ಅಂಕೋಲಾದಲ್ಲಿ ಗೃಹಜ್ಯೋತಿ ಮರುಪರಿಶೀಲನೆ ಕಾರ್ಯ ಶೇ. 68 ಪೂರ್ಣ

KannadaprabhaNewsNetwork |  
Published : Aug 03, 2026, 02:30 AM IST
ಗೃಹಜ್ಯೋತಿ ದಾಖಲೆ ಪರಿಶೀಲನೆ ಮಾಡಲಾಯಿತು. | Kannada Prabha

ಸಾರಾಂಶ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಜ್ಯೋತಿ ಅಡಿಯಲ್ಲಿ ಉಚಿತ ವಿದ್ಯುತ್ ಪಡೆಯುತ್ತಿರುವ ಫಲಾನುಭವಿಗಳ ಮಾಹಿತಿಯ ಮರು ಪರಿಶೀಲನಾ ಕಾರ್ಯ ಅಂಕೋಲಾ ತಾಲೂಕಿನಲ್ಲಿ ವೇಗದಿಂದ ನಡೆಯುತ್ತಿದೆ.

ರಾಘು ಕಾಕರಮಠ

ಅಂಕೋಲಾ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಜ್ಯೋತಿ ಅಡಿಯಲ್ಲಿ ಉಚಿತ ವಿದ್ಯುತ್ ಪಡೆಯುತ್ತಿರುವ ಫಲಾನುಭವಿಗಳ ಮಾಹಿತಿಯ ಮರು ಪರಿಶೀಲನಾ ಕಾರ್ಯ ತಾಲೂಕಿನಲ್ಲಿ ವೇಗದಿಂದ ನಡೆಯುತ್ತಿದೆ.

ತಾಲೂಕಿನಲ್ಲಿ 31,705 ಗೃಹಜ್ಯೋತಿ ಫಲಾನುಭವಿಗಳಿದ್ದು, ಇದರಲ್ಲಿ 21,559 ಮಂದಿಯ ಪರಿಶೀಲನೆ ಪೂರ್ಣಗೊಳಿಸಲಾಗಿದೆ. ಜು. 31ರ ಅಂತ್ಯಕ್ಕೆ ಶೇ. 68 ಪ್ರಗತಿ ಸಾಧಿಸಲಾಗಿದೆ. ಅಂಕೋಲಾ ಭಾಗದ ಮೀಟರ್ ರೀಡರ್‌ಗಳು ಮನೆ ಮನೆಗೆ ತೆರಳಿ ದಾಖಲೆ ಪರಿಶೀಲಿಸುತ್ತಿದ್ದಾರೆ. ಸಂಗ್ರಹಿಸಿದ ಮಾಹಿತಿಯನ್ನು ಗೃಹಜ್ಯೋತಿ 2.0 ಆ್ಯಪ್‌ನಲ್ಲಿ ದಾಖಲು ಮಾಡುತ್ತಿದ್ದಾರೆ.

ಪರಿಶೀಲನೆ ಪ್ರಕ್ರಿಯೆಯಲ್ಲಿ ಕಂದಾಯ ಶಾಖೆಯ 7 ಸಿಬ್ಬಂದಿ, 24 ಮೀಟರ್ ರೀಡರ್‌ಗಳು, 2 ಲೈನ್‌ಮನ್‌ಗಳು ಒಟ್ಟು 33 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಫಲಾನುಭವಿಗಳಲ್ಲಿ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಹಾಗೂ ಅಮೃತ ಜ್ಯೋತಿ ಯೋಜನೆಗಳ ಅಡಿಯಲ್ಲಿ ಈಗಾಗಲೇ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದ ಫಲಾನುಭವಿಗಳನ್ನು ಸಹ ಗೃಹಜ್ಯೋತಿ ಮರು ಪರಿಶೀಲನೆ ಪ್ರಕ್ರಿಯೆಯಲ್ಲಿ ಒಳಗೂಡಿಸಿ ಮಾಡಿಕೊಳ್ಳಲಾಗುತ್ತಿದೆ. ಕರ್ತವ್ಯದ ನಡುವೆಯೂ: ಲೈನ್‌ಮನ್‌ಗಳು ಪ್ರತಿನಿತ್ಯ ಎದುರಾಗುವ ಲೈನ್ ದುರಸ್ತಿ ಹಾಗೂ ಕಂದಾಯ ಶಾಖೆಯ ಸಿಬ್ಬಂದಿ ತಮ್ಮ ದಿನನಿತ್ಯದ ಕರ್ತವ್ಯ ಮತ್ತು ಮೀಟರ್ ರೀಡರ್‌ಗಳು ಮನೆಯ ಮೀಟರ್ ರೀಡ್‌ ಮಾಡುತ್ತಲೆ ಕರ್ತವ್ಯದ ನಡುವೆಯೂ ಪರಿಶೀಲನೆಯಲ್ಲಿ ತೊಡಗಿಕೊಂಡಿದ್ದಾರೆ.

ಫಲಾನುಭವಿಗಳಲ್ಲಿ ಆತಂಕ: ಮರು ಪರಿಶೀಲನೆ ಆರಂಭವಾದ ಬಳಿಕ ಸಮರ್ಪಕ ಮಾಹಿತಿ ಕೊರತೆಯಿಂದ ಹಲವು ಫಲಾನುಭವಿಗಳಲ್ಲಿ ಆತಂಕ ಮೂಡಿದೆ. ದಾಖಲೆಗಳಲ್ಲಿ ಸಣ್ಣಪಟ್ಟ ವ್ಯತ್ಯಾಸ ಕಂಡುಬಂದರೆ ಗೃಹಜ್ಯೋತಿ ಸೌಲಭ್ಯ ಸ್ಥಗಿತಗೊಳ್ಳಬಹುದೇ ಎಂಬ ಅನುಮಾನಗಳು ಕೆಲವರಲ್ಲಿ ವ್ಯಕ್ತವಾಗಿವೆ. ಆದರೆ ಈ ಪ್ರಕ್ರಿಯೆಯ ಉದ್ದೇಶ ಅರ್ಹ ಫಲಾನುಭವಿಗಳನ್ನು ಯೋಜನೆಯಿಂದ ಹೊರಗಿಡುವುದಲ್ಲ ಫಲಾನುಭವಿಗಳ ಮಾಹಿತಿ ನವೀಕರಿಸಿ, ಯೋಜನೆಯಲ್ಲಿ ಪಾರದರ್ಶಕತೆ ಕಾಪಾಡುವುದು ಮತ್ತು ನಿಜವಾದ ಅರ್ಹರಿಗೆ ಸೌಲಭ್ಯ ತಲುಪಿಸುವುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮರು ಪರಿಶೀಲನೆ ವೇಳೆ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಫೋಟೋ, ಮತದಾರರ ಗುರುತಿನ ಚೀಟಿ, ವಿದ್ಯುತ್ ಬಿಲ್ ಹಾಗೂ ಬಾಡಿಗೆ ಕರಾರು ಪತ್ರದ ಮಾಹಿತಿ ನೀಡಬೇಕಾಗುತ್ತದೆ. ಜಾತಿ, ಉದ್ಯೋಗ ಹಾಗೂ ಪ್ಯಾನ್ ಕಾರ್ಡ್ ವಿವರ ನೀಡುವುದು ಫಲಾನುಭವಿಗಳ ಇಚ್ಛೆಗೆ ಬಿಟ್ಟಿದ್ದು ಇವುಗಳನ್ನು ಐಚ್ಛಿಕ್ಯ ಮಾಹಿತಿಯಾಗಿ ಮಾತ್ರ ದಾಖಲಿಸಲಾಗುತ್ತದೆ.

ಹಲವು ಅಡ್ಡಿ-ಆತಂಕ: ಒಂದೆಡೆ ಮಳೆ, ಇನ್ನೊಂದೆಡೆ ಕೆಲವು ಪ್ರದೇಶಗಳು ದಟ್ಟವಾದ ಗುಡ್ಡಗಾಡು ಪ್ರದೇಶಗಳಿಂದ ಕೂಡಿದ ಗ್ರಾಮಗಳು, ಇನ್ನೊಂದೆಡೆ ಗ್ರಾಮೀಣ ರಸ್ತೆಗಳ ದುಸ್ಥಿತಿ ಹಾಗೂ ಸರ್ವರ್ ಸಮಸ್ಯೆಗಳಿಂದ ಸಿಬ್ಬಂದಿ ಹಲವು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್ ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ಮಾಹಿತಿ ಅಪ್ ಲೋಡ್ ಮಾಡಲು ಸಿಬ್ಬಂದಿ ನೆಟ್‌ವರ್ಕ್‌ ಇರುವ ಸ್ಥಳಗಳಿಗೆ ತೆರಳಬೇಕಾಗಿದೆ. ಸರ್ವರ್ ಪದೇ ಪದೇ ಕೈಕೊಡುತ್ತಿರುವುದರಿಂದ ನಿಗದಿತ ಗುರಿ ತಲುಪಲು ಮೀಟರ್ ರೀಡರ್‌ಗಳು ಪರದಾಡುತ್ತಿದ್ದಾರೆ.

ಬಾಡಿಗೆದಾರರಿಗೆ ಆತಂಕ ಬೇಡ: ಆ. 15ರ ವರೆಗೆ ಮರುಪರಿಶೀಲನೆಗೆ ಸಮಯವಿದ್ದು, ಕೆಲ ಪ್ರದೇಶದಲ್ಲಿ ನೆಟ್‌ವರ್ಕ್‌ ಸಮಸ್ಯೆಯಿಂದ ಕೊಂಚ ಹಿನ್ನಡೆಯಾಗಿದೆ. ಬಾಡಿಗೆದಾರರು ಭಯಪಡುವ ಅಗತ್ಯವಿಲ್ಲ. ಬಾಡಿಗೆ ಕರಾರುಪತ್ರ ಇಲ್ಲವಾದಲ್ಲಿ ಹೆಸ್ಕಾಂನವರು ನೀಡುವ ಅರ್ಜಿ ನಮೂನೆ ಭರ್ತಿ ಮಾಡಬೇಕು. ಅರ್ಜಿಗೆ ಹಣ ಕೊಡುವ ಅವಶ್ಯಕತೆಯಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಎಲ್ಲ ಗೃಹಜ್ಯೋತಿ ಫಲಾನುಭವಿಗಳ ದಾಖಲೆಗಳ ಪರಿಶೀಲನೆ ಕಾರ್ಯ ಭರದಿಂದ ಸಾಗಿದೆ. ಶೇ.68ರಷ್ಟು ಕಾರ್ಯ ಪೂರ್ಣಗೊಂಡಿದೆ. ಕೆಲವು ಕಡೆ ಸರ್ವರ್ ಸಮಸ್ಯೆಯಿಂದ ತೊಂದರೆಯಾಗಿದೆ. ಆದರೂ ಫಲಾನುಭವಿಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗುತ್ತಿದೆ ಎಂದು ಅಂಕೋಲಾ ಹೆಸ್ಕಾಂ ಉಪ ವಿಭಾಗ ಎಇಇ ಪ್ರವೀಣ ನಾಯ್ಕ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಯಂ ಉದ್ಯೋಗಕ್ಕೆ ಆದ್ಯತೆ ನೀಡಿ: ರುದ್ರಪ್ಪ ಲಮಾಣಿ
ಗ್ರಾಪಂ ಡಿ ದರ್ಜೆ ನಿವೃತ್ತರಿಗೆ ಉಪಧನ ಮರೀಚಿಕೆ