ಯುಬಿಡಿಟಿಯಲ್ಲಿ ಶೇ.50 ಪೇಮೆಂಟ್ ಸೀಟು ಖಂಡನೀಯ

KannadaprabhaNewsNetwork |  
Published : Sep 11, 2024, 01:03 AM IST
10ಕೆಡಿವಿಜಿ2, 3, 4, 5-ದಾವಣಗೆರೆ ಸರ್ಕಾರಿ ಯುಬಿಡಿಟಿ ಕಾಲೇಜಿನಲ್ಲಿ ಶೇ.50 ಪೇಮೆಂಟ್ ಸೀಟ್ ಮಾಡಿರುವುದನ್ನು ವಿರೋಧಿಸಿ ಎಐಡಿಎಸ್ಓ, ಯುಬಿಡಿಟಿ ಉಳಿಸಿ ಹೋರಾಟ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟಿಸಿದರು. ...............10ಕೆಡಿವಿಜಿ3, 4, 5-ದಾವಣಗೆರೆ ಸರ್ಕಾರಿ ಯುಬಿಡಿಟಿ ಕಾಲೇಜಿನಲ್ಲಿ ಶೇ.50 ಪೇಮೆಂಟ್ ಸೀಟ್ ಮಾಡಿರುವುದನ್ನು ವಿರೋಧಿಸಿ ಎಐಡಿಎಸ್ಓ, ಯುಬಿಡಿಟಿ ಉಳಿಸಿ ಹೋರಾಟ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ  ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಮುಖಂಡರು ಮಾತನಾಡಿದರು. | Kannada Prabha

ಸಾರಾಂಶ

ರಾಜ್ಯದ ಪ್ರತಿಷ್ಠಿತ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಖ್ಯಾತಿಯ ದಾವಣಗೆರೆಯ ಯುಬಿಡಿಟಿಯಲ್ಲಿ ಶೇ.50ರಷ್ಟು ಸೀಟುಗಳನ್ನು ಪೇಮೆಂಟ್ ಕೋಟಾ ಮಾಡಿರುವ ಕ್ರಮ ಖಂಡಿಸಿ ಎಐಡಿಎಸ್‌ಐ ಜಿಲ್ಲಾ ಘಟಕ ಹಾಗೂ ಯುಬಿಡಿಟಿ ಉಳಿಸಿ ಹೋರಾಟ ಸಮಿತಿ ನೇತೃತ್ವದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ನಗರದಲ್ಲಿ ಮಂಗಳವಾರ ಪ್ರತಿಭಟಿಸಿದರು.

- ಎಐಡಿಎಸ್‌ಐ ಜಿಲ್ಲಾ ಘಟಕ, ಯುಬಿಡಿಟಿ ಉಳಿಸಿ ಹೋರಾಟ ಸಮಿತಿ ನೇತೃತ್ವದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಆಗ್ರಹ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯದ ಪ್ರತಿಷ್ಠಿತ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಖ್ಯಾತಿಯ ದಾವಣಗೆರೆಯ ಯುಬಿಡಿಟಿಯಲ್ಲಿ ಶೇ.50ರಷ್ಟು ಸೀಟುಗಳನ್ನು ಪೇಮೆಂಟ್ ಕೋಟಾ ಮಾಡಿರುವ ಕ್ರಮ ಖಂಡಿಸಿ ಎಐಡಿಎಸ್‌ಐ ಜಿಲ್ಲಾ ಘಟಕ ಹಾಗೂ ಯುಬಿಡಿಟಿ ಉಳಿಸಿ ಹೋರಾಟ ಸಮಿತಿ ನೇತೃತ್ವದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ನಗರದಲ್ಲಿ ಮಂಗಳವಾರ ಪ್ರತಿಭಟಿಸಿದರು.

ಯುಬಿಡಿಟಿ ಕಾಲೇಜು ಬಳಿಯಿಂದ ಮಳೆಯನ್ನೂ ಲೆಕ್ಕಿಸದೇ ಶ್ರೀ ಜಯದೇವ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು, "ಯುಬಿಡಿಟಿ ಉಳಿಸಿ ", "ಸರ್ಕಾರಿ ಕಾಲೇಜಿನಲ್ಲಿ ಸೀಟು ವ್ಯಾಪಾರೀಕರಣ ಸಲ್ಲದು ", "ಬಡ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣದಿಂದ ದೂರ ತಳ್ಳುವ ಸರ್ಕಾರದ ನೀತಿ ಖಂಡನೀಯ " ಎಂದು ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.

ಎಐಡಿಎಸ್‌ಒ ರಾಜ್ಯ ಕಚೇರಿ ಕಾರ್ಯದರ್ಶಿ ಮಹಾಂತೇಶ ಬೀಳೂರು ಮಾತನಾಡಿ, ಬಡವರ ಪರವೆಂದು ಮುಖವಾಡ ಹೊತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಶ್ರೀಮಂತರ ಪರವಾಗಿರುವುದು ಇದರಿಂದಲೇ ಸ್ಪಷ್ಟವಾಗುತ್ತದೆ. ಬೆಳಗಾವಿಯ ವಿಟಿಯು ಅಧೀನದ ದಾವಣಗೆರೆ ಯುಬಿಡಿಟಿ ಕಾಲೇಜಿನಲ್ಲಿ ಶೇ.50 ಸೀಟುಗಳನ್ನು ಉನ್ನತ ಸರ್ಕಾರಿ ಶುಲ್ಕ ಹೆಸರಿನಲ್ಲಿ ಮಾರಾಟ ನೀತಿಯನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.

ಉನ್ನತ ಶಿಕ್ಷಣ ದೂರ ಆತಂಕ:

ಪ್ರಸಕ್ತ ಸಾಲಿನ ಎಂಜಿನಿಯರಿಂಗ್ ಸೀಟು ಹಂಚಿಕೆಯಲ್ಲಿ ಸರ್ಕಾರ ಬಡವರಿಗೆ ದ್ರೋಹವೆಸಗಿದೆ. ರಾಜ್ಯದ ಪ್ರಥಮ ಸರ್ಕಾರಿ ಎಂಜಿನಿಯರಿಂಗ್ ಕಾಲೇಜ್ ಆಗಿರುವ ಯುಬಿಡಿಟಿಯಲ್ಲಿ 504 ಸೀಟುಗಳ ಪೈಕಿ ಶೇ.50 ಸೀಟುಗಳನ್ನು ಹೆಚ್ಚಿನ ಶುಲ್ಕಕ್ಕೆ ಮಾರಿಕೊಳ್ಳುತ್ತಿದೆ. ಮೂಲ ಶುಲ್ಕ ₹42 ಸಾವಿರವೇ ಬಡವರಿಗೆ ದೊಡ್ಡ ಹೊರೆಯಾಗಿದೆ. ಹೀಗಿರುವಾಗ ₹97 ಸಾವಿರ ಶುಲ್ಕ ಹೇರುವ ಮೂಲಕ ಬಡ, ಮಧ್ಯಮ ವರ್ಗ, ರೈತಾಪಿ ಕುಟುಂಬಗಳಿಂದ ಬಂದ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣದಿಂದ ದೂರ ತಳ್ಳುತ್ತಿದೆ ಎಂದು ಮಹಾಂತೇಶ ಆರೋಪಿಸಿದರು.

ರಾಜ್ಯದಲ್ಲಿ ಪ್ರಬಲವಾಗಿ ಬೆಳೆದ ವಿದ್ಯಾರ್ಥಿ ಹೋರಾಟದ ಫಲವಾಗಿ ರಾಜ್ಯ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿ-2020 ಹಿಂಪಡೆದಿದೆ. ಆದರೆ, ಅದೇ ಎನ್ಇಪಿ-2023ರ ಅಂಶವಾದ ಸರ್ಕಾರಿ ಸಂಸ್ಥೆಗಳನ್ನು, ಸ್ವಾಯತ್ತ, ಸ್ವಹಣಕಾಸು ಸಂಸ್ಥೆಗಳನ್ನಾಗಿಸುವ ಕರಾಳ ನೀತಿ ಜಾರಿಗೊಳಿಸುತ್ತಿದೆ. ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವುದು, ಬಡವರ ಪರವೆಂದು ಕೊಚ್ಚಿಕೊಳ್ಳುವ ರಾಜ್ಯ ಸರ್ಕಾರದ 6ನೇ ಗ್ಯಾರಂಟಿ ಇದೇನಾ ಎಂದು ಪ್ರಶ್ನಿಸಿದರು.

ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಟಿ.ಎಸ್.ಸುಮನ್, ಯುಬಿಡಿಟಿ ಉಳಿಸಿ ಹೋರಾಟ ಸಮಿತಿಯ ಅಭಿಷೇಕ್, ಯೋಗೇಶ, ಶ್ರವಣ್, ರಕ್ಷಿತಾ, ದೀಪಿಕಾ, ಚಂದನಾ, ನರೇಶ, ಕಾಲೇಜಿನ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿದ್ದರು.

- - -

ಬಾಕ್ಸ್‌ * ಖಾಸಗಿ ಕಾಲೇಜಾಗಿಸಲು ಬಿಡೋದಿಲ್ಲ ಸಂಘಟನೆ ಜಿಲ್ಲಾಧ್ಯಕ್ಷೆ ಪೂಜಾ ನಂದಿಹಳ್ಳಿ ಮಾತನಾಡಿ, ರಾಜ್ಯ ಸರ್ಕಾರವು ಹೆಚ್ಚಿನ ಶುಲ್ಕದ ಕೋಟಾವನ್ನು ಕೂಡಲೇ ಹಿಂಪಡೆಯಬೇಕು. ಹೆಚ್ಚುವರಿ ಪಡೆದ ಮೊತ್ತವನ್ನು ವಿದ್ಯಾರ್ಥಿಗಳಿಗೆ ಹಿಂದಿರುಗಿಸಬೇಕು. ಕಾಲೇಜಿನ ಆರ್ಥಿಕ ಅವಶ್ಯಕತೆ ಪೂರೈಸಲು ಹೆಚ್ಚಿನ ಅನುದಾನವನ್ನು ಸರ್ಕಾರ ಒದಗಿಸಲಿ. ದಾವಣಗೆರೆ ಯುಬಿಡಿಟಿ ಕಾಲೇಜಿನ ಸಂಪೂರ್ಣ ಆರ್ಥಿಕ ಜವಾಬ್ದಾರಿಯನ್ನು ಸರ್ಕಾರವೇ ವಹಿಸಬೇಕು. ನಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಪ್ರಬಲ ಹೋರಾಟ ಬೆಳೆಸುತ್ತೇವೆ. ಸರ್ಕಾರಿ ಯುಬಿಡಿಟಿ ಕಾಲೇಜನ್ನು ಯಾವುದೇ ಕಾರಣಕ್ಕೂ ಖಾಸಗಿ ಕಾಲೇಜನ್ನಾಗಿಸಲು ತಮ್ಮ ಸಂಘಟನೆ ಬಿಡುವುದಿಲ್ಲ ಎಂದು ಎಚ್ಚರಿಸಿದರು.

- - - ಕೋಟ್‌ಬಡವರು, ಕೂಲಿ ಕಾರ್ಮಿಕರು, ರೈತರು ವರ್ಷವಿಡೀ ಉಪವಾಸವಿದ್ದು , ತಮ್ಮ ಆದಾಯವನ್ನು ಒಟ್ಟುಗೂಡಿಸಿದರೂ ಯುಬಿಡಿಟಿ ಕಾಲೇಜಿನ ಏರಿಕೆಯಾದ ಶುಲ್ಕಕ್ಕೆ ಹಣ ಹೊಂದಿಸಲು ಸಾಧ್ಯವಿಲ್ಲ. ಇಂತಹ ಹೃದಯಹೀನ ನೀತಿಯನ್ನು ಜಾರಿಗೊಳಿಸಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರ ಕಡುಬಡವರ ವಿರೋಧಿಯಾಗಿದೆ

- ಮಹಾಂತೇಶ ಬೀಳೂರು, ಮುಖಂಡ, ಎಐಡಿಎಸ್‌ಒ

- - - -10ಕೆಡಿವಿಜಿ5:

ದಾವಣಗೆರೆ ಸರ್ಕಾರಿ ಯುಬಿಡಿಟಿ ಕಾಲೇಜಿನಲ್ಲಿ ಶೇ.50 ಪೇಮೆಂಟ್ ಸೀಟ್ ವಿರೋಧಿಸಿ ಎಐಡಿಎಸ್ಓ, ಯುಬಿಡಿಟಿ ಉಳಿಸಿ ಹೋರಾಟ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ