ಹಾವೇರಿ: ಆಧುನಿಕ ದಿನಗಳಲ್ಲಿ ಹೆಚ್ಚುತ್ತಿರುವ ಪೈಪೋಟಿ ಹಿನ್ನೆಲೆಯಲ್ಲಿ ಬದುಕು ರೂಪಿಸಿಕೊಳ್ಳಲು ಸ್ವಯಂ ಉದ್ಯೋಗದ ಕಡೆಗೆ ಹೆಚ್ಚು ಒತ್ತು ನೀಡಬೇಕಿದೆ ಎಂದು ವಿಧಾನಸಭೆ ಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ಹೇಳಿದರು.

ಬಸವೇಶ್ವರ ನಗರದ ಸ್ವಾಮಿ ವಿವೇಕಾನಂದ ಸೈನ್ಸ್ ಪಿ.ಯು.ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿನಿಯರು ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದಾರೆ. ಆದರೆ ಸರ್ಕಾರದ ಮಟ್ಟದಲ್ಲಿ ಉದ್ಯೋಗ ಅವಕಾಶಗಳು ಕಡಿಮೆ ಇವೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಡೆಸುವ ಪರೀಕ್ಷೆಗೆ ಈಗಿನಿಂದಲೇ ಸಿದ್ಧರಾಗಿ. ಒಂದು ವೇಳೆ ಸರ್ಕಾರಿ ನೌಕರಿ ಸಿಗದಿದ್ದರೆ ಸ್ವಯಂ ಉದ್ಯೋಗದ ಕಡೆಗೆ ಲಕ್ಷ್ಯ ಕೊಡಿರಿ. ಆಗ ಮಾತ್ರ ಆರ್ಥಿಕ ಸ್ವಾವಲಂಬಿ ಆಗಬಹುದು. ನಿಮಗೆ ಉತ್ತಮ ಭವಿಷ್ಯವಿದೆ ಎಂದರು.

ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್.ಗಾಜಿಗೌಡ್ರ ಮಾತನಾಡಿ, ವಿದ್ಯಾರ್ಥಿಗಳು ಅಧ್ಯಯನದ ಕಡೆಗೆ ಲಕ್ಷ್ಯ ಕೊಡುವ ಮೂಲಕ ಪಾಲಕರಿಗೆ ಮತ್ತು ಶಿಕ್ಷಣ ಸಂಸ್ಥೆಗೆ ಒಳ್ಳೆಯ ಹೆಸರು ತರಬೇಕು ಎಂದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಎಚ್.ಎಸ್. ಚಿನ್ನಿಕಟ್ಟಿ ಮಾತನಾಡಿ, ಇಂದು ದೇಶಾದ್ಯಂತ ವಿಜ್ಞಾನಿಗಳ ಸಂಖ್ಯೆ ಕಡಿಮೆ ಆಗುತ್ತಿದೆ. ತಾಂತ್ರಿಕವಾಗಿ ನಾವಿನ್ನೂ ಮುಂದುವರೆಯಬೇಕಿದೆ. ವಿದ್ಯಾರ್ಥಿಗಳು ಈಗಿನಿಂದಲೇ ನೀಟ್ ಪರೀಕ್ಷೆಗೆ ಸಜ್ಜಾಗಬೇಕು. ಅನವಶ್ಯಕ ಸಂಗತಿಗಳನ್ನು ನಿರ್ಲಕ್ಷಿಸಬೇಕು. ವಿಜ್ಞಾನ ವಿದ್ಯಾರ್ಥಿಗಳಿಗೆ ಅಪೂರ್ವ ಅವಕಾಶಗಳಿವೆ. ಅವುಗಳನ್ನು ಬಳಸಿಕೊಂಡು ಮುನ್ನಡೆಯಬೇಕು ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ. ಮೈದೂರ, ಮುಖಂಡರಾದ ಎನ್.ವಿ. ದೊಡ್ಡಗೌಡ್ರ, ರಾಜೇಂದ್ರ ಹಿರೇಮಠ ಉಪಸ್ಥಿತರಿದ್ದರು. ಪ್ರಾಚಾರ್ಯ ರವಿಕುಮಾರ ಪೂಜಾರ ಅಧ್ಯಕ್ಷತೆ ವಹಿಸಿದ್ದರು.


ಇದೇ ಸಂದರ್ಭದಲ್ಲಿ ಪ್ರಸಕ್ತ ವರ್ಷ ಪಿಯುಸಿಯಲ್ಲಿ ಗರಿಷ್ಠ ಅಂಕ ಗಳಿಸಿದ ಸುವರ್ಣ ಗುಂಡಣ್ಣವರ, ರಾಜು ಅಕ್ಕಿ ಹಾಗೂ ಮಹಾಲಕ್ಷ್ಮಿ ಚೌಟಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಅಶ್ವಿನಿ ಹಿರೇಗೌಡ್ರ ನಿರೂಪಿಸಿದರು. ಕಾವ್ಯ ಹಕ್ಕಿ ಸ್ವಾಗತಿಸಿದರು. ಅರ್ಪಿತಾ ಕುಂದಗೋಳ ವಂದಿಸಿದರು.