪೆನಿ ಮೂಲಕ 3 ಲಕ್ಷ ರು. ಆರೋಗ್ಯ ವಿಮೆ ನೀಡಲಾಗಿದೆ. ಈ ವಿಮಾ ಮೊತ್ತ ಕಡಿಮೆಯಾಗಿದ್ದು, ಗಂಭೀರ ಕಾಯಿಲೆ ಚಿಕಿತ್ಸೆಗಳಿಗೆ ಸಾಕಾಗುವುದಿಲ್ಲ ಎಂದು ಪೌರಕಾರ್ಮಿಕರಿಂದ ಮನವಿಗಳು ಬಂದಿದ್ದು, ಈ ನಿಟ್ಟಿನಲ್ಲಿ ಮುಂದಿನ ಸಾಲಿನಿಂದ ಆರೋಗ್ಯ ವಿಮಾ ಮೊತ್ತವನ್ನು 5 ಲಕ್ಷ ರು.ಗೆ ಏರಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಪೌರ ಕಾರ್ಮಿಕರ ಪಟ್ಟಿಯಲ್ಲಿ ನಕಲಿ ವ್ಯಕ್ತಿಗಳು ಸೇರ್ಪಡೆಯಾಗಿರುವ ದೂರಿನ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಅವರು ನಗರಾಭಿವೃದ್ಧಿ ಕೋಶದ ಅಧಿಕಾರಿಗಳಿಗೆ ಸೂಚಿಸಿದರು.

ಸರ್ಕಾರ ನಿಗದಿಪಡಿಸಿದ ಕರ್ತವ್ಯಗಳ ಬದಲಾಗಿ ಇತರ ಕೆಲಸಗಳಿಗೆ ಪೌರ ಕಾರ್ಮಿಕರನ್ನು ನಿಯೋಜಿಸಬಾರದು ಎಂದು ಈಗಾಗಲೇ ನಗರ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ ಎಂದರು.

ಸಂಜೀವಿನಿ ಒಕ್ಕೂಟದಲ್ಲಿ ದುಡಿಯುತ್ತಿರುವ ಸಿಬ್ಬಂದಿಗೆ ಗುತ್ತಿಗೆದಾರರ ಬದಲು ಗ್ರಾಮ ಪಂಚಾಯ್ತಿಗಳ ನೇರ ಅಧೀನದಲ್ಲಿ ವೇತನ ಪಾವತಿಸುವ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಪೌರ ಕಾರ್ಮಿಕರ ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಲು ಈಗಾಗಲೇ ಪೌರಾಡಳಿತ ನಿರ್ದೇಶನಾಲಯದ ಮಾರ್ಗದರ್ಶನ ಕೋರಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಪ್ರತಿ ತಿಂಗಳು ಕುಂದುಕೊರತೆ ಸಭೆ: ಇದೇ ಸಂದರ್ಭ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಸಿದ ಜಿಲ್ಲಾಧಿಕಾರಿ, ಆಯಾ ಉಪವಿಭಾಗಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಪ್ರತಿ ತಿಂಗಳು ಕುಂದುಕೊರತೆ ಸಭೆ ನಡೆಸಬೇಕು ಎಂದು ಸೂಚಿಸಿದರು.ಅಪರ ಜಿಲ್ಲಾಧಿಕಾರಿ ಡಾ.ಜಿ. ಸಂತೋಷ್ ಕುಮಾರ್ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪಂಗಡದ ಅರ್ಹ ಕ್ರೀಡಾಪಟುಗಳಿಗೆ ಸೌಲಭ್ಯಗಳನ್ನು ಆಯಾ ಸ್ಥಳೀಯ ಸಂಸ್ಥೆಗಳು ತಮ್ಮ ಮೀಸಲು ನಿಧಿಯಲ್ಲಿ ಮಂಜೂರು ಮಾಡಬಹುದು ಎಂದು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಹೇಮಲತಾ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಜನವರಿಯಿಂದ ನವೆಂಬರ್ 20ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 45 ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 36 ಪ್ರಕರಣಗಳಲ್ಲಿ 34 ಲಕ್ಷ ರು. ಪರಿಹಾರ ಮಂಜೂರು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.ಜಿಪಂ ಸಿಇಒ ಡಾ. ಆನಂದ್, ಡಿಸಿಪಿ ಸಿದ್ಧಾರ್ಥ್ ಗೋಯಲ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ, ಮಂಗಳೂರು ಉಪವಿಭಾಗಾಧಿಕಾರಿ ಹರ್ಷವರ್ಧನ್, ವಿವಿಧ ಇಲಾಖೆ ಅಧಿಕಾರಿಗಳು, ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರು, ಪೌರಕಾರ್ಮಿಕರ ಪ್ರತಿನಿಧಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೊಸ ತೊಡಕು ಹಿನ್ನೆಲೆಯಲ್ಲಿ ಮುಂಜಾನೆಯೇ ಮಾಂಸದಂಗಡಿ ಮುಂದೆ ಜನರ ಸರದಿ ಸಾಲು
ಬೆಂಗಳೂರು ನಗರದಲ್ಲಿ ರಂಜಾನ್‌ ಆಚರಣೆ ಭರದ ಸಿದ್ಧತೆ