ಕನ್ನಡಪ್ರಭ ವಾರ್ತೆ ಕಾರವಾರ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತರುವಾಯ ಅಂದರೆ ಕಳೆದ ಎರಡೂವರೆ ವರ್ಷದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಶಾಸಕ ಸತೀಶ ಸೈಲ್ ₹513 ಕೋಟಿ ಅನುದಾನ ಮಂಜೂರು ಮಾಡಿಸಿದ್ದಾರೆ ಎಂದು ಅಂಕೋಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಶ್ವರ ನಾಯಕ ಹೇಳಿದರು.ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಶಾಸಕರಾಗಿದ್ದ ಅವಧಿಯಲ್ಲಿ ತಾವೇ ಮಂಜೂರು ಮಾಡಿಸಿದ್ದ ಗಂಗಾವಳಿ ಸೇತುವೆ ಪೂರ್ಣಗೊಳಿಸಲು, ಕೆರವಡಿ ಸೇತುವೆ ಕಾಮಗಾರಿ ಮುಂದುವರಿಸಲು ಶ್ರಮಿಸಿದ್ದಾರೆ. ಹಿಂದಿನ ಬಿಜೆಪಿ ಶಾಸಕರ ಅವಧಿಯಲ್ಲಿ ಈ ಕಾಮಗಾರಿಗಳು ಮುಂದುವರೆಸದೆ ನನೆಗುದಿಗೆ ಬಿದ್ದಿತ್ತು ಎಂದರು.
ಶಿರೂರು ದುರಂತದ ಸಮಯದಲ್ಲಿ ಸಂತ್ರಸ್ತರ ನೆರವಿಗೆ ಕ್ಷೇತ್ರದ ಜನರ ಸಮಸ್ಯೆ ಪರಿಹರಿಸಲು ನಿರಂತರ ಶ್ರಮಿಸಿದ್ದಾರೆ. ಮಳೆಗಾಲದಲ್ಲಿ ಮರ ಕಟಾವಿಗೆ ಮುನ್ನೆಚ್ಚರಿಕೆ ವಹಿಸಿದ್ದರು ಎಂದರು.ಕಾರವಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಕಲ್ಗುಟಕರ, ಪ್ರಮುಖರಾದ ಕೆ.ಶಂಭು ಶೆಟ್ಟಿ, ಜಿ.ಪಿ. ನಾಯಕ, ಪಾಂಡುರಂಗ ಗೌಡ, ರಾಜೇಂದ್ರ ರಾಣೆ, ಬಾಬು ಶೇಖ್, ದಿಲ್‌ಶಾದ್ ಶೇಖ್ ಇತರರು ಪಾಲ್ಗೊಂಡಿದ್ದರು.ಶಾಸಕರು ಕ್ಷೇತ್ರಕ್ಕೆ ಹಣ ತಂದ ಬಗ್ಗೆ ದಾಖಲೆ ನೀಡಲಿ: ಬಿಜೆಪಿ
ಕಳೆದ ಎರಡೂವರೆ ವರ್ಷಗಳಲ್ಲಿ ಕಾರವಾರ ಅಂಕೋಲಾ ಕ್ಷೇತ್ರಕ್ಕೆ ಶಾಸಕ ಸತೀಶ ಸೈಲ್ ₹500 ಕೋಟಿಗೂ ಹೆಚ್ಚು ಹಣ ತಂದಿದ್ದಾರೆ ಎಂದು ಶಾಸಕರ ಬೆಂಬಲಿಗರು ಹೇಳಿಕೊಂಡಿದ್ದಾರೆ. ಆದರೆ ಈ ಬಗ್ಗೆ ಕ್ಷೇತ್ರದ ಜನತೆಗೆ ಅಧಿಕೃತ ದಾಖಲೆ ಬಿಡುಗಡೆ ಮಾಡಲಿ ಎಂದು ಬಿಜೆಪಿ ಪ್ರಮುಖರು ಆಗ್ರಹಿಸಿದ್ದಾರೆ.ಸರ್ಕಾರದಿಂದ ಸಹಜವಾಗಿ ಬೇರೆ ಬೇರೆ ಇಲಾಖೆಗಳಿಗೆ ಬರುವ ಅನುದಾನವನ್ನೂ ಶಾಸಕರ ಸಾಧನೆ ಎಂದು ಬಿಂಬಿಸಲಾಗಿದೆ. ಜೆಜೆಎಂನಲ್ಲಿ ಮನೆ ಮನೆಗೆ ಗಂಗೆ ಯೋಜನೆಯಲ್ಲಿ ಕೇಂದ್ರ ಸರ್ಕಾರದಿಂದ ಬಂದ ಹಣವನ್ನೂ ಶಾಸಕರ ಸಾಧನೆಯ ಪಟ್ಟಿಯಲ್ಲಿ ಸೇರಿಸಲಾಗಿದೆ. ಹಿಂದೆ ರೂಪಾಲಿ ಎಸ್.ನಾಯ್ಕ ಶಾಸಕಿಯಾಗಿದ್ದಾಗ ಬಿಡುಗಡೆಯಾದ ಆ ಯೋಜನೆ ಈ ತನಕ ನಡೆಯುತ್ತಿದೆ. ರೂಪಾಲಿ ಎಸ್.ನಾಯ್ಕ ಶಾಸಕರಾಗಿದ್ದಾಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಹಣವನ್ನೂ ಶಾಸಕರು ತಂದಿದ್ದಾರೆ ಎಂದು ಹೇಳುವ ದೌರ್ಭಾಗ್ಯ ಕಾಂಗ್ರೆಸ್ಸಿಗರಿಗೆ ಬಂದಿದ್ದು ದುರ್ದೈವದ ಸಂಗತಿಯಾಗಿದೆ ಎಂದು ಬಿಜೆಪಿ ಕಾರವಾರ ಗ್ರಾಮೀಣ ಮಂಡಲ ಅಧ್ಯಕ್ಷ ಸುಭಾಷ ಗುನಗಿ, ನಗರ ಮಂಡಲ ನಾಗೇಶ ಕುರ್ಡೇಕರ್, ಅಂಕೋಲಾ ಮಂಡಲದ ಸಂಜಯ ನಾಯ್ಕ, ಜಿಲ್ಲಾ ಮಾಧ್ಯಮ ಸಹ ವಕ್ತಾರ ಜಗದೀಶ್ ನಾಯಕ್ ಮುಗಟ, ಜಿಲ್ಲಾ ಉಪಾಧ್ಯಕ್ಷ ಸಂಜಯ ಸಾಳುಂಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.