ಶಿರಸಿ: ಇಲ್ಲಿಯ ಪ್ರತಿಷ್ಠಿತ ಎಂಇಎಸ್ ಶಿಕ್ಷಣ ಸಂಸ್ಥೆಯ ಮೋಟಿನಸರ ಮೆಮೊರಿಯಲ್ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಜೂ. ೯ರಂದು ೬೦ ವರ್ಷ ಹಿಂದೆ ಓದಿದ ಪಿಯು ವಿಜ್ಞಾನ ಹಳೆಯ ವಿದ್ಯಾರ್ಥಿಗಳ ಸ್ನೇಹಕೂಟ ಆಯೋಜಿಸಲಾಗಿದೆ ಎಂದು ಎಂಇಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಿ.ಎಂ. ಹೆಗಡೆ ಮುಳಖಂಡ ತಿಳಿಸಿದರು.
ಶನಿವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ೧೯೬೨ರಲ್ಲಿ ೧೩೫ ವಿದ್ಯಾರ್ಥಿಗಳು ಪಿಯುಸಿ ವಿಜ್ಞಾನ ವಿಭಾಗದ ಓದಿದ್ದರು. ಈ ಬ್ಯಾಚಿನಲ್ಲಿ ಕಲಿತವರಿಗೆಲ್ಲ ಈಗ ೭೭ರಿಂದ ೮೦ ವಯಸ್ಸಾಗಿದೆ. ಅಂದಿನ ಬ್ಯಾಚ್‌ನ ವಿದ್ಯಾರ್ಥಿಗಳಾದ ಡಿ.ಜಿ. ಹೆಗಡೆ ಭೈರಿ, ಆರ್.ಎನ್. ಹೆಗಡೆ ಭಂಡಿಮನೆ, ನಿವೃತ್ತ ಅರಣ್ಯಾಧಿಕಾರಿ ಆರ್.ಎ. ಖಾಜಿ ಸೇರಿದಂತೆ ಕೆಲವರು ಶಿರಸಿಯಲ್ಲಿಯೇ ಇರುವವರು ಇಂತಹ ಯತ್ನ ನಡೆಸಲು ಮುಂದಾಗಿದ್ದಾರೆ. ಕಾಲೇಜಿನ ಪ್ರಾಚಾರ್ಯ ಡಾ. ಟಿ.ಎಸ್. ಹಳೆಮನೆ ಸಹಕಾರ ಪಡೆದು, ೬೦ ವರ್ಷಗಳ ಹಿಂದಿನ ಪ್ರವೇಶ ಪತ್ರಗಳನ್ನು ತೆಗೆಸಿ ವಿಳಾಸ ಹುಡುಕಿದರು. ೧೩೫ ಅಂದಿನ ವಿದ್ಯಾರ್ಥಿಗಳ ಪೈಕಿ ೯೦ ಜನರು ಮಾತ್ರ ಪತ್ತೆಯಾದರು. ಆದರೆ, ಅವರಲ್ಲಿ ೩೨ ಜನ ಈಗಾಗಲೇ ವಿಧಿವಶರಾಗಿದ್ದರು. ತರಗತಿಯಲ್ಲಿ ಕಲಿತ ೨೦ ಮಹಿಳೆಯರಲ್ಲಿ ೬ ಮಹಿಳೆಯರು ಮಾತ್ರ ಸಂಪರ್ಕಕ್ಕೆ ಸಿಕ್ಕಿದ್ದರು. ಅಂತೂ ಇಂತೂ ೫೮ ಜನರ ಮೊಬೈಲ್ ಸಂಖ್ಯೆ ಸಂಗ್ರಹಿಸಿ, ಅವರೊಂದಿಗೆ ಮಾತನಾಡಿ ಸ್ನೇಹಕೂಟಕ್ಕೆ ವೇದಿಕೆ ಸಿದ್ಧಪಡಿಸಿದ್ದಾರೆ. ಅಂದು ಕಾಲೇಜಿನಲ್ಲಿ ಈ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದ ೧೨ ಪ್ರಾಧ್ಯಾಪಕರ ಪೈಕಿ ಪ್ರೊ. ಎನ್.ಎನ್. ಸಭಾಹಿತ ಎಂಬವರು ಮಾತ್ರ ಬದುಕಿದ್ದು, ಅವರನ್ನೂ ಕಾರ್ಯಕ್ರಮಕ್ಕೆ ಆಮಂತ್ರಿಸಿದ್ದಾರೆ ಎಂದರು.ಜೂ. ೯ರಂದು ನಡೆಯಲಿರುವ ಕಾರ್ಯಕ್ರಮವನ್ನು ಎಂ.ಇ.ಎಸ್. ಶಿಕ್ಷಣ ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ಎಸ್.ಪಿ. ಶೆಟ್ಟಿ ಉದ್ಘಾಟಿಸುವರು. ಜಿ.ಎಂ. ಹೆಗಡೆ ಮುಳಖಂಡ ಅಧ್ಯಕ್ಷತೆ ವಹಿಸಲಿದ್ದಾರೆ. ಹಳೆಯ ವಿದ್ಯಾರ್ಥಿ ಸಂಘದ ಪ್ರಮುಖರೊಂದಿಗೆ ಸಾಹಿತಿ ಜಯರಾಮ ಹೆಗಡೆ, ಅಂದಿನ ಪ್ರಾಚಾರ್ಯ ಪ್ರೊ. ಎನ್.ಎನ್. ಸಭಾಹಿತ ಭಾಗವಹಿಸಲಿದ್ದಾರೆ ಎಂದರು.
ಹಳೆಯ ವಿದ್ಯಾರ್ಥಿಗಳಾದ ವಿ.ಜಿ. ಭಟ್ಟ, ವಿ.ಪಿ. ಹೆಗಡೆ ಹನುಮಂತಿ, ಡಾ. ಪಿ.ಎಸ್. ಹೆಗಡೆ, ಆರ್.ಜಿ. ತೇಲಂಗ ಮತ್ತಿತರರು ಇದ್ದರು.