ಶಿವಕುಮಾರ ಕುಷ್ಟಗಿ
ಕಾರ್ಮಿಕ ಕಲ್ಯಾಣ ಮಂಡಳಿ ಮತ್ತು ಖಾಸಗಿ ವೈದ್ಯಕೀಯ ಸಂಸ್ಥೆಗಳು ಶಾಮೀಲಾಗಿ ಸರ್ಕಾರದ ಹಣ ಲೂಠಿ ಮಾಡಿದ್ದು, ಈ ಕುರಿತಂತೆ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿ ಶಿಕ್ಷೆ ನೀಡಿವಂತೆ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದೆ.
2023- 24 ಮತ್ತು 2024- 25ನೇ ಸಾಲಿನಲ್ಲಿ ಜಿಲ್ಲೆಯ 67 ಸಾವಿರ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ನಡೆಸುವ ಟೆಂಡರ್ ಪಡೆದ ವೈದ್ಯಕೀಯ ಸಂಸ್ಥೆಗಳು (ಪ್ರಮುಖವಾಗಿ ಬೆಂಗಳೂರಿನ ಬ್ಲಾಸಮ್ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್, ಮೈಸೂರಿನ ಕ್ಲಿಯರ್ ಮೇಡಿಯಾ ಹೆಲ್ತ್ ಕೇರ್ ಪ್ರೈ. ಲಿ.) ವಾಸ್ತವವಾಗಿ ಪರೀಕ್ಷೆಗಳನ್ನು ನಡೆಸದೇ ಹಣ ಪಡೆದಿದ್ದು, ದಾಖಲೆಗಳಿಂದ ಪತ್ತೆಯಾಗಿದೆ.ಎಲ್ಲರಿಗೂ ಒಂದೇ ತಪಾಸಣೆ: ಜಿಲ್ಲೆಯಲ್ಲಿರುವ 67 ಸಾವಿರ ಕಾರ್ಮಿಕರನ್ನು ತಪಾಸಣೆ ಮಾಡಲಾಗಿದೆ ಎಂದು ಬಿಲ್ ಸೃಷ್ಟಿಸಲಾಗಿದೆ. ವಿಚಿತ್ರವೆಂದರೆ ಎಲ್ಲ ಕಾರ್ಮಿಕರಿಗೂ ಒಂದೇ ರೀತಿಯ ಕಾಯಿಲೆಗಳ ತಪಾಸಣೆ, ರಕ್ತ ಪರಿಶೀಲನೆ ಮತ್ತು ಒಂದೇ ರೀತಿಯ ಚೆಕ್‌ಅಪ್‌ಗಳನ್ನು ಮಾಡಲಾಗಿದೆ. ಸಾವಿರಾರು ಕಾರ್ಮಿಕರಿಗೆ ನೀಡಲಾದ ವೈದ್ಯಕೀಯ ಪರೀಕ್ಷಾ ವರದಿಗಳಲ್ಲಿನ ಫಲಿತಾಂಶಗಳು ಒಂದೇ ರೀತಿ ಇವೆ. ನೂರಾರು ಜನರಿಗೆ ತಪಾಸಣೆ ಮಾಡಿದ ವೈದ್ಯಕೀಯ ಪರೀಕ್ಷಾ ವರದಿಗಳು ಒಂದೇ ರೀತಿ ಇರುವುದು ಅಸಾಧ್ಯ. ಈ ವರದಿಗಳನ್ನು ಕಚೇರಿಯಲ್ಲಿ ಕುಳಿತು ಸಿದ್ಧಪಡಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಒಂದೇ ದಿನ ಅಪಾರ ತಪಾಸಣೆ: ಗದಗ ಕಾರ್ಮಿಕ ಇಲಾಖೆಯಲ್ಲಿನ ದಾಖಲು ಇರುವ ಅಂಕಿ- ಅಂಶ, ಕಾರ್ಮಿಕರನ್ನು ತಪಾಸಣೆ ಮಾಡಿದ ದಿನಾಂಕಗಳನ್ನು ಪರಿಶೀಲಿಸಿದರೆ, ವೈದ್ಯಕೀಯ ತಂಡವು ಒಂದು ದಿನದಲ್ಲಿ ಅಸಾಧ್ಯ ಎನಿಸುವಷ್ಟು ದೊಡ್ಡ ಸಂಖ್ಯೆಯ ಕಾರ್ಮಿಕರನ್ನು ಪರೀಕ್ಷಿಸಿದೆ. ಇಷ್ಟೊಂದು ಸಂಖ್ಯೆಯ ಕಾರ್ಮಿಕರು ಒಂದೇ ಬಾರಿ ಹೇಗೆ ತಪಾಸಣೆಗೆ ಬಂದರು? ಎಲ್ಲಿ ತಪಾಸಣೆ ನಡೆಸಲಾಗಿದೆ ಎನ್ನುವುದನ್ನು ಗಮನಿಸಿದಾಗ ಇದು ಸಂಪೂರ್ಣ ಸುಳ್ಳು ದಾಖಲಾತಿ ಸೃಷ್ಟಿ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.ಲೋಕಾಯುಕ್ತಕ್ಕೆ ದೂರು: ಕಾರ್ಮಿಕ ಇಲಾಖೆ ಅಧಿಕಾರಿಗಳು, ಎರಡು ವೈದ್ಯಕೀಯ ಸಂಸ್ಥೆಗಳು ಅಧಿಕಾರಿಗಳೊಂದಿಗೆ ಶಾಮೀಲಾಗಿ ಅಂದಾಜು ತಲಾ ₹3 ಕೋಟಿಯಂತೆ ಸರ್ಕಾರಕ್ಕೆ ಸುಮಾರು ₹6 ಕೋಟಿಯಷ್ಟು ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ. ಈ ಯೋಜನೆಯ ಪಾವತಿ ದಾಖಲೆಗಳು, ವೈದ್ಯಕೀಯ ವರದಿಗಳು, ತಪಾಸಣೆಯ ಫೋಟೋ, ಜಿಪಿಎಸ್ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಿ, ತುರ್ತು ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ಮನವಿ ಮಾಡಿದ್ದು, ತಪ್ಪಿತಸ್ಥ ವೈದ್ಯಕೀಯ ಸಂಸ್ಥೆಗಳ ಮತ್ತು ಭ್ರಷ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ, ಸಾರ್ವಜನಿಕ ಹಣವನ್ನು ಉಳಿಸಬೇಕೆಂದು ಮನವಿಯಲ್ಲಿ ವಿನಂತಿಸಿದ್ದಾರೆ. ಎಲ್ಲ ಜಿಲ್ಲೆಯಲ್ಲೂ ಭ್ರಷ್ಟಾಚಾರ: ಚನ್ನಮಲ್ಲಯ್ಯ
ಲೋಕಾಯುಕ್ತಕ್ಕೆ ಪ್ರಕರಣ ದಾಖಲಿಸಿದ ಚನ್ನಮಲ್ಲಯ್ಯ ಹಿರೇಮಠ ಅವರು ಪ್ರತಿಕ್ರಿಯಿಸಿ, ಈ ಭ್ರಷ್ಟಾಚಾರದಲ್ಲಿ ಜಿಲ್ಲಾ ಕಾರ್ಮಿಕ ಇಲಾಖೆಯ ಹಿರಿಯ ಅಧಿಕಾರಿಗಳ ಪಾತ್ರವೇ ಪ್ರಮುಖವಾಗಿದೆ. ಆರೋಗ್ಯ ತಪಾಸಣೆಯ ಮಾಹಿತಿಯನ್ನು ಮಾಹಿತಿ ಹಕ್ಕಿನಡಿ ಕೇಳಿದರೆ, ಜಿಲ್ಲೆಯ ಅಧಿಕಾರಿಗಳು ನಮ್ಮಲ್ಲಿ ಯಾವುದೇ ಮಾಹಿತಿ ಇಲ್ಲ. ಟೆಂಡರ್ ಬೆಂಗಳೂರಿನಲ್ಲಿ ಆಗಿದೆ ಎಂದು ಮಾಹಿತಿ ನೀಡಲು ನಿರಾಕರಿಸುತ್ತಾರೆ. ಇದರರ್ಥ, ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತಿಳಿಸದೆಯೇ ತಪಾಸಣೆ ಕಾರ್ಯಗಳು ನಡೆದಿದೆಯೇ? ಅಥವಾ ಅವರು ಉದ್ದೇಶಪೂರ್ವಕವಾಗಿ ಟೆಂಡರ್ ಸಂಸ್ಥೆಗಳೊಂದಿಗೆ ಶಾಮೀಲಾಗಿ, ತಪಾಸಣೆ ನಡೆಯುವ ಸ್ಥಳ, ಸಮಯ ಮತ್ತು ಜಿಪಿಎಸ್ ದಾಖಲೆಗಳನ್ನು ಪರಿಶೀಲಿಸದೇ ನಿರ್ಲಕ್ಷ್ಯ ವಹಿಸಿದ್ದಾರೆಯೇ? ಜಿಲ್ಲೆಗೆ ಬಿಡುಗಡೆಯಾದ ಅನುದಾನವನ್ನು ಕೇಂದ್ರ ಕಚೇರಿಯವರು ಹೇಗೆ ಬಳಕೆ ಮಾಡಿಕೊಂಡರು? ಇದು ಕೇವಲ ಗದಗ ಜಿಲ್ಲೆಯಲ್ಲಿ ಮಾತ್ರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನೂರಾರು ಕೋಟಿ ಭ್ರಷ್ಟಾಚಾರ ನಡೆದಿದೆ. ಈ ಕುರಿತು ಎಲ್ಲ ಜಿಲ್ಲೆಗಳಲ್ಲಿಯೂ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.