ರಾಮನಗರ: ರಾಜ್ಯದಲ್ಲಿ ಜಾರಿಯಲ್ಲಿರುವ ಶೇ.56ರಷ್ಟು ಮೀಸಲಾತಿ ಪ್ರಮಾಣ ಸಂವಿಧಾನದ 9ನೇ ವಿಧಿಯಲ್ಲಿ ಸೇರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾಗಬೇಕು. ಇದಾಗದ ಹೊರತು ಈ ಕಾನೂನು ಊರ್ಜಿತವಾಗುವುದಿಲ್ಲ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಗ್ರಹಿಸಿದರು.
ಈ ಹಿಂದೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಿಸಲು ನ್ಯಾಯಾಧೀಶ ನಾಗಮೋಹನ ದಾಸ್ ಆಯೋಗವನ್ನು ರಚಿಸಿದ್ದರು. ಈ ಆಯೋಗದ ವರದಿಯಂತೆ ಎಸ್ಸಿ ಸಮುದಾಯಕ್ಕೆ ಶೇ 17.1 ಮತ್ತು ಎಸ್ಟಿ ಸಮುದಾಯಕ್ಕೆ ಶೇ 7 ಮೀಸಲಾತಿ, ಹಿಂದುಳಿದ ವರ್ಗಗಳಿಗೆ ಶೇ 32 ಮೀಸಲಾತಿ ನೀಡಲು ಶಿಫಾರಸ್ಸು ಮಾಡಿತ್ತು.
ಆ ಬಳಿಕ ಅಧಿಕಾರಕ್ಕೆ ಬಂದ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ, ಸುಭಾಷ್ ಆದಿ ಆಯೋಗ ರಚಿಸಿತು. ಈ ಆಯೋಗವು ಸಹ ನಾಗಮೋಹನ ದಾಸ್ ಆಯೋಗ ನೀಡಿದ್ದ ಶಿಪಾರಸ್ಸುಗಳ ಜಾರಿಗೆ ತಿಳಿಸಿತ್ತು. ಹೀಗಾಗಿ ಸರ್ವ ಪಕ್ಷಗಳ ಸಹಕಾರದಲ್ಲಿ 2022ರಲ್ಲಿ ಕರ್ನಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳು (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ಅಧಿನಿಯಮ 2022 ಜಾರಿಗೆ ಬಂದಿದೆ. ಹೀಗೆ ಜಾರಿಯಾದ ನಿಯಮದಂತೆ ಎಸ್ಸಿಗಳಿಗೆ ಇದ್ದ ಶೇ15 ಮೀಸಲಾತಿ 17.1ಕ್ಕೇರಿತು. ಪರಿಶಿಷ್ಠ ವರ್ಗಗಳಿಗೆ ಇದ್ದ ಶೇ 3 ಮೀಸಲಾತಿ ಶೇ 7ಕ್ಕೇರಿ ಈ ಸಮುದಾಯಗಳಿಗೆ ಉಪಯುಕ್ತವಾಯಿತು ಎಂದು ತಿಳಿಸಿದರು.ಸರ್ವೋಚ್ಛ ನ್ಯಾಯಾಲದಯದ ತೀರ್ಪಿನಂತೆ ಒಟ್ಟು ಮೀಸಲಾತಿ ಶೇ 50 ಮೀರುವಂತಿಲ್ಲ. ಆದರೆ, ಮೀಸಲಾತಿ ಹೆಚ್ಚಳಕ್ಕೆ ಮಾರ್ಗದರ್ಶನಗಳಿಗೆ ಅನುಗುಣವಾಗಿ ಏರಿಸಬಹುದು ಎಂದು ತೀರ್ಪಿನಲ್ಲಿದೆ. ಆದರೆ, ಈ ಹೆಚ್ಚಳ ಸಂವಿಧಾನದ 9ನೇ ವಿಧಿಯಲ್ಲಿ ಸೇರಿಸುವುದು ಅವಶ್ಯಕ. ಬೊಮ್ಮಾಯಿ ಸರ್ಕಾರದಲ್ಲಿ ಅಂದಿನ ಮುಖ್ಯ ಕಾರ್ಯದರ್ಶಿಗಳು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು 9ನೇ ವಿಧಿಯಲ್ಲಿ ಸೇರಿಸುವಂತೆ ಮನವಿ ಮಾಡಿದ್ದರು. ಆದರೆ, ಕೇಂದ್ರ ಸರ್ಕಾರ ಈ ಮನವಿಯನ್ನು ತಿರಸ್ಕರಿಸಲು ಇಲ್ಲ, ಪುರಸ್ಕರಿಸಲೂ ಇಲ್ಲ. ಇತ್ತ ರಾಜ್ಯದಲ್ಲಿ ಮೂರು ವರ್ಷಗಳ ಕಾಲ ವಿದ್ಯಾಭ್ಯಾಸದಲ್ಲಿ ಮೀಸಲಾತಿಯ ಅವಕಾಶ ಪಡೆದಿದ್ದರಿಂದ ಈ ಸಮುದಾಯದ ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಅನುಕೂಲವಾಗಿದೆ. ಆದರೆ, ಇತ್ತೀಚೆಗೆ ಹೈಕೋರ್ಟ್ ಮೀಸಲಾತಿ ಪ್ರಮಾಣದ ಹೆಚ್ಚಳಕ್ಕೆ ತಡೆಕೊಟ್ಟಿರುವುದರಿಂದ ಸುಮಾರು 4 ಕೋಟಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಹೀಗಾಗಿ ತಾವು ಷೆಡ್ಯೂಲ್ 9ರಲ್ಲಿ ಸೇರಿಸುವಂತೆ ಒತ್ತಾಯಿಸುತ್ತಿರುವುದಾಗಿ ಉಗ್ರಪ್ಪ ಹೇಳಿದರು.
ಹೈಕೋರ್ಟ್ ತಡೆಯಾಜ್ಞೆ ನೀಡಿದಾಕ್ಷಣ ರಾಜ್ಯ ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ, ಬಿಜೆಪಿ ನಾಯಕ ನಾರಾಯಣ ಸ್ವಾಮಿ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ಗೂಬೆ ಕೂರಿಸಲು ಯತ್ನಿಸುತ್ತಿದ್ದಾರೆ. ಎಸ್ಸಿಗಳಿಗೆ ಶೇ 17.1 ಮತ್ತು ಎಸ್ಟಿಗಳಿಗೆ ಶೇ 7 ಮೀಸಲಾತಿ ನೀಡಿದ್ದು ಬಿಜೆಪಿ ಸರ್ಕಾರ, ಇದು ಅವರ ಕೂಸು, ಹೀಗಾಗಿ ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರೇ ಪ್ರಧಾನಿ ಮೋದಿ ಅವರ ಮೇಲೆ ಒತ್ತಡ ತಂದು ಷೆಡ್ಯೂಲ್ 9ರಲ್ಲಿ ನಮೂದಿಸುವಂತೆ ಒತ್ತಾಯಿಸಬೇಕು. ಆಗ ಮಾತ್ರ ಯಾವ ಸಮಸ್ಯೆಯೂ ಇಲ್ಲದೆ ಮೀಸಲಾತಿಯ ಲಾಭವನ್ನು ಅರ್ಹರು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಯುವ ಘಟಕದ ರಾಜ್ಯಾಧ್ಯಕ್ಷ ಟಿ.ಆರ್.ತುಳಸೀರಾಂ, ಜಿಲ್ಲಾಧ್ಯಕ್ಷ ಅಂಜನಾಪುರ ವಾಸು, ಮಹಿಳಾ ವಿಭಾಗದ ಅಧ್ಯಕ್ಷೆ ಜಯಶ್ರೀ, ವಿಶ್ರಾಂತ ಉಪಕುಲಪತಿ ಶ್ರೀರಾಮುಲು, ಕನಕಪುರ ತಾಲೂಕು ಘಟಕದ ಅಧ್ಯಕ್ಷ ಡಿ.ಶ್ರೀನಿವಾಸ್, ಹಾರೋಹಳ್ಳಿ ತಾಲೂಕು ಅಧ್ಯಕ್ಷ ಮುನಿರಾಜು, ಪ್ರಮುಖರಾದ ರಮೇಶ್, ಕೊತ್ತಿಪುರ ಆನಂದ, ಕೃಷ್ಣಮೂರ್ತಿ ಇರುಳಿಗ, ಎಸ್.ಕೃಷ್ಣಪ್ಪ, ಎಚ್.ಹುಮಂತು, ಡಾ.ಶಾರದ ಬಡಿಗೇರಿ, ಶಿವರಾಜಕುಮಾರ್ ಇದ್ದರು.
ರಾಮನಗರದಲ್ಲಿ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.