ಬೆಂಗಳೂರು : ಮುಂಗಡವಾಗಿ ಹಣ ಪಡೆದು ಐಸ್‌ಕ್ರೀಂ ಡೆಲಿವರಿ ನೀಡದೆ, ಹಣವನ್ನೂ ವಾಪಸ್ ಮಾಡದ ಸ್ವಿಗ್ಗಿ ವಿರುದ್ಧ ಗ್ರಾಹಕ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸಿ ಜಯ ಸಾಧಿಸಿದ ನಗರದ ವ್ಯಕ್ತಿಯೊಬ್ಬರು, ಐಸ್‌ಕ್ರೀಂ ಮೊತ್ತ 187 ರು. ಜೊತೆಗೆ 5,000 ರು. ಪರಿಹಾರವನ್ನು ಪಡೆದುಕೊಂಡಿದ್ದಾರೆ.
ನಗರದ ಗೋಕುಲ ನಿವಾಸಿ ಅರವಿಂದ್ 2023ರ ಜನವರಿಯಲ್ಲಿ 187 ರು. ಪಾವತಿಸಿ ಸ್ವಿಗ್ಗಿಯಿಂದ ಐಸ್‌ಕ್ರೀಂ ಆರ್ಡರ್ ಮಾಡಿದ್ದರು. ಆರ್ಡರ್ ಮಾಡಿದ ಸುಮಾರು 35 ನಿಮಿಷಗಳ ಬಳಿಕ ಐಸ್‌ಕ್ರೀಂ ಡೆಲಿವರಿ ಯಾಗಿದೆ ಎಂದು ಆ್ಯಪ್‌ನ ಆರ್ಡರ್ ಸ್ಟೇಟಸ್‌ನಲ್ಲಿ ಸಂದೇಶ ಬಂದಿತ್ತು. ಆದರೆ, ಐಸ್‌ಕ್ರೀಂ ತಲುಪಿರಲಿಲ್ಲ. ಈ ಹಿನ್ನೆಲೆಯಲ್ಲಿ ಅರವಿಂದ ಅವರು ಇ-ಮೇಲ್ ಮಾಡಿ ದೂರು ನೀಡಿದ್ದರು. ಸ್ವಿಗ್ಗಿಯಿಂದ ಯಾವುದೇ ಸ್ಪಂದನೆ ಬಾರದ ಕಾರಣ ಪರಿಹಾರ ಕೋರಿ ಬೆಂಗಳೂರಿನ ಗ್ರಾಹಕರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಗ್ರಾಹಕರು, ಮಾರಾಟಗಾರರು ಹಾಗೂ ಪಿಕಪ್ ಮತ್ತು ಡೆಲಿವರಿ ಏಜೆಂಟರ ನಡುವೆ ನಡುವೆ ಸ್ವಿಗ್ಗಿ ಕೇವಲ ಐಟಿ ಸೇವೆ ಒದಗಿಸುವ ‘ಮಧ್ಯವರ್ತಿ’ ಆಗಿ ಕಾರ್ಯನಿರ್ವಹಿಸುತ್ತದೆ. ಡೆಲಿವರಿ ಏಜೆಂಟ್ ಡೆಲಿವರಿ ನೀಡದಿದ್ದರೆ ಅದನ್ನು ರೀಫಂಡ್ ಮಾಡುವುದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಅಲ್ಲದೇ, ಐಸ್‌ಕ್ರೀಂ ಡೆಲಿವರಿಗೆ ತೆರಳಿದ್ದಾಗ ಗ್ರಾಹಕ ಸ್ಪಂದಿಸಿರಲಿಲ್ಲ ಎಂದು ವಿಚಾರಣೆ ವೇಳೆ ಸ್ವಿಗ್ಗಿ ಪರ ವಕೀಲರು ವಾದಿಸಿದ್ದರು.
‘ಹಣಕಾಸಿನ ವ್ಯವಹಾರಗಳು, ಸರಕು ಮತ್ತು ಸೇವೆಗಳು ಒಳಗೊಂಡಿರುವ ಐಟಿ ಸೇವೆ ನೀಡುವ ಮಧ್ಯವರ್ತಿ ಕಂಪನಿ ಅಥವಾ ಸಂಸ್ಥೆಯು ಗ್ರಾಹಕರಿಗೆ ಜವಾಬ್ದಾರನಾಗಿರುತ್ತದೆ’. ಇನ್ನು ಡೆಲಿವರಿ ನೀಡಲು ತೆರಳಿದಾಗ ಗ್ರಾಹಕ ಕರೆ ಸ್ವೀಕರಿಸಿಲ್ಲ ಎನ್ನುವುದನ್ನು ಸಾಬೀತುಪಡಿಸಲು ಯಾವುದೇ ಸಾಕ್ಷ್ಯಾಧಾರ ಹಾಜರುಪಡಿಸಲು ಸ್ವಿಗ್ಗಿ ವಿಫಲವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ದೂರುದಾರ ಅರವಿಂದ ಅರ್ಜಿಯನ್ನು ಮಾನ್ಯ ಮಾಡಿದ ಬೆಂಗಳೂರು ನಗರ 2ನೇ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ನ್ಯಾಯಾಲಯ, ಸೇವೆಯಲ್ಲಿನ ನೂನ್ಯತೆಗಾಗಿ 3,000 ರು. ಪರಿಹಾರ, ಕಾನೂನು ಹೋರಾಟದ ಶುಲ್ಕ 2,000 ರು. ಮತ್ತು ಐಸ್‌ಕ್ರೀಂ ಮೊತ್ತ 187 ರು. ವಾರ್ಷಿಕ ಶೇ.8ರ ಬಡ್ಡಿ ಸಮೇತ ಮರಳಿಸುವಂತೆ ಸ್ವಿಗ್ಗಿಗೆ ಆದೇಶ ನೀಡಿದೆ.