ನಾಲೆಗಳ ಅಭಿವೃದ್ಧಿಗೆ 700 ಕೋಟಿ ರು. ಸರ್ಕಾರಕ್ಕೆ ಪ್ರಸ್ತಾವನೆ:

KannadaprabhaNewsNetwork |  
Published : Feb 22, 2024, 01:47 AM ISTUpdated : Feb 22, 2024, 01:48 AM IST
21ಕೆಎಂಎನ್ ಡಿ20 | Kannada Prabha

ಸಾರಾಂಶ

ತೈಲೂರು ಗ್ರಾಮದ ಕೆರೆ ಕೊಡಿ ಅಭಿವೃದ್ಧಿ ಮತ್ತು ತಡೆಗೋಡೆ ನಿರ್ಮಾಣ ಕಾಮಗಾರಿಗೆ ಚಾಲನೆ

ಕನ್ನಡಪ್ರಭ ವಾರ್ತೆ ಮದ್ದೂರು

ಕ್ಷೇತ್ರ ವ್ಯಾಪ್ತಿಯ ಎಲ್ಲಾ ನಾಲೆಗಳ ಆಧುನೀಕರಣಕ್ಕೆ ಸುಮಾರು 700 ಕೋಟಿ ರು. ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ಬುಧವಾರ ಹೇಳಿದರು. ತಾಲೂಕಿನ ತೈಲೂರು ಗ್ರಾಮದ ಕೆರೆ ಕೊಡಿ ಅಭಿವೃದ್ಧಿ ಮತ್ತು ತಡೆಗೋಡೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಕ್ಷೇತ್ರ ವ್ಯಾಪ್ತಿಯ ಶಿಂಷಾ ಎಡದಂಡೆ ಮತ್ತು ಬಲ ದಂಡೆ ನಾಲೆಗಳ ಕೊನೆಯ ಭಾಗದ ಪ್ರದೇಶಗಳ ಜಮೀನುಗಳಿಗೆ ಸಮರ್ಪಕವಾಗಿ ನೀರು ಹರಿಸಲು ತೊಂದರೆಯಾಗಿತ್ತು. ಈ ಹಿನ್ನೆಲೆಯಲ್ಲಿ ನಾಲೆಗಳ ಆಧುನಿಕರಣಕ್ಕೆ ಸರ್ಕಾರಕ್ಕೆ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿತ್ತು ಎಂದರು. ಸರ್ಕಾರ ಪ್ರಥಮ ಹಂತದಲ್ಲಿ 180 ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ. ಮುಂದಿನ ವರ್ಷದಲ್ಲಿ ಕ್ಷೇತ್ರದ ಎಲ್ಲಾ ನಾಲೆಗಳ ಆಧುನೀಕರಣ ಸಂಬಂಧ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತೈಲೂರು ಕೆರೆ ಕೋಡಿ ಅಭಿವೃದ್ಧಿ ಮತ್ತು ತಡೆಗೋಡೆ ನಿರ್ಮಾಣ ಕಾಮಗಾರಿ ಮುಂದಿನ ಮೂರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಗುತ್ತಿಗೆದಾರರು ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಬೇಕು. ಅಧಿಕಾರಿಗಳು ಈ ಬಗ್ಗೆ ಎಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. ಈ ವೇಳೆ ಕಾವೇರಿ ನೀರಾವರಿ ನಿಗಮದ ಎ ಇಇ ನಾಗರಾಜು, ಜೆಇ ಕಲ್ಪನಾ, ಗುತ್ತಿಗೆದಾರ ವೈದ್ಯನಾಥಪುರ ಗೋವಿಂದು, ತಾಪಂ ಮಾಜಿ ಸದಸ್ಯ ಚೆಲುವರಾಜು, ಸುಮುಖ ಸೇವಾ ಟ್ರಸ್ಟ್ ಅಧ್ಯಕ್ಷ ತೈಲೂರು ರಘು, ಕಾಂಗ್ರೆಸ್ ಮುಖಂಡ ಸ್ವಾಮಿ, ಡೇರಿ ಅಧ್ಯಕ್ಷ ಪ್ರಸನ್ನ. ಭಾಗಿ ಅಧ್ಯಕ್ಷ ರಾಮಲಿಂಗಯ್ಯ, ಗ್ರಾಪಂ ಮಾಜಿ ಸದಸ್ಯರಾದ ನಾಗರಾಜು, ಪುಟ್ಟಪ್ಪ, ರಾಜಣ್ಣ ಹಾಗೂ ಗ್ರಾಮಸ್ಥರಿದ್ದರು.

ಜೆಡಿಎಸ್ ನಲ್ಲೇ ಸಮರ್ಥ ನಾಯಕರಿದ್ದಾರೆ: ಉದಯ್

ಮದ್ದೂರು: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಜಿಲ್ಲೆಯಲ್ಲೇ ಸಮರ್ಥ ನಾಯಕರಿದ್ದರೂ ಹೊರಗಿನವರನ್ನು ಕರೆತಂದು ಕಣಕ್ಕೆ ಇಳಿಸುವ ಮೂಲಕ ಜೆಡಿಎಸ್ ನಾಯಕರು ಕಾರ್ಯಕರ್ತರ ಗೌರವವನ್ನು ಮಣ್ಣು ಪಾಲು ಮಾಡುತ್ತಿದ್ದಾರೆ ಎಂದು ಶಾಸಕ ಕೆ.ಎಂ. ಉದಯ್ ಕಿಡಿಕಾರಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ 3 ರಿಂದ 4 ಬಾರಿ ಸ್ಪರ್ಧೆ ಮಾಡಿ ಗೆಲುವು ಸಾಧಿಸಿರುವ ಮಾಜಿ ಸಚಿವರಾದ ಡಿ.ಸಿ. ತಮ್ಮಣ್ಣ, ಸಿ.ಎಸ್. ಪುಟ್ಟರಾಜು ಹಾಗೂ ಮಾಜಿ ಶಾಸಕ ಸುರೇಶ್ ಗೌಡ ಇದ್ದಾರೆ. ಅಂತವರನ್ನು ಬಿಟ್ಟು ಜೆಡಿಎಸ್ ನಾಯಕರು ಹೊರಗಿನವರನ್ನು ತಂದು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಡ ಹೇರುತ್ತಿರುವುದು ನಾಚಿಕೆಗೇಡು ಎಂದು ಲೇವಡಿ ಮಾಡಿದರು. ಜೆಡಿಎಸ್ ನಾಯಕರು ಸ್ವಾರ್ಥಕೋಸ್ಕರ ರಾಜಕೀಯ ಮಾಡಬಾರದು. ತಮ್ಮ ಪಕ್ಷದ ಕಾರ್ಯಕರ್ತರ ಗೌರವ ಉಳಿಸುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ