ಅಕ್ರಮ ಸಕ್ರಮ ಶುಲ್ಕದಲ್ಲಿ 50% ಕಡಿತ: ಡಿಕೆಶಿ

KannadaprabhaNewsNetwork |  
Published : Nov 10, 2026, 12:45 AM IST
BDA 3 | Kannada Prabha

ಸಾರಾಂಶ

ಬಿಡಿಎ ಸ್ವಾಧೀನಪಡಿಸಿಕೊಂಡ ಜಾಗದಲ್ಲಿರುವ ಅನಧಿಕೃತ ಕಟ್ಟಡಗಳನ್ನು ಸಕ್ರಮ ಮಾಡಿಕೊಳ್ಳಲು ಮಾರ್ಗಸೂಚಿ ಮೌಲ್ಯದ ಆಧಾರದ ಮೇಲೆ ವಿಧಿಸಲಾಗುತ್ತಿದ್ದ ಸಕ್ರಮ ಶುಲ್ಕವನ್ನು ಶೇ.50ರಷ್ಟು ಇಳಿಕೆ ಮಾಡಿ ಸಾರ್ವಜನಿಕರಿಗೆ ‘ಭೂ ಖಾತರಿ’ ನೀಡುವ ಐತಿಹಾಸಿಕ ತೀರ್ಮಾನ ಸರ್ಕಾರ ಕೈಗೊಂಡಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು:

ಬಿಡಿಎ ಸ್ವಾಧೀನಪಡಿಸಿಕೊಂಡ ಜಾಗದಲ್ಲಿರುವ ಅನಧಿಕೃತ ಕಟ್ಟಡಗಳನ್ನು ಸಕ್ರಮ ಮಾಡಿಕೊಳ್ಳಲು ಮಾರ್ಗಸೂಚಿ ಮೌಲ್ಯದ ಆಧಾರದ ಮೇಲೆ ವಿಧಿಸಲಾಗುತ್ತಿದ್ದ ಸಕ್ರಮ ಶುಲ್ಕವನ್ನು ಶೇ.50ರಷ್ಟು ಇಳಿಕೆ ಮಾಡಿ ಸಾರ್ವಜನಿಕರಿಗೆ ‘ಭೂ ಖಾತರಿ’ ನೀಡುವ ಐತಿಹಾಸಿಕ ತೀರ್ಮಾನ ಸರ್ಕಾರ ಕೈಗೊಂಡಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸೋಮವಾರ ಬಿಡಿಎ ಕೇಂದ್ರ ಕಚೇರಿಯಲ್ಲಿ ಪ್ರಾಧಿಕಾರದ ಅಧ್ಯಕ್ಷ ಎನ್‌.ಎ.ಹ್ಯಾರಿಸ್‌ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಅವರು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.

2008ಕ್ಕಿಂತ ಮುಂಚಿತವಾಗಿ ಬಿಡಿಎ ಸ್ವಾಧೀನಪಡಿಸಿಕೊಂಡ ಜಮೀನಿನಲ್ಲಿ ಮನೆ ಅಥವಾ ನಿವೇಶನ ನಿರ್ಮಿಸಿಕೊಂಡಿರುವ ಆಸ್ತಿಗಳನ್ನು ಸಕ್ರಮಗೊಳಿಸಲು ಈ ಹಿಂದೆ ನಿಗದಿಪಡಿಸಿದ್ದ ದರದಲ್ಲಿ ಶೇ.50ರಷ್ಟು ಇಳಿಕೆ ಮಾಡಲಾಗಿದೆ. ಈ ಯೋಜನೆ ಸೌಲಭ್ಯ ಪಡೆಯಲು ಮುಂದಿನ ಡಿ.17 ಕೊನೆಯ ದಿನವಾಗಿದ್ದು, ಈ ನಿಯಮವು ಕನಿಷ್ಠ 12 ವರ್ಷಗಳಿಂದ ವಾಸವಿರುವವರಿಗೆ ಅನ್ವಯವಾಗಲಿದೆ. ಜನರು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ವಿಧಾನಸಭೆಯಲ್ಲಿ ಕಾಯ್ದೆ ತಿದ್ದುಪಡಿ ತಂದು ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದ್ದು, ಡಿ.17ರೊಳಗೆ ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಇದಾದ ಬಳಿಕ ಯಾವುದೇ ಕಾರಣಕ್ಕೂ ದಿನಾಂಕ ವಿಸ್ತರಿಸುವುದಿಲ್ಲ. ಅಧಿಕಾರಿಗಳು ಸರ್ಕಾರಿ ಜಾಗ ತೆರವಿಗೆ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ಎಚ್ಚರಿಸಿದರು.

ನಾಡಪ್ರಭು ಕೆಂಪೇಗೌಡ ಬಡಾವಣೆ ಸೇರಿ ವಿವಿಧ ಬಡಾವಣೆಗಳಿಗೆ ಯಾವುದೇ ವ್ಯಾಜ್ಯವಿಲ್ಲದೆ ಸ್ವಯಂಪ್ರೇರಿತರಾಗಿ ಭೂಮಿ ಬಿಟ್ಟುಕೊಟ್ಟ ರೈತರಿಗೆ (ಪ್ರತಿ ಎಕರೆಗೆ ಒಂದು 30x40 ನಿವೇಶನ) ಬಾಕಿ ಉಳಿದಿದ್ದ ಪ್ರೋತ್ಸಾಹಕ ನಿವೇಶನಗಳನ್ನು ಹಂಚಿಕೆ ಮಾಡಲು ತೀರ್ಮಾನಿಸಲಾಗಿದೆ. ಇದಕ್ಕೂ ಡಿ.17 ರೊಳಗೆ ಅರ್ಜಿ ಸಲ್ಲಿಸಬೇಕು ಎಂದರು. ಬಿಡಿಎ ನಿವೇಶನದ ಪಕ್ಕದಲ್ಲಿ ಉಳಿದಿರುವ 600 ಚದರ ಅಡಿವರೆಗಿನ ಹೆಚ್ಚುವರಿ ಸರ್ಕಾರಿ ಜಾಗವನ್ನು (ಮಾರ್ಜಿನಲ್ ಲ್ಯಾಂಡ್) ಮಾರ್ಗಸೂಚಿ ದರದಲ್ಲಿ ಪಕ್ಕದ ನಿವೇಶನದಾರರಿಗೆ ಮಂಜೂರು ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕೂ ಡಿ.17ರೊಳಗೆ ಅರ್ಜಿ ಸಲ್ಲಿಸುವುದು ಕಡ್ಡಾಯ ಎಂದರು.

20000ಕ್ಕೂ ಹೆಚ್ಚು ಶುದ್ಧ ಕ್ರಯಪತ್ರ:

ಈ ಹಿಂದೆ ಸಿಐಟಿಬಿ ಹಾಗೂ ಬಿಡಿಎಯಿಂದ ಲೀಸ್ ಕಮ್ ಸೇಲ್ ಡೀಡ್ (ಗುತ್ತಿಗೆ ಆಧಾರಿತ ಮಾರಾಟ ಪತ್ರ) ಪಡೆದು, 10 ವರ್ಷಗಳ ಗುತ್ತಿಗೆ ಅವಧಿ ಮುಗಿದಿದ್ದರೂ ಪಕ್ಕಾ ಕ್ರಯಪತ್ರ ಮಾಡಿಸಿಕೊಳ್ಳದ ಸುಮಾರು 20,000ಕ್ಕೂ ಹೆಚ್ಚು ಆಸ್ತಿ ಮಾಲೀಕರಿಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಶುದ್ಧ ಕ್ರಯಪತ್ರ ಮಾಡಿಕೊಡಲಾಗುವುದು ಎಂದರು.

-ಬಾಕ್ಸ್‌-

ಅಕ್ರಮ-ಸಕ್ರಮ ಶುಲ್ಕದ ವಿವರ

20x30ರವರೆಗೆ ಶೇ.5 (ಹಿಂದಿನ ದರ ಶೇ.10), 20x30 ರಿಂದ 30x40 ವರೆಗೆ: ಶೇ.12.5 (ಶೇ. 25), 30x40 ರಿಂದ 40x60 ವರೆಗೆ ಶೇ.20 (ಶೇ.40), 40x60 ರಿಂದ 50x80 ವರೆಗೆ ಶೇ.25 (ಶೇ.50) ಮತ್ತು ದಂಡ ವಿಧಿಸುವ ಅಧಿಸೂಚನೆ ಚಾಲ್ತಿಯಲ್ಲಿದೆ. ಈ ಯೋಜನೆಯ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸಂಪೂರ್ಣ ಗಣಕೀಕೃತಗೊಳಿಸುವ ವ್ಯವಸ್ಥೆಗೆ ಮುಖ್ಯಮಂತ್ರಿಗಳು ಚಾಲನೆ ನೀಡಿದರು.

ಯಾವುದಕ್ಕೆ ಈ ಸೌಲಭ್ಯ ಅನ್ವಯಿಸಲ್ಲ:

ಉದ್ಯಾನವನ, ಆಟದ ಮೈದಾನ, ಮುಕ್ತ ಸ್ಥಳ, ನಾಗರಿಕ ಸೌಕರ್ಯಗಳಿಗೆ ಮೀಸಲಾದ ಜಾಗ, ರಸ್ತೆ ಅಥವಾ ಪ್ರಸ್ತಾವಿತ ರಿಂಗ್‌ ರಸ್ತೆ ಜೋಡಣೆಗೆ ಅಡ್ಡಿಯಾಗುವ ಜಾಗ ರಾಷ್ಟ್ರೀಯ ಹೆದ್ದಾರಿ, ಬೈಪಾಸ್ ರಸ್ತೆ, ಮಾಸ್ ರ್‍ಯಾಪಿಡ್‌ ಟ್ರಾನ್ಸಿಟ್ ಯೋಜನೆಗಳಿಗೆ ಸಂಬಂಧಿಸಿದ ಜಾಗ, ಮಳೆನೀರು ಚರಂಡಿ, ಕೆರೆ ಪ್ರದೇಶ, ನದಿ ಪಾತ್ರ, ಹೈಟೆನ್ಷನ್ ವಿದ್ಯುತ್ ಮಾರ್ಗದ ಕೆಳಭಾಗ, ನ್ಯಾಯಾಲಯದ ಮಧ್ಯಂತರ ಆದೇಶದಿಂದ ವಿವಾದಿತ ಅಥವಾ ಅಡಚಣೆಯಾದ ಸ್ವಾಧೀನ ಪ್ರದೇಶಗಳಲ್ಲಿನ ಕಟ್ಟಡಗಳಿಗೆ ಅಕ್ರಮ-ಸಕ್ರಮ ಯೋಜನೆ ಅನ್ವಯಿಸುವುದಿಲ್ಲ.ಜಾತಿ ಗಣತಿ ವರದಿ ಜಾರಿಗೆ ಕಾಂಗ್ರೆಸ್‌ ಬದ್ಧ:

ಹಿಂದುಳಿದ ವರ್ಗಗಗಳ ಶಾಶ್ವತ ಆಯೋಗವು ಸಲ್ಲಿಸಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ(ಜಾತಿ ಗಣತಿ) ವರದಿಯನ್ನು ಜಾರಿ ಮಾಡುವುದು ಕಾಂಗ್ರೆಸ್‌ ಬದ್ಧತೆಯಾಗಿದೆ ಎಂದು ಸಿಎಂ ಡಿ.ಕೆ.ಶಿವಕುಮಾರ್‌ ಸ್ಪಷ್ಟಪಡಿಸಿದರು. ಜಾತಿ ಗಣತಿ ವರದಿ ಜಾರಿ ಮಾಡುವಂತೆ ಹಲವು ಮುಖಂಡರು ಮಾಜಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷದ ಬದ್ಧತೆ ಏನಿದೆ ಅದನ್ನು ಮಾಡುತ್ತೇವೆ. ಪಕ್ಷದಲ್ಲಿ ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಸಂಬಂಧ ಕೋರ್ಟ್‌ ತೀರ್ಪುಗಳನ್ನು ಗಮನಿಸುತ್ತಾ ಇದ್ದೇವೆ ಎಂದರು. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸಂಬಂಧಿಸಿ ನ್ಯಾಯಾಲಯದ ಆದೇಶದ ಬಗ್ಗೆ ಚರ್ಚೆ ನಡೆಸಲು ಶಾಸಕರ ಸಭೆ ಕರೆದಿದ್ದೇವೆ. ನಂತರ ಬೇರೆ ಬೇರೆ ಸಮುದಾಯದ ಶಾಸಕರ ಸಭೆ ಕರೆಯಲಾಗುವುದು ಎಂದು ಶಿವಕುಮಾರ್‌ ತಿಳಿಸಿದರು.ಅಲ್ಪಸಂಖ್ಯಾತರ ರಕ್ಷಣೆಗೆ ಸರ್ಕಾರ ಬದ್ಧ:

ಅಲ್ಪಸಂಖ್ಯಾತರ ಹಿತಾಸಕ್ತಿ ಕಾಪಾಡಲು ಮತ್ತು ಅವರ ಪರ ಧ್ವನಿಯಾಗಲು ಸರ್ಕಾರ ಬದ್ಧವಾಗಿದ್ದು, ಯಾವುದೇ ಸಮುದಾಯಕ್ಕೆ ಅನ್ಯಾಯವಾಗದಂತೆ ರಕ್ಷಣೆ ನೀಡುವ ಕೆಲಸ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕರ್ನಾಟಕ ಉರ್ದು ಅಕಾಡೆಮಿ ಪುರಭವನದಲ್ಲಿ ಆಯೋಜಿಸಿದ್ದ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಪ್ರದಾನ, ಪುಸ್ತಕ ಬಿಡುಗಡೆ ಹಾಗೂ ‘ಉರ್ದು ಹಬ್ಬ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೆಲವರಿಗೆ ಅಲ್ಪಸಂಖ್ಯಾತ ಸಮುದಾಯಗಳ ಬಗ್ಗೆ ನಂಬಿಕೆ ಇಲ್ಲದಿರಬಹುದು. ಬೇರೆಯವರಿಗೆ ನಂಬಿಕೆ ಇಲ್ಲ ಎಂಬ ಕಾರಣಕ್ಕೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯನ್ನು ಸ್ಥಗಿತಗೊಳಿಸಲು ಸಾಧ್ಯವಿಲ್ಲ ಎಂದರು. ಸಮಸ್ಯೆ ಪರಿಹಾರಕ್ಕೆ ಸಭೆ:ಉರ್ದು ಅಕಾಡೆಮಿಯ ಚಟುವಟಿಕೆಗಳಿಗೆ ಹೆಚ್ಚಿನ ಅನುದಾನ ಒದಗಿಸಲಾಗುವುದು. ಅಲ್ಪಸಂಖ್ಯಾತರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಮುಂದಿನ ವಾರ ಕ್ರೈಸ್ತ, ಮುಸ್ಲಿಂ, ಜೈನ, ಬೌದ್ದ ಸೇರಿ ಅಲ್ಪಸಂಖ್ಯಾತ ಸಮುದಾಯಗಳ ನಾಯಕರು ಹಾಗೂ ಶಾಸಕರ ಸಭೆ ಕರೆದು ಸಮಾಲೋಚನೆ ನಡೆಸಲಾಗುವುದು. ಉರ್ದು ಹಬ್ಬ ಕಾರ್ಯಕ್ರಮಕ್ಕೆ ಯಾವ ಮುಖ್ಯಮಂತ್ರಿಯೂ ಆಗಮಿಸಿಲ್ಲ. ತಮಗೆ ಆಗಮಿಸಿ ಶುಭ ಕೋರಬೇಕು ಎಂದು ಆಯೋಜಕರು ಮನವಿ ಮಾಡಿದ್ದರು. ಆದ್ದರಿಂದ ಬಹಳ ಸಂತೋಷದಿಂದ ಸಮಾರಂಭಕ್ಕೆ ಆಗಮಿಸಿದ್ದೇನೆ. ಭಾಷೆಗಳು ಬೇರೆ ಬೇರೆ ಇರಬಹುದು. ಆದರೆ ಮಾನವೀಯತೆ, ಮಾನವ ಧರ್ಮವೇ ಮುಖ್ಯ ಎಂದರು.ಉರ್ದು ಹೃದಯದ ಭಾಷೆ:ಉರ್ದು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದ ಭಾಷೆಯಲ್ಲ, ಹೃದಯದ ಭಾಷೆ. ಉರ್ದು ವಿಶ್ವಮಟ್ಟದ ಭಾಷೆಯಾಗಿದ್ದು, ಇದಕ್ಕೆ ಗಡಿಯೇ ಇಲ್ಲವಾಗಿದೆ. ಸಾಹಿತ್ಯ, ಕಾವ್ಯ ಮತ್ತು ಶಾಯಿರಿ ಮೂಲಕ ಜನರ ಮನಸ್ಸನ್ನು ಮುಟ್ಟುವ ಶಕ್ತಿ ಉರ್ದು ಭಾಷೆಗಿದೆ. ಉರ್ದು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಸರ್ಕಾರ ಬೆಂಬಲವಾಗಿ ನಿಲ್ಲಲಿದೆ ಎಂದು ಭರವಸೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

12, 13ರಂದು ಪುಣ್ಯಾರಾಧನೆ, ಸ್ಮರಣೋತ್ಸವ, ಜನಜಾಗೃತಿ ಧರ್ಮ ಸಮ್ಮೇಳನ
ಟನಲ್ ಮಾಡಿದ್ರೂ ಆಗಲ್ಲ, ಎಲಿವೇಟೆಡ್‌ ಮಾಡಿದರೂ ಅಪಾದನೆ: ಡಿಕೆಶಿ ಆಕ್ರೋಶ