ಗದಗ ಜಿಲ್ಲೆಯಲ್ಲಿ ಮಳೆ ಅನಿಶ್ಚಿತತೆ ಮಧ್ಯೆಯೂ 585777 ಹೆಕ್ಟೇರ್‌ ಬಿತ್ತನೆ

KannadaprabhaNewsNetwork |  
Published : Jun 19, 2026, 02:45 AM IST
ರೈತರು ಬಿತ್ತನೆ ಮಾಡುತ್ತಿರುವುದು.  | Kannada Prabha

ಸಾರಾಂಶ

ಕಳೆದ ಮೂರು ವರ್ಷಗಳ ಅಂಕಿ, ಅಂಶಗಳ ಪ್ರಕಾರ, ಜಿಲ್ಲೆಯ ಒಟ್ಟು ಬಿತ್ತನೆ ಕ್ಷೇತ್ರವು ನಿರಂತರ ಏರಿಕೆ ಕಂಡಿದ್ದು, 2023- 24, 2024- 25 ಹಾಗೂ 2025- 26ನೇ ಸಾಲಿನ ಮೂರು ವರ್ಷಗಳಲ್ಲಿಯೂ ಮುಂಗಾರು ಮತ್ತು ಹಿಂಗಾರು ಹಂಗಾಮುಗಳಲ್ಲಿ ಬಿತ್ತನೆ ಪ್ರಮಾಣ ಸ್ಥಿರತೆ ಕಾಯ್ದುಕೊಂಡಿದೆ.

ಶಿವಕುಮಾರ ಕುಷ್ಟಗಿ

ಗದಗ: ಕೃಷಿ ಪ್ರಧಾನ ಜಿಲ್ಲೆಯಾಗಿ ಗುರುತಿಸಿಕೊಂಡಿರುವ ಗದಗದಲ್ಲಿ, ಕಳೆದ 3 ವರ್ಷಗಳ ಕೃಷಿ ಅಂಕಿ ಅಂಶಗಳು ಜಿಲ್ಲೆಯ ಕೃಷಿ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳನ್ನು ಕಂಡಿದೆ. ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳನ್ನು ಒಳಗೊಂಡು ಆಗಿರುವ ಬಿತ್ತನೆ, ಮಳೆಯ ಅನಿಶ್ಚಿತತೆ ನಡುವೆಯೇ ಜಿಲ್ಲೆಯ ಬೆಳೆ ವಿಸ್ತೀರ್ಣ, ನೀರಾವರಿ ಸೌಲಭ್ಯ ಮತ್ತು ಪ್ರಮುಖ ಬೆಳೆಗಳ ಬಿತ್ತನೆಯಲ್ಲಿ ಉತ್ತಮ ಪ್ರಗತಿ ಕಂಡಿದೆ.

ಕಳೆದ ಮೂರು ವರ್ಷಗಳ ಅಂಕಿ, ಅಂಶಗಳ ಪ್ರಕಾರ, ಜಿಲ್ಲೆಯ ಒಟ್ಟು ಬಿತ್ತನೆ ಕ್ಷೇತ್ರವು ನಿರಂತರ ಏರಿಕೆ ಕಂಡಿದ್ದು, 2023- 24, 2024- 25 ಹಾಗೂ 2025- 26ನೇ ಸಾಲಿನ ಮೂರು ವರ್ಷಗಳಲ್ಲಿಯೂ ಮುಂಗಾರು ಮತ್ತು ಹಿಂಗಾರು ಹಂಗಾಮುಗಳಲ್ಲಿ ಬಿತ್ತನೆ ಪ್ರಮಾಣ ಸ್ಥಿರತೆ ಕಾಯ್ದುಕೊಂಡಿದೆ.

2023- 24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 312478 ಹೆ. ಹಾಗೂ ಹಿಂಗಾರಿನಲ್ಲಿ 243587 ಹೆ. ಸೇರಿದಂತೆ ಒಟ್ಟು 556065 ಹೆ., 2024- 25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 342810 ಹೆ., ಹಿಂಗಾರು ಹಂಗಾಮಿನಲ್ಲಿ 212301 ಹೆ. ಸೇರಿದಂತೆ ಒಟ್ಟು 555111 ಹೆ. ಪ್ರದೇಶದಲ್ಲಿ ಬಿತ್ತನೆಯಾಗಿದೆ. 2025- 26ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ 341579 ಹೆ. ಹಾಗೂ ಹಿಂಗಾರು ಹಂಗಾಮಿನಲ್ಲಿ 244198 ಹೆ. ಸೇರಿದಂತೆ ಒಟ್ಟು 585777 ಹೆ. ಪ್ರದೇಶದಲ್ಲಿ ಬಿತ್ತನೆಯಾಗಿದೆ.

ನೀರಾವರಿ ಕ್ಷೇತ್ರ ಜಿಲ್ಲೆಯಲ್ಲಿ ಕ್ರಮೇಣ ವಿಸ್ತರಿಸುತ್ತಿದ್ದು, ಮುಂಗಾರಿನಲ್ಲಿ 60442 ಹೆ. ಮತ್ತು ಹಿಂಗಾರಿನಲ್ಲಿ 57749 ಹೆ. ಸೇರಿ ಒಟ್ಟು 118191 ಹೆ. ಪ್ರದೇಶ ನೀರಾವರಿ ವ್ಯಾಪ್ತಿಗೆ ಬಂದಿದೆ. ಇದು ಮಳೆ ಆಧರಿತ ಕೃಷಿಯಿಂದ ನೀರಾವರಿ ಆಧರಿತ ಕೃಷಿಯತ್ತ ಜಿಲ್ಲೆ ನಿಧಾನವಾಗಿ ಹೆಜ್ಜೆಯಿಡುತ್ತಿದ್ದು, ಜಿಲ್ಲೆಯ ಕೃಷಿ ಕ್ಷೇತ್ರದ ಬೆಳವಣಿಗೆಗೆ ಉತ್ತಮ ಸಾಕ್ಷಿಯಾಗಿದೆ.

ಮೆಕ್ಕೆಜೋಳದ ಪ್ರಾಬಲ್ಯ:

2025- 26ರ ಮುಂಗಾರು ಹಂಗಾಮಿನಲ್ಲಿ ರೈತರು ಮೆಕ್ಕೆಜೋಳವನ್ನೇ 154216 ಹೆ. ಪ್ರದೇಶದಲ್ಲಿ ಬಿತ್ತನೆ ಮಾಡಿದ್ದು, ರೈತರ ಮೊದಲ ಆಯ್ಕೆಯಾಗಿ ಮುಂದುವರಿದಿದೆ. ಇದರ ನಂತರ ಹೆಸರು 106145 ಹೆ ಪ್ರದೇಶದಲ್ಲಿ ಬೆಳೆಯಲ್ಪಟ್ಟಿದೆ. ಶೇಂಗಾ 10322 ಹೆ., ಹತ್ತಿ 6664 ಹೆ. ಮತ್ತು ಸೂರ್ಯಕಾಂತಿ 3278 ಹೆ. ಪ್ರದೇಶದಲ್ಲಿ ಬಿತ್ತನೆಯಾಗಿದೆ. ಕಡಿಮೆ ಮಳೆಯ ಪರಿಸ್ಥಿತಿಯಲ್ಲಿಯೂ ಉತ್ತಮ ಉತ್ಪಾದನೆ ನೀಡುವ ಬೆಳೆಗಳತ್ತ ರೈತರು ಹೆಚ್ಚು ಒಲವು ತೋರಿಸುತ್ತಿರುವುದು ಬಿತ್ತನೆಯ ಈ ಅಂಕಿ, ಅಂಶಗಳಿಂದ ತಿಳಿದು ಬರುವ ಸತ್ಯವಾಗಿದೆ.

ಹಿಂಗಾರಿನಲ್ಲಿ ಕಡಲೆ: ಹಿಂಗಾರು ಹಂಗಾಮಿನಲ್ಲಿ ಕಡಲೆ ಪ್ರಮುಖ ಬೆಳೆಯಾಗಿ ಹೊರಹೊಮ್ಮಿದ್ದು, 157903 ಹೆ. ಪ್ರದೇಶದಲ್ಲಿ ಬಿತ್ತನೆಯಾಗಿದೆ. ಜೋಳ 22172 ಹೆ., ಗೋದಿ 19500 ಹೆ., ಸೂರ್ಯಕಾಂತಿ 14755 ಹೆ. ಮತ್ತು ಮೆಕ್ಕೆಜೋಳ 3287 ಹೆ. ಪ್ರದೇಶದಲ್ಲಿ ಬೆಳೆಯಲಾಗಿದೆ. ಹಿಂಗಾರು ಹಂಗಾಮಿನಲ್ಲಿ ಕಡಲೆ ಮತ್ತು ಗೋದಿಯತ್ತ ರೈತರ ಒಲವು ಹೆಚ್ಚಾಗಿರುವುದು ಮಾರುಕಟ್ಟೆ ಬೇಡಿಕೆ ಹಾಗೂ ಕಡಿಮೆ ನೀರಿನ ಅವಶ್ಯಕತೆ ಕಾರಣವೆಂದು ಕೃಷಿ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ರೈತರಲ್ಲಿ ಆತಂಕ: ಜಿಲ್ಲೆ ಮಳೆ ಆಧರಿತ ಕೃಷಿಗೆ ಹೆಚ್ಚು ಅವಲಂಬಿತವಾಗಿರುವುದರಿಂದ, ಒಮ್ಮೆ ಅತಿವೃಷ್ಟಿ, ಮತ್ತೊಮ್ಮೆ ಬರಗಾಲದಂಥ ಸ್ಥಿತಿಗಳು ಪದೇ ಪದೇ ನಿರ್ಮಾಣವಾಗಿ, ಜಿಲ್ಲೆಯ ಕೃಷಿ ವಲಯದಲ್ಲಿ ಅನಿಶ್ಚಿತತೆ ರೈತರನ್ನು ಕಾಡುತ್ತಿದೆ. ಹವಾಮಾನ ವೈಪರೀತ್ಯಗಳು ಕೃಷಿ ಕ್ಷೇತ್ರಕ್ಕೆ ಹೊಸ ಸವಾಲುಗಳನ್ನು ಸೃಷ್ಟಿಸುತ್ತಿರುವ ಹಿನ್ನೆಲೆ ಸಹಜವಾಗಿಯೇ ರೈತರಲ್ಲಿ ಆತಂಕ ಹೆಚ್ಚಾಗುತ್ತಿದೆ ಎಂದು ಸವಡಿ ಗ್ರಾಮದ ಯುವ ಕೃಷಿಕ ರಾಮನಗೌಡ ಅರಹುಣಸಿ ತಿಳಿಸಿದರು.ಗಮನಾರ್ಹ ಬೆಳವಣಿಗೆ: ಹತ್ತಾರು ಸವಾಲುಗಳ ನಡುವೆಯೂ ಜಿಲ್ಲೆಯಲ್ಲಿ ಕೃಷಿ ಕ್ಷೇತ್ರದ ವಿಸ್ತರಣೆ, ನೀರಾವರಿ ಸೌಲಭ್ಯಗಳ ಹೆಚ್ಚಳ ಹಾಗೂ ಬೆಳೆ ವೈವಿಧ್ಯತೆ ಗಮನಾರ್ಹ ಬೆಳವಣಿಗೆ ಕಂಡಿದೆ. ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಸಮನ್ವಯದೊಂದಿಗೆ ರೈತರಿಗೆ ತಾಂತ್ರಿಕ ಮಾರ್ಗದರ್ಶನ, ಆಧುನಿಕ ಕೃಷಿ ಪದ್ಧತಿಗಳ ಪರಿಚಯ ಮತ್ತು ನೀರಾವರಿ ಸೌಲಭ್ಯಗಳ ವಿಸ್ತರಣೆಗೆ ಒತ್ತು ನೀಡಿರುವುದರಿಂದ ಜಿಲ್ಲೆಯ ಕೃಷಿ ಅಭಿವೃದ್ಧಿಗೆ ಬಲ ಬಂದಿದೆ. ಮಳೆ ಕೊರತೆಯ ನಡುವೆಯೂ ಬಿತ್ತನೆ ಕ್ಷೇತ್ರವನ್ನು ಸ್ಥಿರವಾಗಿ ಕಾಯ್ದುಕೊಂಡಿರುವುದು ಜಿಲ್ಲೆಯ ರೈತರ ದೃಢ ಸಂಕಲ್ಪ ಮತ್ತು ಕೃಷಿಯ ಮೇಲಿನ ನಂಬಿಕೆಗೆ ಸಾಕ್ಷಿಯಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಚೇತನಾ ಪಾಟೀಲ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಂಆರ್‌ಜಿ ಸಮೂಹದಿಂದ ಗೋವಾದಲ್ಲಿ ಗೋಲ್ಡ್ ಫಿಂಚ್
ವನ್ಯಪ್ರಾಣಿ ಮಾನವ ಸಂಘರ್ಷ ತಡೆಗೆ ಶಾಶ್ವತ ಕ್ರಮ