ಬಸವರಾಜ ಹಿರೇಮಠ
ಕನ್ನಡಪ್ರಭ ವಾರ್ತೆ ಶಿಗ್ಗಾಂವಿಗ್ರಾಮ ಪಂಚಾಯಿತಿಗಳಲ್ಲಿ ಡಿ- ದರ್ಜೆಯ ನೌಕರರಿಗೆ ನಿವೃತ್ತಿಯ ಹಾಗೂ ಅಕಾಲಿಕ ನಿಧನರಾದ ನಂತರ ಕಡ್ಡಾಯವಾಗಿ ನೀಡಬೇಕಾದ ಉಪಧನ ಸಮರ್ಪಕ ಜಾರಿಯಾಗದೇ ಸೌಲಭ್ಯಗಳು ಮರೀಚಿಕೆಯಾಗಿವೆ.
ನಿವೃತ್ತ ನೌಕರರ ಆರ್ಥಿಕ ಸಂಕಷ್ಟಗಳು ಕುಟುಂಬಗಳನ್ನು ಬೀದಿಗೆ ತಳ್ಳುತ್ತಿವೆ. ಹತ್ತಾರು ಪ್ರಕರಣಗಳು ಗ್ರಾಮ ಪಂಚಾಯಿತಿಯಲ್ಲಿ ಬಾಕಿಯಿದ್ದರೂ ಸಂಬಂಧಿಸಿದವರು ಕ್ರಮ ವಹಿಸುತ್ತಿಲ್ಲ.ಗ್ರಾಮ ಪಂಚಾಯಿತಿಗಳು ತನ್ನ ವ್ಯಾಪ್ತಿಯ ಆಸ್ತಿ ತೆರಿಗೆ, ವಾಣಿಜ್ಯ ತೆರಿಗೆ, ಕರ ವಸೂಲಿ ಸಂಗ್ರಹದಿಂದ ಬಂದ (ಗ್ರಾಮನಿಧಿ ವರ್ಗ-೧) ಆದಾಯವನ್ನು ಗ್ರಾಪಂ ತನ್ನ ಪ್ರಾಧಿಕಾರದ ಡಿ ದರ್ಜೆಯ ನೌಕರರಾದ ಸ್ವಚ್ಛತೆ ನಿರ್ವಹಣೆ, ಡಾಟಾ ಎಂಟ್ರಿ, ನೀರುಗಂಟಿಗಳು, (ವಾಟರ್ ಮೆನ್) ತೆರಿಗೆ ವಸೂಲಿಗಾರರು ಮತ್ತು ಸಿಪಾಯಿಗಳ ವೇತನ ಪಾವತಿಸುತ್ತವೆ.
ವಯೋ ಸಹಜ ಸಾವು ಹಾಗೂ ನಿವೃತ್ತಿಯಾದ ಗ್ರಾಪಂನ ಸಿಬ್ಬಂದಿಗಳನ್ನು ಸೇವೆಯಿಂದ ಕೊನೆಗೊಳಿಸುವಾಗ ಸೇವಾ ಜೇಷ್ಠತೆಯ ಆಧಾರದಂತೆ ಪ್ರತಿವರ್ಷಕ್ಕೆ ೧೫ ಸೇವಾದಿನಗಳ ಪರಿಗಣಿಸಿ ಉಪಧನ ನೀಡಿ ಗೌರವಿಸಿ ಬೀಳ್ಕೊಟ್ಟು ಕಳಿಸಬೇಕಾದ ಸಿಬ್ಬಂದಿಯನ್ನು ಬರಿಗೈಯಿಂದ ಹೊರಹಾಕಿ ಕೈತೊಳೆದುಕೊಳ್ಳುತ್ತಾರೆ ಎಂದು ಆರೋಪಗಳು ತಾಲೂಕಿನಲ್ಲಿ ಕೇಳಿ ಬರುತ್ತಿವೆ.
ತಾಲೂಕಿನ ಒಟ್ಟೂ ೨೮ ವಿವಿಧ ಪಂಚಾಯಿತಿಗಳಲ್ಲಿ ೨೦೨೦ರಿಂದ ನಿವೃತ್ತಿ ಹೊಂದಿದವರು 12ಕ್ಕೂ ಹೆಚ್ಚು ಜನರಿದ್ದು, ಕೆಲಸದಲ್ಲಿದ್ದ ಸುಮಾರು 7ಕ್ಕೂ ಹೆಚ್ಚು ಡಿ-ದರ್ಜೆಯ ನೌಕರರು, ವಿವಿಧ ಹಂತದ ಕೆಲಸ ನಿರ್ವಹಿಸುವ ಸಿಬ್ಬಂದಿಗಳು, ಸಿಪಾಯಿಗಳು ವಯೋಸಹಜ ನಿವೃತ್ತಿ, ಸಾವನ್ನಪ್ಪಿದ್ದಾರೆ. ಆದರೆ ಗ್ರಾಮ ಪಂಚಾಯಿತಿಗಳ ನೇಮಕಾತಿ ಪ್ರಾಧಿಕಾರ ತನ್ನದೇ ಸಿಬ್ಬಂದಿಯ ಕುಟುಂಬದ ಯೋಗಕ್ಷೇಮಕ್ಕೆ ನೀಡಬೇಕಾದ ಹಣಕಾಸು ನೆರವಿನ ಸಹಾಯಕ್ಕೆ ಕತ್ತರಿ ಹಾಕಿದ್ದು, ನಿಯಮಾವಳಿಯಿದ್ದರೂ ಫಲಾನುಭವಿಗಳಿಗೆ ಉಪಧನ ನೀಡುವುದನ್ನೇ ಕಡೆಗಣಿಸಿದೆ.
ಅಲ್ಲದೇ ಸೇವೆಯಲ್ಲಿರುವ ಸಿಬ್ಬಂದಿಗಳು ಸಹ ತೆರಿಗೆ ಸಂಗ್ರಹವಾದ ಆಧಾರದ ಮೇಲೆ ವರ್ಷಕ್ಕೆ ಒಮ್ಮೆ, ಎರಡು ಬಾರಿ ಅನಿಯಮಿತವಾಗಿ ವೇತನ ಪಡೆದ ಉದಾಹರಣೆಯೂ ಇದೆ.ಡಿ. ದರ್ಜೆ ನೌಕರರು ನಿಯಮಿತವಾಗಿ ವೇತನ ಬಾರದೇ ಕುಟುಂಬ ನಿರ್ವಹಣೆಗೆ ಪರದಾಡಬೇಕಾದ ಪ್ರಸಂಗವೂ ಇದೆ. ನಿವೃತ್ತಿಯ ನಂತರವೂ ಹಾಜರಿ ಮೂಲಕ ಸಿಬ್ಬಂದಿಯನ್ನು ವರ್ಷ ಪೂರ್ತಿ ಸೇವೆಗೆ ಬಳಸಿಕೊಂಡು ಕನಿಷ್ಠ ದಿನಗೂಲಿಯನ್ನೂ ನೀಡದೇ ಹೊರ ಹಾಕಿದ ಘಟನೆಗಳೂ ಇವೆ. ಇತ್ತೀಚಿಗೆ ಜಿಲ್ಲಾ ಪಂಚಾಯಿತಿ ಆಡಳಿತ ಉಪ ಕಾರ್ಯದರ್ಶಿಗಳು, ಗ್ರಾಮ ಪಂಚಾಯತಿಗಳಲ್ಲಿ ನಿವೃತ್ತಿ / ಅಕಾಲಿಕ ಮರಣ ಹೊಂದಿದ ಸಿಬ್ಬಂದಿಗಳ ಉಪಧನ ಬಾಕಿ ಪ್ರಕರಣದ ಬಗ್ಗೆ ವಿವರವಾದ ಮಾಹಿತಿ ನೀಡುವಂತೆ ತಾಪಂಗಳಿಗೆ ಪತ್ರ ಬರೆದಿದ್ದು, ಮಾಹಿತಿ ಸಂಗ್ರಹಿಸಲಾಗುತ್ತಿದೆ.ನಿವೃತ್ತಿ ಹೊಂದಿದ ಹಾಗೂ ಅಕಾಲಿಕ ಮರಣ ಹೊಂದಿದ ಕುಟುಂಬ ವರ್ಗ ಉಪಧನ ಸಹಾಯವನ್ನು ಪಡೆಯಲು ಅಲೆದಾಡಿದರೂ ಪ್ರಯೋಜನವಾಗುತ್ತಿಲ್ಲ, ಉಪಧನ ಸಹಾಯದ ಪೂರೈಸುವ ಪ್ರಕರಣಗಳು ದಿನದಿಂದ ದಿನಕ್ಕೆ ವೇಗ ಪಡೆಯುತ್ತಿದೆ. ತಕ್ಷಣ ಇವುಗಳನ್ನು ನೀಡದೆ ಇದ್ದರೆ ಪ್ರತಿಭಟನೆಯ ದಾರಿ ಹಿಡಿಯಬೇಕಾಗುತ್ತದೆ ಎಂದು ರಾಜ್ಯ ಗ್ರಾಪಂ ನೌಕರರ ಶ್ರೇಯೋಭಿವೃದ್ಧಿ ಸಂಘದ ಅಧ್ಯಕ್ಷ ಮಲ್ಲಪ್ಪ ಮಂಚಿನಕೊಪ್ಪ ಹೇಳಿದರು.
ಕಳೆದ ೨೦೨೦ರಿಂದ ಇಂತಹ ಸಿಬ್ಬಂದಿಗಳ ಮಾಹಿತಿ ನೀಡುವಂತೆ ಗ್ರಾಪಂ ಅಧಿಕಾರಿಗಳಿಗೆ ತಿಳಿಸಲಾಗಿದೆ. ವರದಿ ಬಂದ ನಂತರ ಅಂಥವುಗಳಿಗೆ ಉಪಧನ ನೀಡುವ ವ್ಯವಸ್ಥೆಯನ್ನು ಮಾಡಲಾಗುವದು ಎಂದು ಶಿಗ್ಗಾಂವಿ ತಾಪಂ ಮಂಜುನಾಥ ಸಾಳುಂಕೆ ಹೇಳಿದರು.