ಸಚಿವರಾದ ಬಿ.ಜೆಡ್ ಜಮೀರ್ ಅಹ್ಮದ್ ಖಾನ್ ಶುಕ್ರವಾರ ವಿಜಯನಗರ ಜಿಲ್ಲೆಯ ಹರಪನಹಳ್ಳಿ, ಕೂಡ್ಲಗಿ, ಕೊಟ್ಟೂರು, ಹೊಸಪೇಟೆ ತಾಲೂಕಿನ ಬರಪೀಡಿತ ಭಾಗಗಳಿಗೆ ಭೇಟಿ ನೀಡಿ ಬೆಳೆ ಹಾನಿ ಮತ್ತು ರೈತರ ಸಮಸ್ಯೆಗಳನ್ನು ಖುದ್ದಾಗಿ ಪರಿಶೀಲನೆ ನಡೆಸಿದರು.
ಹೊಸಪೇಟೆ: ವಿಜಯನಗರ ಜಿಲ್ಲೆಯ ವಿವಿಧ ತಾಲೂಕುಗಳು ಸೇರಿ ಪ್ರಸಕ್ತ ಮುಂಗಾರಿನಲ್ಲಿ ಶೇ. 60ರಷ್ಟು ಮಳೆಯ ಕೊರತೆಯಾಗಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವರಾದ ಬಿ.ಜೆಡ್ ಜಮೀರ್ ಅಹ್ಮದ್ ಖಾನ್ ಶುಕ್ರವಾರ ವಿಜಯನಗರ ಜಿಲ್ಲೆಯ ಹರಪನಹಳ್ಳಿ, ಕೂಡ್ಲಗಿ, ಕೊಟ್ಟೂರು, ಹೊಸಪೇಟೆ ತಾಲೂಕಿನ ಬರಪೀಡಿತ ಭಾಗಗಳಿಗೆ ಭೇಟಿ ನೀಡಿ ಬೆಳೆ ಹಾನಿ ಮತ್ತು ರೈತರ ಸಮಸ್ಯೆಗಳನ್ನು ಖುದ್ದಾಗಿ ಪರಿಶೀಲನೆ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಂದ ಜಂಟಿ ಸಮೀಕ್ಷೆ ನಡೆಸಿ, ಸಂಪೂರ್ಣ ವರದಿಯನ್ನು ಶೀಘ್ರದಲ್ಲೇ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ವಿಮೆ ಮಾಡಿಸಿದ ಮತ್ತು ವಿಮೆ ಮಾಡಿಸದ ರೈತರ ಪಟ್ಟಿಯನ್ನು ಪ್ರತ್ಯೇಕವಾಗಿ ತಯಾರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕಳೆದ ವರ್ಷದ ವಿಮಾ ಪರಿಹಾರವಾಗಿ ₹109.54 ಕೋಟಿ ಪೈಕಿ ಈಗಾಗಲೇ ₹66.397 ಕೋಟಿ ಬಿಡುಗಡೆಯಾಗಿದ್ದು, ಬಾಕಿ ₹42.139 ಕೋಟಿ ಬರಬೇಕಾಗಿದೆ ಎಂದರು.
ಪ್ರಸ್ತುತ ತುಂಗಭದ್ರಾ ಜಲಾಶಯದಲ್ಲಿ 69 ಟಿಎಂಸಿ ನೀರು ಸಂಗ್ರಹವಿದ್ದು, ಕುಡಿಯುವ ನೀರಿಗೆ ಯಾವುದೇ ಅಭಾವ ಎದುರಾಗುವುದಿಲ್ಲ. ಬರ ಪರಿಶೀಲನಾ ವರದಿಯನ್ನು ಶೀಘ್ರವಾಗಿ ಸಲ್ಲಿಸಿ, ಸಂಕಷ್ಟದಲ್ಲಿರುವ ರೈತರಿಗೆ ತಕ್ಷಣವೇ ಸರ್ಕಾರದಿಂದ ಸೂಕ್ತ ನಷ್ಟ ಪರಿಹಾರ ಒದಗಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಈ ಕುರಿತು ಆಗಸ್ಟ್ 15ರ ಒಳಗಾಗಿ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂಬ ಭರವಸೆ ವ್ಯಕ್ತಪಡಿಸಿದರು.
ಮುಂಗಾರು ಹಂಗಾಮಿನಲ್ಲಿ ಜೂನ್‌ದಿಂದ ಇಲ್ಲಿ ವರೆಗೆ 188.7 ಮಿ.ಮೀ. ಮಳೆಯಾಗಬೇಕಿದ್ದು, ಆದರೆ, 76 ಮಿ.ಮೀ ಮಳೆಯಾಗಿ ವಾಡಿಕೆಗಿಂತ ಶೇ. 60ರಷ್ಟು ಕೊರತೆಯಾಗಿದೆ. 1,93,670 ಹೆಕ್ಟೇರ್ ಬಿತ್ತನೆ ಮಾಡಿದ ಪ್ರದೇಶದಲ್ಲಿ ನೀರಾವರಿ 46,958 ಹೆ, 1,46,712 ಹೆ ಖುಷ್ಕಿ ಪ್ರದೇಶ ಸೇರಿ ಶೇ. 65ರಷ್ಟು ಬಿತ್ತನೆ ಮಾಡಲಾಗಿದೆ. ಮಳೆ ಆಧಾರಿತ ಬೆಳೆಗಳಾದ ಮೆಕ್ಕೆಜೋಳ, ಹೈಬ್ರೀಡ್ ಜೋಳ, ಸೂರ್ಯಕಾಂತಿ, ಈರುಳ್ಳಿ, ಸಜ್ಜೆ ಹಾಗೂ ಇನ್ನಿತರೆ ಬೆಳೆಗಳು ಸೇರಿ 1,46,712 ಹೆಕ್ಟೇರ್ ಬೆಳೆಗಳಲ್ಲಿ 1,25,717 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳು ತೇವಾಂಶದ ಕೊರತೆಯಿಂದ ಬಾಡಿ, ಬೆಳೆ ಕುಂಠಿತವಾಗಿದ್ದು ಇಳುವರಿಯ ಮೇಲೆ ಸಂಪೂರ್ಣ ಪರಿಣಾಮ ಬೀರಿದೆ. ಜಿಲ್ಲೆಯಲ್ಲಿ ಹೊಸಪೇಟೆ ತಾಲೂಕಿನಲ್ಲಿ ಶೇ. 77ರಷ್ಟು ಮತ್ತು ಕೊಟ್ಟೂರಿನಲ್ಲಿ ಶೇ 44ರಷ್ಟು ಮಳೆ ಕೊರತೆ ಉಂಟಾಗಿದೆ.
ಜಿಲ್ಲೆಯಲ್ಲಿ ಇಲ್ಲಿ ವರೆಗೆ 1,43,903 ರೈತರು ಬೆಳೆ ವಿಮೆಗೆ ನೋಂದಾಯಿಸದಿರುವವರು, ಬೆಳೆ ವಿಮೆಗೆ ನೋಂದಾಯಿಸಲು ಆಗಸ್ಟ್ 15ರ ವರೆಗೆ ಅವಕಾಶ ಇದ್ದು, ವಿಮೆ ಸೌಲಭ್ಯ ಪಡೆಯಲು ನೊಂದಾಯಿಸಬೇಕು ಎಂದು ರೈತರಿಗೆ ತಿಳಿಸಿದರು.
ವಿಜಯನಗರದಲ್ಲಿ ಭೀಕರ ಬರಹೊಸಪೇಟೆ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ವಿಜಯನಗರ ಜಿಲ್ಲಾದ್ಯಂತ ತೀವ್ರ ಮಳೆ ಕೊರತೆ ಎದುರಾಗಿದ್ದು, ಜಿಲ್ಲೆಯಲ್ಲಿ ಭೀಕರ ಬರ ಪರಿಸ್ಥಿತಿ ಆವರಿಸಿದೆ. ಜೂನ್ 1ರಿಂದ ಆಗಸ್ಟ್ 6ರ ವರೆಗಿನ ಅವಧಿಯಲ್ಲಿ ವಾಡಿಕೆ ಮಳೆಯಾದ 188.7 ಮಿ.ಮೀ.ಗೆ ಪ್ರತಿಯಾಗಿ ಕೇವಲ 76.0 ಮಿ.ಮೀ. ಮಳೆಯಾಗಿದ್ದು, ಶೇಕಡಾ 60ರಷ್ಟು ಅಭಾವ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ರೈತರ ನೆರವಿಗೆ ಧಾವಿಸಲು ಸರ್ಕಾರ ಮುಂದಾಗಿದೆ ಎಂದು ಸಚಿವ ಬಿ.ಝೆಡ್. ಜಮೀರ್ ಅಹ್ಮದ್ ಖಾನ್ ತಿಳಿಸಿದರು.ಜಿಲ್ಲೆಯಲ್ಲಿ ಬರ ಅಧ್ಯಯನದ ನಂತರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.ರೈತರ ಸಾಲಕ್ಕೆ ಬ್ಯಾಂಕ್ ಗಳಿಂದ ನೋಟಿಸ್ ನೀಡಲಾಗುತ್ತಿದೆ ಎಂದು ರೈತರು ತಿಳಿಸಿದ್ದು ಈ ಬಗ್ಗೆ ಮುಖ್ಯಮಂತ್ರಿ ಬಳಿ ಚರ್ಚಿಸಲಾಗುತ್ತದೆ. ಜಿಲ್ಲಾ ಹಂತದಲ್ಲಿ ಬ್ಯಾಂಕರ್ಸ್‌ಗಳ ಸಭೆ ನಡೆಸಿ ನಿರ್ದೇಶನ ನೀಡಲು ಜಿಲ್ಲಾಧಿಕಾರಿಗೆ ತಿಳಿಸಿದರು. ಜಲಾಶಯದಲ್ಲಿ ನೀರು ಲಭ್ಯವಿದ್ದು ಕುಡಿಯುವ ನೀರಿಗೆ ಸಮಸ್ಯೆ ಇಲ್ಲ. ಗ್ರಾಮೀಣ ಭಾಗದಲ್ಲಿ 56 ಖಾಸಗಿ ಬೋರ್‌ವೆಲ್‌ಗಳಿಂದ ನೀರು ಪೂರೈಕೆ ಮಾಡಲಾಗುತ್ತಿದೆ, ಇದನ್ನು ಹೊರತುಪಡಿಸಿ ಬೇರೆ ಸಮಸ್ಯೆ ಇಲ್ಲ. ಮುಂದಿನ ದಿನಗಳಲ್ಲೂ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಬೇಕು ಎಂದರು.
ಬಿತ್ತನೆ ಹಿನ್ನಡೆಒಟ್ಟು 2,97,633 ಹೆಕ್ಟೇರ್ ಬಿತ್ತನೆ ಗುರಿಯಲ್ಲಿ ಕೇವಲ 1,93,670 ಹೆಕ್ಟೇರ್ (ಶೇ. 65.07) ಮಾತ್ರ ಬಿತ್ತನೆಯಾಗಿದೆ. ಮಳೆಯಾಶ್ರಿತ ಪ್ರದೇಶದ 1,43,063 ಹೆಕ್ಟೇರ್ ಪೈಕಿ 1,25,717 ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ (ಶೇ. 87ಕ್ಕೂ ಹೆಚ್ಚು) ಬೆಳೆಗಳು ತೇವಾಂಶ ಕೊರತೆಯಿಂದ ಒಣಗುತ್ತಿವೆ. ಜೋಳ, ಮೆಕ್ಕೆಜೋಳ, ಸೂರ್ಯಕಾಂತಿ ಹಾಗೂ ಸಿರಿಧಾನ್ಯ ಬೆಳೆಗಳು ಶೇ. 40ರಿಂದ ಶೇ. 90ರಷ್ಟು ಒಣಗಿವೆ. ಈರುಳ್ಳಿ, ಟೋಮಾಟೋ ಮತ್ತು ಮೆಣಸಿನಕಾಯಿ ಬೆಳೆಗಳಲ್ಲಿ ಸುಮಾರು 1,289 ಹೆಕ್ಟೇರ್ ಪ್ರದೇಶ ತೀವ್ರ ಹಾನಿಗೊಳಗಾಗಿದೆ ಎಂದರು.
ತುಂಗಭದ್ರಾ ಜಲಾಶಯ ಒಟ್ಟು 105.78 ಟಿಎಂಸಿ ಸಾಮರ್ಥ್ಯದಲ್ಲಿ ಪ್ರಸ್ತುತ 64.81 ಟಿಎಂಸಿ ನೀರು ಲಭ್ಯವಿದೆ. ರಾಷ್ಟ್ರೀಯ ಮತ್ತು ರಾಜ್ಯ ಜಲನೀತಿಯನ್ವಯ ಜಲಾಶಯದಲ್ಲಿರುವ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕೆ ಮಾತ್ರ ಪ್ರಥಮ ಆದ್ಯತೆಯ ಮೇಲೆ ಕಾಯ್ದಿರಿಸಲಾಗಿದೆ. ರೈತರು ಕೃಷಿಗಾಗಿ ಈ ನೀರನ್ನು ನಂಬದೆ ಪರ್ಯಾಯ ಬೆಳೆಗಳನ್ನು ಆಶ್ರಯಿಸಲು ಮನವರಿಕೆ ಮಾಡಲು ತಿಳಿಸಲಾಯಿತು.ಗ್ರಾಮೀಣ ಪ್ರದೇಶಗಳಲ್ಲಿ 32 ಗ್ರಾಮಗಳಿಗೆ 44 ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆದು ನೀರು ಪೂರೈಸಲಾಗುತ್ತಿದೆ. ಜಿಲ್ಲೆಯಲ್ಲಿ ಪ್ರಸ್ತುತ 7,61,571 ಟನ್ ಮೇವು ಲಭ್ಯವಿದ್ದು, ಮುಂದಿನ 50 ವಾರಗಳಿಗೆ ಜಾನುವಾರುಗಳಿಗೆ ಮೇವಿನ ಅಭಾವವಿಲ್ಲ. ಬರ ನಿರ್ವಹಣೆಗಾಗಿ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ಖಾತೆಗಳಲ್ಲಿ ಒಟ್ಟು ₹916.09 ಲಕ್ಷ ಅನುದಾನ ಲಭ್ಯವಿದೆ ಎಂದು ಅವರು ವಿವರಿಸಿದರು.
ಹರಪನಹಳ್ಳಿ ಶಾಸಕರಾದ ಲತಾ ಮಲ್ಲಿಕಾರ್ಜುನ್, ಹಡಗಲಿ ಶಾಸಕರಾದ ಕೃಷ್ಣ ನಾಯ್ಕ್, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿಪಂ ಸಿಇಒ ನೊಂಗ್ಜಾಯ್ ಮಹಮದ್ ಅಲಿ ಅಕ್ರಂ ಷಾ, ಎಸ್.ಪಿ. ಎಸ್. ಜಾಹ್ನವಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.