ಹಿಂಗಾರುವಿನಲ್ಲಿ 56,900 ಹೆಕ್ಟೇರ್ ಬೆಳೆ ಹಾನಿ

KannadaprabhaNewsNetwork |  
Published : Oct 26, 2024, 12:45 AM IST
ಕಂದಾಯ ಸಚಿವ ಕೃಷ್ಣ ಭೈರೇಗೌಡ ಶುಕ್ರವಾರ ಚಿತ್ರದುರ್ಗ ತಾಲೂಕಿನ ಸಾದರಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಕೆರೆಕೋಡಿ ಒಡೆದು ಉಂಟಾದ ಬೆಳೆಹಾನಿ ಪ್ರದೇಶಗಳ ವೀಕ್ಷಣೆ ಮಾಡಿದರು. | Kannada Prabha

ಸಾರಾಂಶ

ಚಿತ್ರದುರ್ಗ: ರಾಜ್ಯದಲ್ಲಿ ಹಿಂಗಾರು ಹಂಗಾಮಿನಲ್ಲಿ 56,900 ಹೆಕ್ಟೇರ್ ಬೆಳೆ ಹಾನಿಯಾಗಿರುವ ಕುರಿತು ಪ್ರಾಥಮಿಕ ಅಂದಾಜು ಮಾಹಿತಿ ಇದೆ. ಮುಂದಿನ ಮೂರಾಲ್ಕು ದಿನದಲ್ಲಿ ಜಂಟಿ ಸಮೀಕ್ಷೆ ಪೂರ್ಣಗೊಳಿಸಿದ ನಂತರ ನಿಖರ ಮಾಹಿತಿ ದೊರಯಲಿದೆ. ಇದಾದ ಬಳಿಕ ಕೂಡಲೇ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.

ಚಿತ್ರದುರ್ಗ: ರಾಜ್ಯದಲ್ಲಿ ಹಿಂಗಾರು ಹಂಗಾಮಿನಲ್ಲಿ 56,900 ಹೆಕ್ಟೇರ್ ಬೆಳೆ ಹಾನಿಯಾಗಿರುವ ಕುರಿತು ಪ್ರಾಥಮಿಕ ಅಂದಾಜು ಮಾಹಿತಿ ಇದೆ. ಮುಂದಿನ ಮೂರಾಲ್ಕು ದಿನದಲ್ಲಿ ಜಂಟಿ ಸಮೀಕ್ಷೆ ಪೂರ್ಣಗೊಳಿಸಿದ ನಂತರ ನಿಖರ ಮಾಹಿತಿ ದೊರಯಲಿದೆ. ಇದಾದ ಬಳಿಕ ಕೂಡಲೇ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು. ಚಿತ್ರದುರ್ಗ ತಾಲೂಕಿನ ವಿವಿಧ ಗ್ರಾಮಗಳಿಗೆ ಶುಕ್ರವಾರ ಭೇಟಿ ನೀಡಿ ಮಳೆ ಹಾನಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಹಾರ ನೀಡಲು ಬೇಕಾದಷ್ಟು ಅನುದಾನ ಲಭ್ಯವಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 15.50 ಕೋಟಿ ರು. ಹಣ ಜಿಲ್ಲಾಧಿಕಾರಿಗಳ ಬಳಿ ಇದೆ. ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳಿಗೂ ಸೇರಿ 666 ಕೋಟಿ ರು. ಹಣ ನೀಡಲಾಗಿದ್ದು, ತಕ್ಷಣ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು. ಹಿಂಗಾರು ಮಳೆಯ ವೇಳೆ ಸಿಡಿಲು, ಮನೆ ಕುಸಿತ ಹಾಗೂ ಮಳೆಯ ಪ್ರವಾಹದಲ್ಲಿ ಕೊಚ್ಚಿಹೋಗಿ ರಾಜ್ಯದ್ಯಂತ 21 ಜನ ಅಸುನೀಗಿದ್ದಾರೆ. ಇಲ್ಲಿಯವರೆಗೂ ಮುಂಗಾರು ಹಾಗೂ ಹಿಂಗಾರು ಸೇರಿ ಒಟ್ಟಾರೆ 115 ಜನರ ಪ್ರಾಣಹಾನಿಯಾಗಿದ್ದು, ಇವರೆಲ್ಲರಿಗೂ ಪರಿಹಾರ ನೀಡಲಾಗಿದೆ. ಹಿಂಗಾರು ಹಂಗಾಮಿನಲ್ಲಿ 122 ಮನೆಗೆ ಹಾನಿಯಾಗಿದ್ದು, ಪರಿಹಾರ ನೀಡಲು ನಿರ್ದೇಶನ ನೀಡಲಾಗಿದೆ. ಅ.26 ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಅತಿವೃಷ್ಟಿ ಉಂಟಾಗಿರುವ 10 ಜಿಲ್ಲೆಗಳ ಅಧಿಕಾರಿಗಳ ಪರಿಶೀಲನಾ ಸಭೆ ಕರೆಯಲಾಗಿದೆ. ಸರ್ಕಾರದಿಂದ ಅಗತ್ಯ ನೆರವು ಸಹ ನೀಡಲಾಗುವುದು. ಬೆಳೆ ಹಾನಿ ಸಮೀಕ್ಷೆ ಕಾರ್ಯ ಚುರುಕಾಗಿ ನಡೆಯುತ್ತಿದೆ ಎಂದರು. ನೈಸರ್ಗಿಕ ವಿಕೋಪಗಳ ಪರಿಹಾರ ವಿತರಣೆ ಮಾರ್ಗಸೂಚಿಗಳನ್ನು ಪರಿಷ್ಕರಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಇದರ ಜೊತೆಗೆ ಬೆಳೆ ಪರಿಹಾರ ಮೊತ್ತದ ಹೆಚ್ಚಳಕ್ಕೂ ರಾಜ್ಯ ಸರ್ಕಾರದಿಂದ ಒತ್ತಡ ಹೇರಲಾಗುವುದು. ಈ ಕುರಿತು ದೆಹಲಿಯಲ್ಲಿ ಪ್ರಧಾನ ಮಂತ್ರಿಗಳನ್ನು ಮುಖ್ಯಮಂತ್ರಿಗಳೊಂದಿಗೆ ಭೇಟಿ ಮಾಡಿ ಬೆಳೆ ಪರಿಹಾರ ಮೊತ್ತ ಹೆಚ್ಚಳಕ್ಕೆ ಒತ್ತಾಯಿಸಲಾಗಿದೆ. ಸದ್ಯ ಹಳೆಯ ಕಾಲದ ಬೆಲೆಗಳನ್ನು ಪರಿಗಣಿಸಿ ಬೆಳೆ ಪರಿಹಾರ ಮೊತ್ತ ನೀಡಲಾಗುತ್ತಿದೆ. ಇದರಿಂದ ರೈತರಿಗೆ ನ್ಯಾಯ ಒದಗಿಸಲು ಆಗುವುದಿಲ್ಲ. ಆದ್ದರಿಂದ ಬೆಳೆ ಪರಿಹಾರದ ಮೊತ್ತವನ್ನು ಪರಿಷ್ಕರಿಸುವಂತೆ ಕೇಳಲಾಗಿದೆ ಎಂದು ಹೇಳಿದರು. ದಾವಣಗೆರೆ, ಚಿತ್ರದುರ್ಗ, ವಿಜಯನಗರ, ತುಮಕೂರು ಸೇರಿದಂತೆ ಮಧ್ಯ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಮಳೆಯಾಗಿದೆ. ಈ ಬಾರಿ ಚಿತ್ರದುರ್ಗ ಜಿಲ್ಲೆಯಲ್ಲಿ ಅಕ್ಟೋಬರ್ ತಿಂಗಳಲ್ಲಿ 170 ಮಿಮೀ ಆಗಿದ್ದು, ಇದು ಸರಾಸರಿ ವಾಡಿಕೆ ಮಳೆಗಿಂತಲ್ಲೂ 70 ಮಿಮೀ ಹೆಚ್ಚಾಗಿದೆ. ಇದರಿಂದಾಗಿ ಬಹಳಷ್ಟು ಕಡೆ ಬೆಳೆ ಹಾನಿ ಉಂಟಾಗಿದೆ. ಹೀಗಾಗಿ ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಿಂದ ಜಂಟಿಯಾಗಿ ಬೆಳೆ ಹಾನಿ ಕುರಿತು ಸಮೀಕ್ಷೆ ನಡೆಸಲು ಸೂಚನೆ ನೀಡಲಾಗಿದೆ ಎಂದರು.ಮುಂಗಾರು ಹಂಗಾಮಿನಲ್ಲಿ ಸುಮಾರು ರು.100 ಕೋಟಿಯಷ್ಟು ಬೆಳೆ ಹಾಗೂ ಮನೆ ಹಾನಿ ಪರಿಹಾರ ನೀಡಲಾಗಿದೆ. ಉಳಿದ ರು.100 ಕೋಟಿ ಪರಿಹಾರ ವಿತರಣೆಯು ಚಾಲ್ತಿಯಲ್ಲಿದೆ. ಮಧ್ಯ ಕರ್ನಾಟಕ ಪದೇ ಪದೇ ಬರಗಾಲಕ್ಕೆ ತುತ್ತಾಗುತ್ತಿದೆ. ಭದ್ರಾ ಯೋಜನೆಯಲ್ಲಿ ರಾಜ್ಯಕ್ಕೆ ಹೆಚ್ಚಿನ ನೀರು ಲಭ್ಯವಿದೆ. ಹಾಗಾಗಿ ಈ ಭಾಗದ ರೈತರ ಅಭಿವೃದ್ಧಿಗಾಗಿ ಭದ್ರಾ ಮೇಲ್ದಂಡೆ ಯೋಜನೆ ರೂಪಿಸಲಾಗಿದೆ. ಈ ಯೋಜನೆಗೆ ಕೇಂದ್ರ ಸರ್ಕಾರದಿಂದ 5,300 ಕೋಟಿ ರು. ಹಣ ಬರುವುದು ಬಾಕಿಯಿದೆ. ಇಲ್ಲಿಯವರೆಗೂ ನಯಾಪೈಸೆ ಅನುದಾನ ಬಂದಿಲ್ಲ ಎಂದು ಹೇಳಿದರು.ಮಳೆಹಾನಿ ಪ್ರದೇಶ ಪರಿಶೀಲನೆ : ಇದಕ್ಕೂ ಮೊದಲು ಚಿತ್ರದುರ್ಗ ತಾಲೂಕಿನ ವಿವಿಧೆಡೆ ಮಳೆಹಾನಿ ಪ್ರದೇಶಗಳಿಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಳೆ ಹಾನಿಯಾಗಿರುವ ಚಿತ್ರದುರ್ಗ ತಾಲೂಕಿನ ಬೆಳಗಟ್ಟ, ಕಾಸವರಹಟ್ಟಿ, ಕೆ.ಬಳ್ಳೇಕಟ್ಟೆ, ಸಾದರಹಳ್ಳಿ ಸೇರಿದಂತೆ ವಿವಿಧೆಡೆ ರೈತರ ಜಮೀನುಗಳಿಗೆ ಭೇಟಿ ನೀಡಿ, ಹಾನಿಯಾಗಿರುವ ಬೆಳೆ ಪರಿಶೀಲನೆ ನಡೆಸಿ, ಮಾಹಿತಿ ಪಡೆದುಕೊಂಡರು.

ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಆರ್.ಕಾರ್ತಿಕ್, ತಹಸೀಲ್ದಾರ್ ಡಾ.ನಾಗವೇಣಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶರಣಪ್ಪ ಬೋಗಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!