ಮನುಷ್ಯನ ಜೀವ ಅಮೂಲ್ಯವಾಗಿದ್ದು, ವನ್ಯಪ್ರಾಣಿ ಮಾನವ ಸಂಘರ್ಷ ತಡೆಗೆ ಸರ್ಕಾರ ಶಾಶ್ವತ ಕ್ರಮ ಕೈಗೊಳ್ಳಬೇಕು. ಬೆಳೆ ಹಾನಿಗೆ ನೀಡುವ ಅಲ್ಪ ಪರಿಹಾರ ಮೊತ್ತವನ್ನು ಹೆಚ್ಚಿಸಬೇಕು ಎಂದು ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಮೇ.ಜ. ಬಿ.ಎ. ಕಾರ್ಯಪ್ಪ ಆಗ್ರಹಿಸಿದ್ದಾರೆ.

ಮಡಿಕೇರಿ: ಮನುಷ್ಯನ ಜೀವ ಅಮೂಲ್ಯವಾಗಿದ್ದು, ವನ್ಯಪ್ರಾಣಿ ಮಾನವ ಸಂಘರ್ಷ ತಡೆಗೆ ಸರ್ಕಾರ ಶಾಶ್ವತ ಕ್ರಮ ಕೈಗೊಳ್ಳಬೇಕು. ಬೆಳೆ ಹಾನಿಗೆ ನೀಡುವ ಅಲ್ಪ ಪರಿಹಾರ ಮೊತ್ತವನ್ನು ಹೆಚ್ಚಿಸಬೇಕು ಎಂದು ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಮೇ.ಜ. ಬಿ.ಎ. ಕಾರ್ಯಪ್ಪ ಆಗ್ರಹಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ಅರಣ್ಯದಲ್ಲಿ ವನ್ಯ ಪ್ರಾಣಿಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಆಹಾರ ಲಭ್ಯವಿತ್ತು. ಇತ್ತೀಚಿನ ವರ್ಷಗಳಲ್ಲಿ ಅರಣ್ಯ ನಾಶದಿಂದಾಗಿ ಕಾಡಿನಲ್ಲಿ ತಿನ್ನಲು ಆಹಾರ ಸಿಗದೆ ಕಾಡಾನೆಗಳು ಕಾಫಿ ತೋಟಗಳಿಗೆ ಲಗ್ಗೆ ಇಡುತ್ತಿವೆ. ಇಲ್ಲಿ ಆಹಾರ, ನೀರು ಅಗತ್ಯ ಪ್ರಮಾಣದಲ್ಲಿ ಸಿಗುವುದರಿಂದ ತೋಟಗಳನ್ನೇ ವಾಸ ಸ್ಥಾನವಾಗಿ ಮಾಡಿಕೊಳ್ಳುತ್ತಿವೆ. ಇದರಿಂದ ಕಾಫಿ, ಅಡಿಕೆ, ತೆಂಗು ಮತ್ತಿತರ ಬೆಳೆಗಳು ನಾಶವಾಗಿ ರೈತರು ನಷ್ಟ ಅನುಭವಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಮನೆಗಳಲ್ಲಿ ಕೋವಿ ಇದ್ದರೂ ಆಯುಧ ಪೂಜೆಗಷ್ಟೇ ಸೀಮಿತ ಎಂಬಂತಾಗಿದೆ. ಆನೆಗಳನ್ನು ಎಷ್ಟು ಬಾರಿ ಸ್ಥಳಾಂತರಿಸಿದರು ಮತ್ತೆ ನಾಡಿಗೆ ಬರುತ್ತಿವೆ. ಆದ್ದರಿಂದ ಅರಣ್ಯ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ, ಅರಣ್ಯದಲ್ಲಿ ಕಾಡಾನೆಗಳಿಗೆ ಆಹಾರ ಮತ್ತು ನೀರಿನ ವ್ಯವಸ್ಥೆ ಕಲ್ಪಿಸಬೇಕು. ಕಾಡಾನೆ ತಡೆಗೆ ರೈಲ್ವೆ ಬ್ಯಾರಿಕೇಡ್, ತಡೆಗೋಡೆ ಮತ್ತಿತರ ಪರಿಣಾಮಕಾರಿ ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಕಳೆದ ೫ ವರ್ಷಗಳಿಂದ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮಾಜಿ ಸೈನಿಕರ ಅದಾಲತ್ ನಡೆದಿರಲಿಲ್ಲ. ಆದರೆ, ಈಗಿನ ಜಿಲ್ಲಾಧಿಕಾರಿ ಸೋಮಶೇಖರ್ ಅವರು, ಕಳೆದ ಏ. ೭ರಂದು ಕೊಡಗು ಜಿಲ್ಲಾ ಮಾಜಿ ಸೈನಿಕರು ಮತ್ತು ಅವರ ಅವಲಂಬಿತರ ಸಭೆ ಕರೆದು ಕುಂದುಕೊರತೆ ಆಲಿಸಿ, ಹಲವಾರು ವಿಷಯದ ಬಗ್ಗೆ ಚರ್ಚಿಸಿ, ಗೌರವಪೂರ್ವಕವಾಗಿ ನಡೆಸಿಕೊಂಡಿದ್ದಾರೆಂದು ಶ್ಲಾಘನೆ ವ್ಯಕ್ತಪಡಿಸಿದರು.ಸಂಘದ ಗೌರವ ಕಾರ್ಯದರ್ಶಿ ಓ.ಎಸ್. ಚಿಂಗಪ್ಪ ಮಾತನಾಡಿ, ಕೆಲವು ವರ್ಷಗಳ ಹಿಂದೆ ಮಾಜಿ ಸೈನಿಕರಿಗೆ ಅವರದ್ದೇ ಊರಿನಲ್ಲಿ ಸರ್ಕಾರ ನಿವೇಶನ ನೀಡುತ್ತಿತ್ತು. ಪ್ರಸ್ತುತ ಮಾಜಿ ಸೈನಿಕರ ತಂದೆಯ ಹೆಸರಿನಲ್ಲಿ ಭೂಮಿ ಇದ್ದರೆ ಸರ್ಕಾರದಿಂದ ನಿವೇಶನ ನೀಡುವುದಿಲ್ಲ. ಆದರೆ ತಂದೆಯ ಆಸ್ತಿಗೂ, ನಮ್ಮ ಸೇವೆಗೂ ವ್ಯತ್ಯಾಸವಿದೆ. ಅದನ್ನು ಅರ್ಥಮಾಡಿಕೊಳ್ಳಬೇಕು ಎಂದ ಅವರು, ಕಳೆದ ೨೦ ವರ್ಷಗಳಿಂದ ಮಾಜಿ ಸೈನಿಕರಿಗೆ ನಿವೇಶನಕ್ಕಾಗಿ ಸಲ್ಲಿಸಿರುವ ೧೫೦೦ ಅರ್ಜಿಗಳು ಇನ್ನೂ ವಿಲೇವಾರಿಗೆ ಬಾಕಿ ಇವೆ ಎಂದು ಚಿಂಗಪ್ಪ ಹೇಳಿದರು.

ಸಂಘದ ಉಪಾಧ್ಯಕ್ಷ ಲೆ.ಜ. ಗಣಪತಿ, ಪೊನ್ನಂಪೇಟೆ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಮಂದಣ್ಣ, ವಿರಾಜಪೇಟೆ ಮಾಜಿ ಸೈನಿಕರ ಸಹಕಾರ ಸಂಘದ ಅಧ್ಯಕ್ಷ ಚಪ್ಪಂಡ ಹರೀಶ್, ಸೋಮವಾರಪೇಟೆ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಿ. ಈರಪ್ಪ ಸುದ್ದಿಗೋಷ್ಠಿಯಲ್ಲಿದ್ದರು.