ಯಲ್ಲಾಪುರ:
ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಆಡಳಿತಾಧಿಕಾರಿಯೂ ಆಗಿರುವ, ತಹಸೀಲ್ದಾರ್ ಎಂ. ಗುರುರಾಜ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.
ಪಟ್ಟಣದ ಎಲ್ಲ ಪ್ರದೇಶಕ್ಕೆ ನೀರು ನೀಡುವ ಉದ್ದೇಶದಿಂದ ನೂತನ ಓವರ್‌ಹೆಡ್ ಟ್ಯಾಂಕ್ ನಿರ್ಮಿಸಲು ಸಭೆ ನಿರ್ಣಯಿಸಿತು. ಸುದೀರ್ಘ ಮತ್ತು ಕೂಲಂಕುಶ ಚರ್ಚೆಯ ನಂತರ ಈ ನಿರ್ಣಯ ಕೈಗೊಂಡ ಸಂದರ್ಭದಲ್ಲಿ ೫ ವರ್ಷಗಳ ಅವಧಿಯ ನಿರ್ವಹಣಾ ವೆಚ್ಚವನ್ನು ಪಪಂ ಭರಿಸಲು ಸಭೆ ನಿರ್ಧರಿಸಿತಲ್ಲದೇ, ಪಾಲನೆ ಮತ್ತು ನಿರ್ವಹಣೆ ಮಾಡಲು ಒಪ್ಪಿಗೆ ನೀಡಿತು.ನಿರ್ಣಯದಂತೆ ಕಾಮಗಾರಿಗೆ ತಗುಲಬಹುದಾದ ಹೆಚ್ಚುವರಿ ವೆಚ್ಚ ಭರಿಸಲು ಒಪ್ಪಬಹುದಾದರೂ, ಭವಿಷ್ಯದಲ್ಲಿ ಕಷ್ಟವೆನಿಸುವ ಸಂದರ್ಭವಿರುವುದರಿಂದ ಯೋಜನೆಯ ಕುರಿತಾಗಿ ಪುನರ್ ಪರಿಶೀಲನೆ ಮಾಡುವ ಅಗತ್ಯವಿದೆ ಎಂದ ಸದಸ್ಯ ರಾಧಾಕೃಷ್ಣ ನಾಯ್ಕ, ಕೋಟ್ಯಂತರ ರುಪಾಯಿ ವೆಚ್ಚದ ಕಾಮಗಾರಿ ಯೋಜನೆಯಿಂದ ಹೆಚ್ಚುವರಿ ಹೊರೆಯಾಗದಂತೆ ನೋಡಿಕೊಳ್ಳಬೇಕಾದುದು ಉತ್ತಮ ಎಂದರು.
೨೦೨೩-೨೪ನೇ ಸಾಲಿನ ಶೇ. ೨೪.೧೦, ಶೇ. ೭.೨೫ ಮತ್ತು ಶೇ. ೫ ಯೋಜನೆಯ ಸೌಲಭ್ಯಕ್ಕಾಗಿ ೧೪ ಫಲಾನುಭವಿಗಳು ನೀಡಿದ ಅರ್ಜಿ ಪರಿಶೀಲಿಸಿ, ಕ್ರಮಕೈಗೊಳ್ಳಲು ಸಭೆ ನಿರ್ಣಯಿಸಿತು. ಸರ್ಕಾರದ ಯೋಜನೆಯಡಿ ದೊರೆತ ಈ ಸೌಲಭ್ಯವನ್ನು ಒಬ್ಬರು ಎರಡು ಬಾರಿ ಪಡೆದಿದ್ದರೆ ಬಡವರಿಗೆ ಯೋಜನೆಯ ಫಲ ಸಿಗದಂತಾಗಿದೆ. ಈ ಕುರಿತು ಕ್ರಮ ಅವಶ್ಯಕ ಎಂದು ಸದಸ್ಯೆ ಪುಷ್ಪಾ ನಾಯ್ಕ ಹೇಳಿದರು.
ಸದಸ್ಯ ಸತೀಶ ನಾಯ್ಕ ಮಾತನಾಡಿ, ಕಳೆದ ಸಾಮಾನ್ಯ ಸಭೆಯಲ್ಲಿ ರೂಪಿಸಲಾಗಿದ್ದ ಅನೇಕ ಕ್ರಿಯಾಯೋಜನೆಗಳ ಸ್ಥಿತಿಗತಿ ಕುರಿತಾದ ಪ್ರಶ್ನೆಗೆ ಸಮರ್ಪಕ ಉತ್ತರವೇ ಬಾರದಂತಾಯಿತು. ಆಸ್ತಿ ತೆರಿಗೆ ವಿನಾಯಿತಿ ಪಡೆದ ಕಟ್ಟಡಗಳಿಗೆ ಸೇವಾಶುಲ್ಕ ವಿಧಿಸುವ ಕುರಿತಾದ ಚರ್ಚೆ ಪೂರ್ಣಗೊಳ್ಳಲಿಲ್ಲ. .