ನೊಯ್ಡಾದಿಂದ ಬೆಂಗ್ಳೂರಿಗೆ ಬರ್ತಿದ್ದ ಕಂಟೇರ್‌ನಲ್ಲಿ 5140 ಫೋನ್‌ ದರೋಡೆ

KannadaprabhaNewsNetwork |  
Published : Apr 30, 2025, 12:39 AM IST
ಸಿಕೆಬಿ-5   ಮೊಬೈಲ್​ಗಳನ್ನ ಕದ್ದಿದ್ದ ಕಳ್ಳರೊಂದಿಗೆ ಎಸ್.ಪಿ. ಕುಶಾಲ್ ಚೌಕ್ಸೆ ಮತ್ತು ಕಾರ್ಯಾಚರಣೆಯಲ್ಲಿ ಬಾಗಿಯಾದ ಪೋಲಿಸರು  | Kannada Prabha

ಸಾರಾಂಶ

ಉತ್ತರಪ್ರದೇಶದ ನೊಯ್ಡಾದಿಂದ ಬೆಂಗಳೂರಿಗೆ ಮೊಬೈಲ್‌ ಹೊತ್ತು ಬರುತ್ತಿದ್ದ ಕಂಟೇರ್‌ನಲ್ಲಿ ₹3 ಕೋಟಿ ಮೌಲ್ಯದ 5140 ಮೊಬೈಲ್​ಗಳನ್ನು ದೋಚಿದ್ದ 7 ಮಂದಿ ಖದೀಮರನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಉತ್ತರಪ್ರದೇಶದ ನೊಯ್ಡಾದಿಂದ ಬೆಂಗಳೂರಿಗೆ ಮೊಬೈಲ್‌ ಹೊತ್ತು ಬರುತ್ತಿದ್ದ ಕಂಟೇರ್‌ನಲ್ಲಿ ₹3 ಕೋಟಿ ಮೌಲ್ಯದ 5140 ಮೊಬೈಲ್​ಗಳನ್ನು ದೋಚಿದ್ದ 7 ಮಂದಿ ಖದೀಮರನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ.

ಕಳೆದ ವರ್ಷ ನ.22ರಂದು ಸೇಪ್ ಸೀಡ್ಸ್ ಕ್ಯಾರಿಯರ್ಸ್‌ ಪ್ರೈವೇಟ್ ಲಿಮಿಟೆಡ್ ಕಂಪನಿಯ ಕಂಟೇನರ್ ವಾಹನ ರೆಡ್ ಮೀ ಮೊಬೈಲ್‌ನ 170 ಬಾಕ್ಸ್‌ಗಳನ್ನು (3400 ಮೊಬೈಲ್) ಹಾಗೂ 163 ಬಾಕ್ಸ್ ಪೋಕೋ ಮೊಬೈಲ್ (3260 ಮೊಬೈಲ್) ಒಟ್ಟು 6660 ಅಂದಾಜು ₹3 ಕೋಟಿ ಮೌಲ್ಯದ ಮೊಬೈಲ್‌ಗಳನ್ನು ಹೊತ್ತು ನೊಯ್ಡಾದಿಂದ ಬೆಂಗಳೂರಿಗೆ ರಾಷ್ಟ್ರೀಯ ಹೆದ್ದಾರಿ 44ರ ಮೂಲಕ ಬರುತ್ತಿತ್ತು. ಕೇವಲ 70 ಕಿ.ಮೀ. ಸಾಗಿದರೆ ಬೆಂಗಳೂರು ತಲುಪಬೇಕಿತ್ತು.

ಆದರೆ, ತುಂಬಾ ದಿನಗಳಾದರೂ ಟ್ರಕ್​ ಬೆಂಗಳೂರು ತಲುಪದ ಹಿನ್ನೆಲೆಯಲ್ಲಿ ಸೇಪ್ ಸೀಡ್ಸ್ ಕ್ಯಾರಿಯರ್ಸ್‌ ಪ್ರೈವೇಟ್ ಲಿಮಿಟೆಡ್ ಕಂಪನಿ ಅವರು ಜಿಪಿಎಸ್ ಆಧರಿಸಿ ಪರಿಶೀಲಿಸಿದಾಗ ಟ್ರಕ್​​ ಚಿಕ್ಕಬಳ್ಳಾಪುರ ತಾಲೂಕಿನ ರೆಡ್ಡಿಗೊಲ್ಲವಾರಹಳ್ಳಿ ಬಳಿ ಡಾಬಾವೊಂದರ ಬಳಿ ನಿಲ್ಲಿಸಲಾಗಿತ್ತು.

ಟ್ರಕ್‌ ಬಳಿ ಬಂದು ನೋಡಿದಾಗ ಟ್ರಕ್​ ಚಾಲಕ ಮತ್ತು ಖದೀಮರು ಕ್ಯಾಬಿನ್‌ನಿಂದ ರಂಧ್ರ ಕೊರೆದು 6660 ಮೊಬೈಲ್​ಗಳ ಪೈಕಿ 5140 ಮೊಬೈಲ್​ಗಳನ್ನು ಮತ್ತೊಂದು ಟ್ರಕ್​ಗೆ ತುಂಬಿಕೊಂಡು ಹೋಗಿದ್ದಾರೆ. ಈ ಸಂಬಂಧ ದೂರು ದಾಖಲಿಸಿಕೊಂಡು ತನಿಖೆಗಿಳಿದ ಪೇರೇಸಂದ್ರ ಪೊಲೀಸರು ಡಿ.10ರಂದು ಹರಿಯಾಣದ ಪಲ್ವಾಲ್ ಜಿಲ್ಲೆಯ ಅಲಿ ಮಿಯೋ ಗ್ರಾಮದ ರಾಹುಲ್ ಎಂಬುವವರನ್ನು ಬಂಧಿಸಿದ್ದರು.

ಜ.29ರಂದು ಎಸ್ಪಿ ಕುಶಾಲ್ ಚೌಕ್ಸೆ ಪ್ರಕರಣ ಕಡತವನ್ನು ಮುಂದಿನ ತನಿಖೆಗಾಗಿ ಸಿಇಎನ್ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಿಗೆ ವರ್ಗಾವಣೆ ಮಾಡಿದ್ದರು. ತನಿಖೆ ಮುಂದುವರೆಸಿದ ಪೊಲೀಸ್ ಉಪಾಧೀಕ್ಷಕ ಕೆ.ವೈ.ರವಿಕುಮಾರ್ ಹಾಗೂ ಸಿಬ್ಬಂದಿ ಹರಿಯಾಣ, ರಾಜಸ್ಥಾನ್​, ಹಿಮಾಚಲ ಪ್ರದೇಶ ಮತ್ತು ಪಶ್ಚಿಮಬಂಗಾಳದಲ್ಲಿ ತನಿಖೆ ನಡೆಸಿ ಆರೋಪಿಗಳಾದ ಇಮ್ರಾನ್, ಮೊಹಮದ್ ಮುಸ್ತಫಾ, ಅನೂಪ್‌ರಾಯ್, ಅಭಿಜಿತ್ ಪೌಲ್, ಸಕ್ಕಲ್ಲಾ ಮತ್ತು ಯೂಸಫ್‌ಖಾನ್ ಎಂಬ 7 ಜನ ದರೋಡೆಕೊರರ ಗ್ಯಾಂಗನ್ನು ಬಂಧಿಸಿದ್ದಾರೆ.

ಆರೋಪಿಗಳು ಕಳುವು ಮಾಡಿದ ಮೊಬೈಲ್‌ಗಳನ್ನು ದೆಹಲಿಯಲ್ಲಿ ಮಾರಾಟ ಮಾಡಿದ್ದು, ಅಲ್ಲಿಂದ ದೇಶದ ಪ್ರತಿ ರಾಜ್ಯಗಳಿಗೆ 300 ರಿಂದ 400 ಮೊಬೈಲ್ ಗಳಂತೆ ಬಿಡಿಬಿಡಿಯಾಗಿ ಮಾರಾಟ ಮಾಡಿದ್ದರು. ಕಳುವು ಮಾಡಲಾದ ಎಲ್ಲಾ ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೊಲೀಸರಿಗೆ ಹಣಕ್ಕೆ ಬೇಡಿಕೆ ಇಟ್ಟ ಆರೋಪ : ಪತ್ರಕರ್ತ ವಶ
ಪೊಲೀಸ್ ವಾಹನದಲ್ಲಿ ಕುಡುಕರು ಮನೆಗೆ : ವ್ಯವಸ್ಥೆಗೆ ಆಕ್ಷೇಪ