ಕುರುಗೋಡು: ಭಗವಂತನಿಗಾಗಿ ಮಿಡಿಯುವ ಹೃದಯಗಳು ಜನರಲ್ಲಿ ಕಾಣಲು ಮಾತ್ರ ಸಾಧ್ಯ ಎಂದು ವಾಮದೇವ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಹೆಂಡತಿ, ಮಕ್ಕಳ ಹೆಸರಿಗೆ ಮಾಡಿಟ್ಟ ಠೇವಣಿ ನಮ್ಮ ಹಿಂದೆ ಬರುವುದಿಲ್ಲ. ಜೀವಿತಾವಧಿಯಲ್ಲಿ ನಾವು ಮಾಡಿದ ದಾನ ಧರ್ಮಗಳೇ ನಮ್ಮ ಹಿಂದೆ ಬರುತ್ತದೆ. ಬಲಗೈಯಿಂದ ಮಾಡಿದ ದಾನ, ಎಡಗೈಗೆ ತಿಳಿಯಬಾರದು ಎನ್ನುವ ತತ್ವ ಜೀವನದಲ್ಲಿ ಅಳವಡಿಸಿಕೊಂಡಿರುವ ಮಾಜಿ ಶಾಸಕ ನಾರಾ ಸೂರ್ಯನಾರಾಯಣ ರೆಡ್ಡಿ ಅವರ ಮಾದರಿಯಲ್ಲಿ ಕೈಲಾದಷ್ಟು ದಾನ ಧರ್ಮದಿಂದ ಜೀವನ ಪಾವನ ಮಾಡಿಕೊಳ್ಳಿ ಎಂದರು.
ಅರಳಿಹಳ್ಳಿ ಗವಿಸಿದ್ದಯ್ಯ ತಾತ ಮಾತನಾಡಿ, ಹಿಂದಿನ ರಾಜ- ಮಹಾರಾಜರು ಕಟ್ಟಿಸಿದ ದೇವಾಲಯಗಳು ಇಂದಿಗೂ ಪೂಜಿಸಲ್ಪಡುತ್ತ ಅವರ ಹೆಸರು ಅಜರಾಮರವಾಗಿರಿಸಿವೆ. ಉಳ್ಳವರು ಬಡವರಿಗೆ ದಾನ ಮಾಡಿ, ಮಠ, ಮಂದಿರಗಳನ್ನು ನಿರ್ಮಿಸಿ ಜನಮಾನಸದಲ್ಲಿ ಶಾಶ್ವತವಾಗಿ ಉಳಿಯಬೇಕು ಎಂದರು.ಕಾರ್ಯಕ್ರಮದ ಅಂಗವಾಗಿ ಎರಡು ದಿನಗಳಿಂದ ದೇವಸ್ಥಾನದಲ್ಲಿ ಹೋಮ, ಹವನ, ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ರಾಜಗೋಪುರ ಉದ್ಘಾಟನೆ ಹಿನ್ನೆಲೆ ಬೆಳಗ್ಗೆ 3 ಗಂಟೆಯಿಂದ ಬಾವಿ ಆಂಜನೇಯ ದೇವಸ್ಥಾನದಿಂದ ಗಂಗೆ ಪೂಜೆ ವಿವಿಧ ಕಲಾ ಪ್ರಕಾರಗಳ ಮೂಲಕ ಸಾಗಿತು. ನಂತರ ಉಡಸಲಮ್ಮದೇವಿಯ ಮಹಾದ್ವಾರ ಗೋಪುರ ಕಳಸಾರೋಹಣ ಮತ್ತುಟಿ ಗರುಡಗಂಭಗಳ ಉದ್ಘಾಟನೆ ಅದ್ಧೂರಿಯಾಗಿ ನಡೆಯಿತು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ವೀರಗಲ್ಲು ಮಹಿಳೆಯರು, ಸುಮಂಗಲಿಯರ ಕಳಸ ಸೇರಿದಂತೆ ಸಾವಿರಾರು ಜನರು ಸೇರಿದ್ದು ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ರೇಣುಕ ಸ್ವಾಮಿ, ಶರಣಬಸವ ಸ್ವಾಮಿ, ಬಸವರಾಜ ಸ್ವಾಮಿ, ಚನ್ನವೀರಯ್ಯ ಸ್ವಾಮಿ ಮತ್ತು ಮಲ್ಲಿಕಾರ್ಜುನ ಸ್ವಾಮಿ ನೇತೃತ್ವದ ತಂಡ ಉದ್ಘಾಟನೆ ಕಾರ್ಯಕ್ರಮದ ಪೌರೋಹಿತ್ಯ ನೆರವೇರಿಸಿದರು.