ಮೂವರು ಸಾಧಕರಿಗೆ ಗೌಡಾ ಪ್ರದಾನ
22,882 ವಿದ್ಯಾರ್ಥಿಗಳಿಗೆ ಸ್ನಾತಕ ಪದವಿ3581 ಸ್ನಾತಕೋತ್ತರ ಪದವಿ ಪ್ರದಾನ
ಕುಲಪತಿ ಪ್ರೊ. ಕೆ.ಬಿ. ಗುಡಸಿ ಮಾಹಿತಿಕನ್ನಡಪ್ರಭ ವಾರ್ತೆ ಧಾರವಾಡ
ಕರ್ನಾಟಕ ವಿಶ್ವವಿದ್ಯಾಲಯದ 73ನೇ ಘಟಿಕೋತ್ಸವ ಅ. 30 ರಂದು ಬೆಳಗ್ಗೆ 10.30ಕ್ಕೆ ಗಾಂಧಿ ಭವನದಲ್ಲಿ ಜರುಗಲಿದ್ದು, ರಾಜ್ಯಪಾಲರು ಹಾಗೂ ವಿವಿ ಕುಲಾಧಿಪತಿಗಳು ಆದ ಥಾವರ್‌ಚಂದ್ ಗೆಹಲೋತ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಕವಿವಿ ಕುಲಪತಿ ಪ್ರೊ. ಕೆ.ಬಿ.ಗುಡಸಿ ಮಾಹಿತಿ ನೀಡಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವದೆಹಲಿಯ ಇಂಡೋ ಫ್ರೆಂಚ್ ಸೆಂಟರ್ ಫಾರ್ ಪ್ರೊಮೋಷನ್ ಆಫ್ ಅಡ್ವಾನ್ಸ್ ರಿಸರ್ಚ ನಿರ್ದೇಶಕ ಪ್ರೊ. ನಿತಿನ ಶೇಠ್ ಘಟಿಕೋತ್ಸವ ಭಾಷಣ ಮಾಡುವರು. ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ ಭಾಗವಹಿಸಲಿದ್ದಾರೆ ಎಂದರು.
ಮೂವರಿಗೆ ಗೌಡಾ:ಬಸವೇಶ್ವರ ತತ್ವಗಳ ಪ್ರಚಾರ, ವಚನ ಸಾಹಿತ್ಯದಲ್ಲಿ ಅನುವಾದ ಸೇರಿದಂತೆ ಶರಣ ತತ್ವ ಪ್ರಚಾರಕ್ಕಾಗಿ ತಮ್ಮದೇ ಆದ ಕೊಡುಗೆ ನೀಡಿದ್ದಕ್ಕಾಗಿ ಬಸವ ಸಮಿತಿಯ ರಾಜ್ಯ ಅಧ್ಯಕ್ಷ ಅರವಿಂದ ಜತ್ತಿ, ವಿದೇಶದಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿ ವಿಶೇಷವಾಗಿ ಆರೋಗ್ಯ ಶಿಕ್ಷಣ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಕ್ಕಾಗಿ, ಧಾರವಾಡ ಮೂಲದ ಅಮೇರಿಕದಲ್ಲಿ ನೆಲಸಿರುವ ಶಿಕ್ಷಣ ಪ್ರೇಮಿ ರವಿಶಂಕರ ಭೂಪಲಾಪೂರ ಮತ್ತು ಸಮಾಜ ಸೇವೆ ಗ್ರಾಮಗಳ ಅಭಿವೃದ್ಧಿಗಾಗಿ ಗ್ರಾಮಗಳ ದತ್ತು ಸ್ವೀಕರಿಸಿದ ಉದ್ಯಮಿ, ಶಿಕ್ಷಣ ಪ್ರೇಮಿ ಅರ್ಚನಾ ಸುರಾಣಾ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯದ 73ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುವದು ಎಂದು ಪ್ರೊ.ಗುಡಸಿ ತಿಳಿಸಿದರು.
ಪದವಿ ಪ್ರದಾನ:ಘಟಿಕೋತ್ಸವ ಸಮಾರಂಭದಲ್ಲಿ 3581 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ, 22,882 ವಿದ್ಯಾರ್ಥಿಗಳು ಸ್ನಾತಕ ಪದವಿ, 18 ಜನ ಕಾನೂನು ಪದವಿ, 127 ವಿದ್ಯಾರ್ಥಿಗಳು ಡಿಪ್ಲೋಮಾ ಪದವಿ, 199 ಸರ್ಟಿಫಿಕೇಟ್ ಕೋರ್ಸ ಪದವಿ ಪಡೆಯಲಿದ್ದಾರೆ. ಹಾಗೆಯೇ 260 ಪಿಎಚ್‌ಡಿ ಪದವಿ ಪ್ರದಾನ ಮಾಡಲಾಗುವುದು. ಇದಲ್ಲದೇ, ಒಟ್ಟು 254 ಬಂಗಾರದ ಪದಕಗಳನ್ನು 109 ಜನ ವಿದ್ಯಾರ್ಥಿಗಳಿಗೆ ಪಡೆಯಲಿದ್ದಾರೆ. 49 ಜನ ವಿದ್ಯಾರ್ಥಿಗಳಿಗೆ ನಗದು ಪಾರಿತೋಷಕ, 62 ಜನ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಪ್ರದಾನ ಮಾಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಕುಲಸಚಿವರಾದ ಡಾ. ಚಂದ್ರಮ್ಮ ಎಂ, ಮೌಲ್ಯಮಾಪನ ಕುಲಸಚಿವ ಡಾ. ಸಿ.ಕೃಷ್ಣಮೂರ್ತಿ ಇದ್ದರು.ಬಾಕ್ಸ್..
ಆರ್ಥಿಕ ಪರಿಸ್ಥಿತಿ ಕುರಿತು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕುಲಪತಿಗಳು ₹60 ಕೋಟಿ ಪಿಂಚಣಿ ಹಣ ಸೇರಿದಂತೆ ಕವಿವಿಗೆ ಸರ್ಕಾರದಿಂದ ₹187 ಕೋಟಿ ಬಾಕಿ ಬರಬೇಕಿದೆ. ಈ ವಿಷಯವಾಗಿ ಹಲವು ಬಾರಿ ಗಮನ ಸೆಳೆದಿರುವ ಹಿನ್ನೆಲೆಯಲ್ಲಿ ಈಚೆಗೆ ಪಿಂಚಣಿ ಹಣ ₹ 60 ಕೋಟಿ ಮಾತ್ರ ಬಿಡುಗಡೆಯಾಗಿದ್ದು, ಉಳಿದ ₹127 ಕೋಟಿ ಬಾಕಿ ಇದ್ದು ಶೀಘ್ರ ಬಿಡುಗಡೆಯಾಗುವ ನಿರೀಕ್ಷೆ ಹೊಂದಿರುವುದಾಗಿ ಹೇಳಿದರು.