ಹೊಸ ಘಟಕಗಳಿಂದ ಶೇ. 50ರಷ್ಟು ವಿದ್ಯುತ್ ರಾಜ್ಯಕ್ಕೆ ಮೀಸಲು; ಡಾ. ಅಜಿತ್ ಕುಮಾರ್

KannadaprabhaNewsNetwork |  
Published : Mar 02, 2026, 02:30 AM IST
 | Kannada Prabha

ಸಾರಾಂಶ

ದೇಶದ ಇಂಧನ ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಕೈಗಾ ಅಣುವಿದ್ಯುತ್ ಸ್ಥಾವರವು ವಿಸ್ತರಣೆಯ ಹಂತದಲ್ಲಿದ್ದು, ನೂತನ 5 ಮತ್ತು 6ನೇ ಘಟಕಗಳ ನಿರ್ಮಾಣ ಕಾರ್ಯ ಚುರುಕುಗೊಂಡಿದೆ.

ಉದ್ಯೋಗ ತರಬೇತಿಯಲ್ಲಿ ಸ್ಥಳೀಯರ ನಿರಾಸಕ್ತಿಗೆ ಬೇಸರ

ಕನ್ನಡಪ್ರಭ ವಾರ್ತೆ ಕಾರವಾರ

ದೇಶದ ಇಂಧನ ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಕೈಗಾ ಅಣುವಿದ್ಯುತ್ ಸ್ಥಾವರವು ವಿಸ್ತರಣೆಯ ಹಂತದಲ್ಲಿದ್ದು, ನೂತನ 5 ಮತ್ತು 6ನೇ ಘಟಕಗಳ ನಿರ್ಮಾಣ ಕಾರ್ಯ ಚುರುಕುಗೊಂಡಿದೆ. ಈ ಘಟಕಗಳು ಪೂರ್ಣಗೊಂಡ ನಂತರ ಉತ್ಪಾದನೆಯಾಗುವ ಒಟ್ಟು ವಿದ್ಯುತ್‌ನಲ್ಲಿ ಶೇ. 50ರಷ್ಟು ಪಾಲನ್ನು ಕರ್ನಾಟಕ ರಾಜ್ಯಕ್ಕೆ ನೀಡಲಾಗುವುದು ಎಂದು ಅಣು ಶಕ್ತಿ ಆಯೋಗದ ಅಧ್ಯಕ್ಷ ಹಾಗೂ ಕೇಂದ್ರ ಅಣುಶಕ್ತಿ ಇಲಾಖೆಯ ಕಾರ್ಯದರ್ಶಿ ಡಾ. ಅಜಿತ್ ಕುಮಾರ್ ಮೊಹಂತಿ ತಿಳಿಸಿದರು. ಕೈಗಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರೆಗೆ ಕೈಗಾ ಸ್ಥಾವರವು ಒಟ್ಟು 1,33,876 ದಶಲಕ್ಷ ಯೂನಿಟ್ ಹಸಿರು ವಿದ್ಯುತ್ ಉತ್ಪಾದಿಸುವ ಮೂಲಕ ಪರಿಸರಕ್ಕೆ ಸೇರಬಹುದಾಗಿದ್ದ 1080 ಲಕ್ಷ ಟನ್ ಕಾರ್ಬನ್ ಹೊರಸೂಸುವಿಕೆಯನ್ನು ತಡೆಗಟ್ಟುವಲ್ಲಿ ಮಹತ್ವದ ಮೈಲುಗಲ್ಲು ಸ್ಥಾಪಿಸಿದೆ ಎಂದರು.ಕೈಗಾದಲ್ಲಿ ನಿರ್ಮಾಣವಾಗುತ್ತಿರುವ ಹೊಸ ಘಟಕಗಳು ಸಂಪೂರ್ಣವಾಗಿ ಭಾರತೀಯ ತಂತ್ರಜ್ಞಾನದ ಪ್ರೆಶರೈಸ್ಡ್ ಹೆವಿ ವಾಟರ್ ರಿಯಾಕ್ಟರ್ ಮಾದರಿಯದ್ದಾಗಿವೆ. 220 ಮೆಗಾವ್ಯಾಟ್‌ನಿಂದ 700 ಮೆಗಾವ್ಯಾಟ್‌ಗೆ ತಂತ್ರಜ್ಞಾನವನ್ನು ಮೇಲ್ದರ್ಜೆಗೇರಿಸಲಾಗಿದ್ದು, ಇದು ಜಾಗತಿಕ ಮಟ್ಟದಲ್ಲಿ ಅತ್ಯಂತ ಸುರಕ್ಷಿತ ಹಾಗೂ ಕಡಿಮೆ ವೆಚ್ಚದ ವ್ಯವಸ್ಥೆಯಾಗಿದೆ. ಇದರೊಂದಿಗೆ, ಕೇವಲ 100-200 ಎಕರೆ ಜಾಗದಲ್ಲಿ ಕಾರ್ಯನಿರ್ವಹಿಸಬಲ್ಲ 55 ಮೆಗಾವ್ಯಾಟ್ ಸಾಮರ್ಥ್ಯದ ಸ್ಮಾಲ್ ಮಾಡ್ಯುಲರ್ ರಿಯಾಕ್ಟರ್ ಸ್ಥಾಪನೆಗೂ ಪ್ರಾಥಮಿಕ ಚಿಂತನೆ ನಡೆಸಲಾಗಿದೆ. ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಉತ್ತೇಜನ ನೀಡಲು ಕೇಂದ್ರ ಸರ್ಕಾರವು ಈಗಾಗಲೇ ಶಾಂತಿ ಮಸೂದೆಯನ್ನು ಜಾರಿಗೆ ತಂದಿದೆ. ಭವಿಷ್ಯದಲ್ಲಿ ನೈಸರ್ಗಿಕ ಯುರೇನಿಯಂ ಬದಲಿಗೆ ಭಾರತದಲ್ಲಿ ಹೇರಳವಾಗಿ ದೊರೆಯುವ ಥೋರಿಯಂ ಅನ್ನು ಬಳಸುವ ನಿಟ್ಟಿನಲ್ಲಿ ಸಂಶೋಧನೆಗಳು ಸಾಗುತ್ತಿವೆ ಎಂದು ತಿಳಿಸಿದರು.ಸ್ಥಳೀಯರಿಗೆ ಉದ್ಯೋಗ ನೀಡುವ ವಿಚಾರದಲ್ಲಿ ತಾರತಮ್ಯದ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಕೈಗಾದ ಸ್ಥಳ ನಿರ್ದೇಶಕ ಬಿ. ವಿನೋದ್ ಕುಮಾರ್, ಪ್ರಸ್ತುತ ಕೈಗಾದಲ್ಲಿರುವ ಒಟ್ಟು 1298 ನಿಯಮಿತ ಸಿಬ್ಬಂದಿ ಪೈಕಿ 805 ಮಂದಿ ಕರ್ನಾಟಕದವರಾಗಿದ್ದು, ಅದರಲ್ಲಿ 407 ಮಂದಿ ಉತ್ತರ ಕನ್ನಡ ಜಿಲ್ಲೆಯವರೇ ಆಗಿದ್ದಾರೆ. ಆದರೆ ಉದ್ಯೋಗ ನೇಮಕಾತಿ ಪರೀಕ್ಷೆಗಳಿಗೆ ಸ್ಥಳೀಯ ಯುವಕರಲ್ಲಿ ಆಸಕ್ತಿಯ ಕೊರತೆ ಕಂಡುಬರುತ್ತಿದೆ. ಇತ್ತೀಚೆಗೆ ಆಯೋಜಿಸಿದ್ದ ಉಚಿತ ತರಬೇತಿಗೆ 3000 ಮಂದಿ ಅರ್ಜಿ ಸಲ್ಲಿಸಿದ್ದರೂ, ಕೇವಲ 130ರಿಂದ 180 ಅಭ್ಯರ್ಥಿಗಳು ಮಾತ್ರ ಹಾಜರಾಗಿದ್ದರು. ಅಲ್ಲದೆ, ಆನ್‌ಲೈನ್ ಪರೀಕ್ಷೆ ನಡೆಸಲು ಜಿಲ್ಲೆಯಲ್ಲಿ ಸುಸಜ್ಜಿತ ಕಂಪ್ಯೂಟರ್ ಕೇಂದ್ರಗಳ ಕೊರತೆ ಇರುವುದರಿಂದ ಪರೀಕ್ಷೆ ಅನಿವಾರ್ಯವಾಗಿ ಬೇರೆಡೆ ನಡೆಸಬೇಕಾಗುತ್ತಿದೆ ಎಂದು ತಿಳಿಸಿದರು.ಇನ್ನು ಕೈಗಾ ಸಿಎಸ್‌ಆರ್ ಅನುದಾನ ಬಳಕೆ ಕುರಿತು ಮಾಹಿತಿ ನೀಡಿದ ಎನ್‌ಪಿಸಿಐಎಲ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಭುವನ್ ಚಂದ್ರ ಪಾಠಕ್, ಕೈಗಾ ಸ್ಥಾವರವು ಕೇವಲ ವಿದ್ಯುತ್ ಉತ್ಪಾದನೆಗೆ ಸೀಮಿತವಾಗದೇ, ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ವಾರ್ಷಿಕ ₹12 ಕೋಟಿಗೂ ಅಧಿಕ ಮೊತ್ತ ವಿನಿಯೋಗಿಸುತ್ತಿದೆ. ಈ ಅನುದಾನದಡಿ ಈಗಾಗಲೇ 30 ಶಾಲೆಗಳು, 15 ಸಮುದಾಯ ಭವನಗಳು ಮತ್ತು 2 ಆಸ್ಪತ್ರೆ ಕಟ್ಟಡ ನಿರ್ಮಿಸಲಾಗಿದೆ. ಸುತ್ತಮುತ್ತಲಿನ ಗ್ರಾಮೀಣ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕಾಗಿ ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ ಎಂದ ಅವರು, 2040ರ ವೇಳೆಗೆ 100 ಗಿಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿಯ ನಿಟ್ಟಿನಲ್ಲಿ ಕರ್ನಾಟಕದಲ್ಲಿ 700 ಮೆಗಾವ್ಯಾಟ್‌ನ 10 ಘಟಕಗಳನ್ನು ಒಂದೇ ಸೂರಿನಡಿ ಸ್ಥಾಪಿಸುವ ಬೃಹತ್ ಯೋಜನೆ ಸರ್ಕಾರದ ಮುಂದಿದ್ದು, ಇದಕ್ಕಾಗಿ ಸೂಕ್ತ ಭೂಮಿಯ ನಿರೀಕ್ಷೆಯಲ್ಲಿದೆ ಎಂದು ಮಾಹಿತಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಡೋಟ ಬೇಡವೆಂದು ಸಿಎಂ ಬಳಿಗೆ ಸರ್ವ ಪಕ್ಷಗಳ ನಿಯೋಗ
ಕೊಟ್ಟೂರು ಕೆರೆ ತುಂಬಿಸುವ ಯೋಜನೆಗೆ ಸಿಗುತ್ತಾ ಹಸಿರು ನಿಶಾನೆ?