ಕೇಂದ್ರ ಬಜೆಟ್‍ನಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿರುವುದನ್ನು ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಶನಿವಾರ ಚಿತ್ರದುರ್ಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಭದ್ರಾ ಮೇಲ್ದಂಡೆಗೆ ಬಜೆಟ್ ಘೋಷಿತ ₹5300 ಕೋಟಿ ಅನುದಾನ ತರುವವರೆಗೆ ಸಂಸದ ಗೋವಿಂದ ಕಾರಜೋಳಗೆ ಘೇರಾವ್ ಮಾಡಿ. ಜಿಲ್ಲೆಯಲ್ಲಿ ಯಾವುದೇ ಕಾರ್ಯಕ್ರಮಕ್ಕೆ ಅವರು ಹಾಜರಾದರೂ ಕಾಂಗ್ರೆಸ್ ಕಾರ್ಯಕರ್ತರು ಅಡ್ಡ ಹಾಕಿ ₹5300 ಕೋಟಿ ಎಲ್ಲಿ ಎಂದು ಪ್ರಶ್ನೆ ಮಾಡುವಂತೆ ಜಿಲ್ಲಾ ಕಾಂಗ್ರೆಸ್ ತನ್ನ ಕಾರ್ಯಕರ್ತರಿಗೆ ಫರ್ಮಾನು ಹೊರಡಿಸಿದೆ..
ಕೇಂದ್ರ ಸರ್ಕಾರ ತನ್ನ ಬಜೆಟ್‌ನಲ್ಲಿ ರಾಜ್ಯ ಸರ್ಕಾರಕ್ಕೆ ಮಾಡಿರುವ ಅನ್ಯಾಯ ಖಂಡಿಸಿ ಶನಿವಾರ ಜಿಲ್ಲಾ ಕಾಂಗ್ರೆಸ್ ವತಿಯಿಂದ ಹಮ್ಮಿಕೊಳ್ಳಲಾದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಎಲ್ಲ ಮುಖಂಡರು ಸಂಸದ ಗೋವಿಂದ ಕಾರಜೋಳರ ಮೇಲೆ ಮುಗಿ ಬಿದ್ದರು.
ಈ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಭದ್ರಾಮೇಲ್ಡಂಡೆಗೆ ಕಳೆದ ಬಜೆಟ್‍ನಲ್ಲಿಯೇ ಕೇಂದ್ರ ಸರ್ಕಾರ ಐದು ಸಾವಿರದ ಮುನ್ನೂರು ಕೋಟಿ ರು.ಗಳನ್ನು ಘೋಷಿಸಿದ್ದು, ಇದುವರೆವಿಗೂ ನಯಾ ಪೈಸೆಯೂ ಬಿಡುಗಡೆಯಾಗಿಲ್ಲ. ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯದ ಜನತೆಗೆ ಮಂಕು ಬೂದಿ ಎರಚುತ್ತಿದ್ದಾರೆ ಎಂದು ಆಪಾದಿಸಿದರು.
ಬೆಂಗಳೂರು ಒಂದರಿಂದಲೇ ಶೇ.60 ರಷ್ಟು ತೆರಿಗೆ ಕೇಂದ್ರಕ್ಕೆ ಪಾವತಿಯಾಗುತ್ತಿದೆ. ರಾಜ್ಯದ ಎಲ್ಲಾ ಸಂಸದರು ಸೇರಿಕೊಂಡು ಕರ್ನಾಟಕಕ್ಕೆ ಹೆಚ್ಚಿನ ಅನುದಾನ ತರಬೇಕು. ಅಪ್ಪರ್ ಭದ್ರಾ, ಮೇಕೆದಾಟು, ಕೃಷ್ಣ ಬೇಸಿನ್ ಕಾಮಗಾರಿ ಇನ್ನು ನಡೆಯುತ್ತಲೆ ಇವೆ. ಕೇಂದ್ರ ಬಜೆಟ್‍ನಲ್ಲಿ ರೈಲ್ವೆ ನೀರಾವರಿಗೆ ಒತ್ತು ಕೊಟ್ಟಿಲ್ಲ. ಇದರ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರುತ್ತದೆಂದು ಎಚ್ಚರಿಸಿದರು.
ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ಕೇಂದ್ರ ಸರ್ಕಾರದ ಬಜೆಟ್‍ನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಕಳೆದ ಬಾರಿಯೂ ಕರ್ನಾಟಕಕ್ಕೆ ಅದರಲ್ಲೂ ಚಿತ್ರದುರ್ಗಕ್ಕೆ ಯಾವ ಅನುಕೂಲವೂ ಆಗಿಲ್ಲ. ಬಿಜೆಪಿ, ಜೆಡಿಎಸ್.ಸೇರಿಕೊಂಡು ರಾಜ್ಯದಲ್ಲಿ ಹತ್ತೊಂಬತ್ತು ಸಂಸದರು ಗೆದ್ದಿದ್ದಾರೆ. ಕಾಂಗ್ರೆಸ್‍ನವರ ಜೊತೆ ಕೈಜೋಡಿಸಿ ಅಭಿವೃದ್ಧಿಗೆ ಹಣ ತರಬೇಕು ಎಂದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಂಸದ ಗೋವಿಂದ ಕಾರಜೋಳ ಕೇಂದ್ರದ ಜಲಶಕ್ತಿ ಸಚಿವರಿಗೆ ಅರ್ಜಿ ಸಲ್ಲಿಸಿ ಭದ್ರಾ ಮೇಲ್ದಂಡೆಗೆ ₹5300 ಕೋಟಿ ಅನುದಾನ ಕೊಡುವಂತೆ ಕೋರಿದ್ದಾರೆ. ಅರ್ಜಿ ಕೊಡುವ ಎಲ್ಲ ಪ್ರಕ್ರಿಯೆ ಮುಗಿದಿದ್ದು ಹಣ ತರುವ ಕೆಲಸ ಮಾಡಬೇಕು. ಅರ್ಜಿ ಕೊಟ್ಟು ಫೋಟೋ ತೆಗೆಸಿಕೊಳ್ಳುವುದು ನಗೆಪಾಟಲಿನ ಸಂಗತಿ. ಕೇಂದ್ರದಲ್ಲಿ ಅವರದೇ ಸರ್ಕಾರವಿದ್ದು ಹಣ ತರಲು ಏಕೆ ಇವರ ಕೈಯಲ್ಲಿ ಆಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಬಿಹಾರ, ಆಂಧ್ರಕ್ಕೆ ಬಜೆಟ್‍ನಲ್ಲಿ ಹೆಚ್ಚಿನ ಅನುದಾನ ನೀಡಿರುವ ಕೇಂದ್ರ ಸರ್ಕಾರ ರಾಜ್ಯಕ್ಕೆ ನಿರಂತರವಾಗಿ ಮೋಸ ಮಾಡಿಕೊಂಡು ಬರುತ್ತಿದೆ. ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದಾಗಿ ಸುಳ್ಳು ಹೇಳಿ ಚುನಾವಣೆಯಲ್ಲಿ ಮತ ಪಡೆದಿರುವ ಬಿಜೆಪಿ ಈಗ ಅದರ ಚಕಾರವೆತ್ತುತ್ತಿಲ್ಲ ಎಂದರು.
ಕರ್ನಾಟಕ ಪ್ರದೇಶ ಕಾಂಗ್ರಸ್ ಸಮಿತಿ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಮಾತನಾಡಿ, ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಜಿಲ್ಲೆಗೆ ಯಾವಾಗ ಬಂದರೂ ಕಪ್ಪು ಪಟ್ಟಿ ಪ್ರದರ್ಶಿಸಿ ಬಹಿಷ್ಕಾರ ಹಾಕುವ ತೀರ್ಮಾನ ತೆಗೆದುಕೊಳ್ಳಬೇಕು. ಪ್ರಜಾಪ್ರಭುತ್ವದಲ್ಲಿ ಸಂವಿಧಾನ ಉಳಿದಿರುವುದು ಕಾಂಗ್ರೆಸ್‍ನಿಂದ ಮಾತ್ರ. ಕೇಂದ್ರ ಸರ್ಕಾರದ ಬಜೆಟ್ ಶ್ರೀಮಂತರ ಪರವಾಗಿದೆ. ಜಿಲ್ಲೆಗೆ ಯಾವ ಅನುದಾನವೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಕಾರ್ಯಾಧ್ಯಕ್ಷ ಕೆ.ಎಂ. ಹಾಲಸ್ವಾಮಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್‍ಕುಮಾರ್, ಡಿ.ಎನ್.ಮೈಲಾರಪ್ಪ, ಕರ್ನಾಟಕ ರಾಜ್ಯ ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್, ವಿಧಾನಪರಿಷತ್ ಮಾಜಿ ಸದಸ್ಯೆ ಜಯಮ್ಮ ಬಾಲರಾಜ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತ ನಂದಿನಿಗೌಡ, ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಮುನಿರಾ ಎ.ಮಕಾಂದಾರ್, ಮೋಕ್ಷರುದ್ರಸ್ವಾಮಿ, ರುದ್ರಾಣಿಗಂಗಾಧರ್, ಭಾಗ್ಯಮ್ಮ, ಸೇವಾದಳದ ಇಂದಿರಾ, ಸುಧಾ, ಸೈಯದ್ ವಲಿಖಾದ್ರಿ, ಯು.ಲಕ್ಷ್ಮಿಕಾಂತ್, ಖುದ್ದೂಸ್, ಪ್ರಕಾಶ್‍ರಾಮನಾಯ್ಕ, ಪರಿಶಿಷ್ಟ ಪಂಗಡ ವಿಭಾಗದ ಜಿಲ್ಲಾಧ್ಯಕ್ಷ ಬಿ.ಮಂಜುನಾಥ್, ಚೋಟು, ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್.ಡಿ.ಕುಮಾರ್, ಮಹಮದ್ ಫಕೃದ್ದಿನ್, ಹಾಲುಮರದಟ್ಟಿ ಟಿ.ರಂಗಯ್ಯ, ಖಾದಿ ರಮೇಶ್, ಮೋಹನ್ ಪೂಜಾರಿ, ನಗರಸಭೆ ಮಾಜಿ ಅಧ್ಯಕ್ಷರಾದ ಹೆಚ್.ಮಂಜಪ್ಪ, ಸಿ.ಟಿ.ಕೃಷ್ಣಮೂರ್ತಿ, ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಆರ್.ಶಿವಣ್ಣ,ಡಿ.ಕುಮಾರ್ ಪಿಳ್ಳೆಕೆರನಹಳ್ಳಿ, ಡಿ.ಟಿ.ವೆಂಕಟೇಶ್, ಗಾಡಿ ಮಂಜುನಾಥ್, ನಾಯ್ಡು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.