ಕನ್ನಡಪ್ರಭ ವಾರ್ತೆ ಟಿ. ನರಸೀಪುರ
ತಾಲೂಕಿನ ದೊಡ್ಡೇಬಾಗಿಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತರು ಮತ್ತೊಮ್ಮೆ ಪ್ರಾಬಲ್ಯಮೆರೆದಿದ್ದು, 12 ಸ್ಥಾನಗಳ ಪೈಕಿ 10 ಸ್ಥಾನದಲ್ಲಿ ಜಯಬೇರಿ ಬಾರಿಸಿದ್ದು ಕಾಂಗ್ರೆಸ್ ಪಕ್ಷ ತೀವ್ರ ಮುಖಭಂಗ ಅನುಭವಿಸಿದೆ.ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆಗಾಗಿ ಭಾನುವಾರ ನಡೆದ ಚುನಾವಣೆಯಲ್ಲಿ ಸಂಘದ ಹಾಲಿ ಅಧ್ಯಕ್ಷ ಮಹದೇವಯ್ಯ ನೇತೃತ್ವದ ಬಣದ ಸದಸ್ಯರು ನಿರೀಕ್ಷೆಗೂ ಮೀರಿದ ಜಯಬೇರಿ ಬಾರಿಸಿದ್ದು ಸಹಕಾರ ಸಂಘದ ಒಟ್ಟು 12 ಸ್ಥಾನಗಳ ಪೈಕಿ 10 ಸ್ಥಾನಗಳನ್ನು ಪಡೆದು ಆಯ್ಕೆಯಾದರೆ, ಕಾಂಗ್ರೆಸ್ ಮುಖಂಡ ತಾಪಂ ಮಾಜಿ ಅಧ್ಯಕ್ಷ ದೊಡ್ಡೇಬಾಗಿಲು ಮಲ್ಲಿಕಾರ್ಜುನ ಸ್ವಾಮಿ ತಂಡದಿಂದ ಅವಿರೋಧ ಆಯ್ಕೆ ಸೇರಿದಂತೆ ಇಬ್ವರು ನಿರ್ದೇಶಕರು ಮಾತ್ರವೇ ಆಯ್ಕೆಯಾಗಲು ಸಾಧ್ಯವಾಯಿತು.
ಭಾನುವಾರ ಬೆಳಗ್ಗೆ 10ಕ್ಕೆ ಆರಂಭವಾದ ಮತದಾನಪ್ರಕ್ರಿಯೆ ಮಧ್ಯಾಹ್ನ 3 ಗಂಟೆವರೆಗೂ ನಡೆಯಿತು. ಸಾಲಗಾರರ ಕ್ಷೇತ್ರದಿಂದ 260 ಮತಗಳ ಪೈಕಿ 248 ಮತಗಳು ಚಲಾವಣೆಗೊಂಡರೆ ಸಾಲಗಾರರಲ್ಲದ ಕ್ಷೇತ್ರದ 54 ಮತಗಳ ಪೈಕಿ 53 ಮತ ಚಲಾಯಿಸಿದರು.ಸಾಲಗಾರರ ಕ್ಷೇತ್ರದಿಂದ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹಾಲಿ ಅಧ್ಯಕ್ಷ ಮಹದೇವಯ್ಯ ಸೇರಿದಂತೆ ಸಾಮಾನ್ಯ ಕ್ಷೇತ್ರದಿಂದ ಡಿ.ಪಿ. ನಾಗರಾಜು, ಅಕ್ಬರ್ ಪಾಷ, ಮಹದೇವಮ್ಮ, ಬಸವರಾಜು, ಪ.ಪಂಗಡದ ಜವರನಾಯ್ಕ, ಹಿಂದುಳಿದ ವರ್ಗಗಳ ಪ್ರವರ್ಗ ಎ ಯಿಂದ ಕೆ. ಮರಿಸ್ವಾಮಿ, ಮಹಿಳೆ ಮೀಸಲಾತಿಯಡಿ ಪುಟ್ಟತಾಯಮ್ಮ, ಮರಿತಾಯಮ್ಮ ಹಾಗೂ ಸಾಲಗಾರರ ಕ್ಷೇತ್ರದಿಂದ ಸಾಮಾನ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಾಜಮ್ಮ ಚುನಾವಣೆಯಲ್ಲಿ ಜಯಗಳಿಸಿದರು.
ಉಳಿದಂತೆ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿದ್ದ ಎಂ. ಮಹದೇವಸ್ವಾಮಿ ಆಯ್ಕೆಯಾದರೆ, ಸಾಲಗಾರರ ಕ್ಷೇತ್ರದಿಂದ ಕಾಂಗ್ರೆಸ್ ನ ಚಿಕ್ಕತಾಯಮ್ಮ ಅವಿರೋಧವಾಗಿ ಆಯ್ಕೆಯಾದರು.ಚುನಾವಣೆ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಸಹಕಾರ ಸಂಘದ ಮುಂದೆ ಜಮಾಯಿಸಿದ್ದ ಬೆಂಬಲಿಗರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ಕಳೆದ ಬಾರಿ ಕೂಡ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳೇ ಗೆಲುವು ಸಾಧಿಸಿ ಸಹಕಾರ ಸಂಘದ ಅಧಿಕಾರ ಹಿಡಿದಿದ್ದರು. ಈ ಬಾರಿ ಜೆಡಿಎಸ್ ಬೆಂಬಲಿತರಿಗೆ ಸೋಲುಣಿಸಲು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಸ್ವಾಮಿ ಹೆಣೆದಿದ್ದ ಕಾರ್ಯತಂತ್ರ ಫಲನೀಡದೇ ಕೇವಲ 2 ಸ್ಥಾನ ಗಳಿಸುವಲ್ಲಿ ತೃಪ್ತಿ ಪಟ್ಟುಕೊಳ್ಳುವಂತಾಯಿತು.ಕಾರ್ಯಕರ್ತರೊಂದಿಗೆ ವಿಜಯೋತ್ಸವದ ಆಚರಿಸಿ ಮಾತನಾಡಿದ ಹಾಲಿ ಅಧ್ಯಕ್ಷ ಮಹದೇವಯ್ಯ, ಜೆಡಿಎಸ್ ಕಾರ್ಯಕರ್ತರ ಸಮಯೋಚಿತ ನಿರ್ಧಾರ ಹಾಗು ಪರಿಪಕ್ವವಾದ ನಡೆಯಿಂದಾಗಿಈ ಬಾರಿಯೂ ನಮ್ಮ ತಂಡಕ್ಕೆ ವಿರೋಚಿತ ಗೆಲುವು ದೊರಕಿದೆ. ಚುನಾವಣೆ ಪೂರ್ವದಲ್ಲಿ ಕೆಲವೊಂದು ಗೊಂದಲಗಳನ್ನು ವಿರೋಧ ಪಕ್ಷದವರುಹರಿಯ ಬಿಟ್ಟರೂ ಅದ್ಯಾವುದಕ್ಕೂ ಕಿವಿಗೊಡದೇ ಮತದಾರರು ನಮ್ಮಅಭ್ಯರ್ಥಿಗಳ ಜಯಕ್ಕೆ ಕಾರಣಕರ್ತರಾಗಿದ್ದಾರೆ ಎಂದರು.
ತಾಲೂಕು ಉಪ್ಪಾರ ಜನಕಲ್ಯಾಣ ಟ್ರಸ್ಟ್ ಅಧ್ಯಕ್ಷ ರಾಮಶೆಟ್ಟಿ ಮಾತನಾಡಿ, ಗ್ರಾಮದ ಜನರು ಚುನಾಣೆಯಲ್ಲಿ ಜಾತಿ ಬೇಧ ಮಾಡದೇ ನಮ್ಮಗೆಲುವಿಗೆ ಹಗಲು ರಾತ್ರಿ ಶ್ರಮಿಸಿದ್ದಾರೆ ಎಂದು ಅವರು ತಿಳಿಸಿದರು.ಈ ವೇಳೆ ಜೆಡಿಎಸ್ ಹೋಬಳಿ ಅಧ್ಯಕ್ಷ ಎಚ್.ಎನ್. ಧರ್ಮರತ್ನಾಕರ ಕುಮಾರ್, ಸೋಸಲೆ ರಾಜಣ್ಣ, ಪುಟ್ಟಮಲ್ಲಯ್ಯ, ಗ್ರಾಪಂ ಸದಸ್ಯರಾದ ಮುದ್ದುಸ್ವಾಮಿ, ಕುಮಾರಸ್ವಾಮಿ, ಮೋಳೆ ರಮೇಶ್ ಮೊದಲಾದವರು ಇದ್ದರು.