ಕನ್ನಡಪ್ರಭ ವಾರ್ತೆ ಹೊನ್ನಾಳಿ
ನ್ಯಾಮತಿ-ಹೊನ್ನಾಳಿ ಅವಳಿ ತಾಲೂಕುಗಳ ಅಭಿವೃದ್ಧಿಗಾಗಿ ಸರ್ಕಾರದಿಂದ 60 ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಅವರು ಹೇಳಿದರು.ಅವರು ಗುರುವಾರ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಕರೆಯಲಾಗಿದ್ದ ತ್ರೈಮಾ ಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಲೋಕೋಪ ಯೋಗಿ ಇಲಾಖೆಗೆ ತಾಲೂಕಿನ ರಸ್ತೆಗಳ ಅಭಿವೃದ್ದಿಗೆ 20 ಕೋಟಿ, ಗ್ರಾಮೀಣಾಭಿವೃದ್ದಿ ಇಲಾಖೆಯಿಂದ ಸಿ.ಸಿ.ರಸ್ತೆ ಮತ್ತು ಚರಂಡಿಗಳಿಗಾಗಿ 20 ಕೋಟಿ , ಮುಜರಾಯಿ ಇಲಾಖೆಯ ದೇವಸ್ಥಾನಗಳ ಅಭಿವೃದ್ಧಿಗೆ 5 ಕೋಟಿ, ಅಲ್ಪಸಂಖ್ಯಾತ ಇಲಾಖೆಗೆ 5 ಕೋಟಿ ಸೇರಿದಂತೆ ಇತರೆ ಅಭಿವೃದ್ಧಿಗಾಗಿ 10 ಕೋಟಿ ರು.ಹೀಗೆ ಅವಳಿ ತಾಲೂಕುಗಳಿಗೆ ಒಟ್ಟು 60 ಕೋಟಿ ರು. ಅನುದಾನ ನೀಡಿದೆ ಎಂದು ಹೇಳಿದರು.ಅವಳಿ ತಾಲೂಕುಗಳಲ್ಲಿ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಯಾವುದೇ ಹಣದ ಕೊರತೆ ಇಲ್ಲ, ಅವಳಿ ತಾಲೂಕುಗಳಿಗೆ 90 ಲಕ್ಷ ಈಗಾಗಲೇ ಬಿಡುಗಡೆ ಯಾಗಿದ್ದು, ಹೆಚ್ಚುವರಿಯಾಗಿ ಜಿಲ್ಲೆಗೆ 2 ಕೋಟಿ ರು.ಅನುದಾನ ನೀಡಿದ್ದು ಇದರಲ್ಲಿ ಹೊನ್ನಾಳಿ, ನ್ಯಾಮತಿ ತಾಲೂಕುಗಳಿಗೆ ಅನುದಾನ ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದರು.
ಅವಳಿ ತಾಲೂಕುಗಳಲ್ಲಿ ಬೋರ್ ವೆಲ್ ಗಳಲ್ಲಿ ನೀರು ಬತ್ತಿದ ಕಾರಣ ಸುಮಾರು 13 ಹಳ್ಳಿಗಳಲ್ಲಿ ಹೊಸದಾಗಿ ಬೋರ್ವೆಲ್ ಗಳನ್ನು ಕೊರೆಯಿಸಲಾಗಿದ್ದು, ಇದಕ್ಕೆ ಅಗತ್ಯವಾದ ಪೈಪ್, ವಿದ್ಯುತ್ ಬೋರ್ಡ್‌ಗಳ ಅಳವಡಿಕೆ ಮಾಡಿ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದರು.ಅವಳಿ ತಾಲೂಕುಗಳ 5 ಗ್ರಾಮಗಳಲ್ಲಿ ಖಾಸಗಿ ಬೋರ್ ವೆಲ್‌ಗಳಿಂದ ಬಾಡಿಗೆ ಆಧಾರದ ಮೇಲೆ ನೀರು ಪಡೆಯಲಾಗುತ್ತಿದ್ದು, ಪ್ರತಿ ತಿಂಗಳಿಗೆ ಬೋರ್ವೆಲ್ ಮಾಲೀಕರುಗಳಿಗೆ ರು.15 ಸಾವಿರ ಬಾಡಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಬರಗಾವಿದ್ದರೂ ಕೂಡ ತಾಲೂಕಿನಲ್ಲಿ ಸುಮಾರು 9 ತಿಂಗಳಿಗಾಗುವಷ್ಟು ಜಾನುವಾರುಗಳ ಮೇವು ದಾಸ್ತಾನು ಇದೆ ಮುಂಗಾರು ಬೇಗನೇ ಆರಂಭಗೊಂಡಲ್ಲಿ ಅವಳಿ ತಾಲೂಕುಗಳಲ್ಲಿ ಬರಗಾಲದ ಕಷ್ಟ ಉದ್ಭವವಾಗಲಾರದು ಎಂದರು.ಕೃಷಿ ಇಲಾಖೆ ಅಧಿಕಾರಿ ಪ್ರತಿಮಾ ಮಾತನಾಡಿ, ಪ್ರಸ್ತುತ ಬೇಸಿಗೆ ಹಂಗಾಮಿನಲ್ಲಿ 9775 ಬಿತ್ತನೆ ಗುರಿ ಹೋಂದಲಾಗಿದ್ದು, ಒಟ್ಟು 3710 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಪ್ರಸ್ತುತ ವರ್ಷದಲ್ಲಿ ನೀರಾವರಿ ಯೋಜನೆಯಡಿ ಸಾಮಾನ್ಯ ರೈತರಿಗೆ 301 ಲಕ್ಷ ರು., ವಿಶೇಷ ಘಟಕ ಯೋಜನೆಯಡಿಯಲ್ಲಿ 60ಲಕ್ಷ ಹಾಗೂ ಗಿರಿಜನ ಉಪಯೋಗ ಯೋಜನೆಯಡಿ. 19.5 ಲಕ್ಷ ಕ್ರಿಯಾ ಯೋಜನೆ ನೀಡಲಾಗಿದ್ದು, ರೈತರಿಗೆ ತುಂತುರ ಹನಿ ನೀರಾವರಿ ಘಟಕಗಳನ್ನು ಸಹಾಯ ಧನದಲ್ಲಿ ವಿತರಣೆ ಮಾಡಲಾಗಿದೆ ಎಂದರು.ವಿದ್ಯಾರ್ಥಿಗಳ ಪರದಾಟ: ಪಟ್ಟಣದ ಹೊರವಲಯದಲ್ಲಿರುವ ಹೆಲಿಪ್ಯಾಡ್ ಸಮೀಪದಲ್ಲಿರುವ ಬಿಸಿಎಂ ಹಾಸ್ಟೆಲ್ ಗಳ ವಿದ್ಯಾರ್ಥಿಗಳು ಸುಮಾರು ಕಿಲೋ ಮೀಟರ್ ಗಳಷ್ಟು ದೂರದ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ಹೋಗಬೇಕಾಗಿದ್ದು, ಪ್ರತಿ ದಿನ ರಸ್ತೆಯ ಪಕ್ಕದಲ್ಲಿ ನಿಂತು ಬೈಕ್ ಗಳಿಗೆ ಕೈ ಮಾಡುವ ಪರಿಸ್ಥಿತಿ ಇದೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಉಮಾ ಅವರು ಶಾಸಕರ ಗಮಕ್ಕೆ ತಂದಾಗ, ಶಾಸಕರು ಈ ಬಗ್ಗೆ ತಹಶೀಲ್ದಾರ್ ಮೂಲಕ ಕೆ.ಎಸ್.ಆರ್.ಟಿ.ಸಿ. ಮತ್ತು ಖಾಸಗಿ ಬಸ್ ಮಾಲೀಕರೊಂದಿಗೆ ಮಾತನಾಡಿ, ಈ ಮಾರ್ಗವಾಗಿ ಓಡಾಡುವ ಬಸ್ ಗಳನ್ನು ನಿಲ್ಲಿಸಿ ವಿದ್ಯಾರ್ಧಿಗಳನ್ನು ಕರೆ ತರುವಂತೆ ಸೂಚನೆ ನೀಡಲು ತೀರ್ಮಾನಿಸಲಾಯಿತು.ಸಭೆಯಲ್ಲಿ ತಹಶೀಲ್ದಾರ್ ಫೀರೋಜ್, ತಾ.ಪಂ.ಅಧಿಕಾರಿ ರಾಘವೇಂದ್ರ, ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.