ಸರ್ಕಾರಿ ಸೇವೆಗಳು ನಿಮ್ಮನೆ ಬಾಗಿಲಿಗೆ ಶೇ.75 ರಷ್ಟು ಸೇವೆಗಳು ಪೂರ್ಣ

KannadaprabhaNewsNetwork | Published : Jun 27, 2024 1:09 AM

ಸಾರಾಂಶ

ಕೆನ್ನಾಳು ಗ್ರಾಪಂ ವ್ಯಾಪ್ತಿಯಲ್ಲಿ ಪೌತಿ ಖಾತೆಗಾಗಿ 20 ಅರ್ಜಿಗಳು ಸಲ್ಲಿಕೆಯಾಗಿದ್ದವು, ಈ ಪೈಕಿ 8 ಅರ್ಜಿಗಳನ್ನು ಇತ್ಯಾರ್ಥ ಪಡಿಸಲಾಗಿದೆ. ಉಳಿದಂತೆ ಆಧಾರ್ ತಿದ್ದುಪಡಿ ಇನ್ನಿತರ ಸಮಸ್ಯೆಗಳಿಂದ ಅರ್ಜಿಗಳ ವಿಲೇವಾರಿ ತಡವಾಗಿದೆ. ಅದನ್ನು ಕೂಡ ಇನ್ನೂ ಹತ್ತು ದಿನಗಳಲ್ಲಿ ಪೂರ್ಣಗೊಳಿಸಲಾಗುವುದು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಕೆನ್ನಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಳೆದ 15 ದಿನಗಳಿಂದ ನಡೆದ ಸರ್ಕಾರಿ ಸೇವೆಗಳು ನಿಮ್ಮನೆ ಬಾಗಿಲಿಗೆ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳಡಿ ಸಲ್ಲಿಕೆಯಾದ ಅರ್ಜಿಗಳಲ್ಲಿ ಶೇ.75ರಷ್ಟು ಸೇವೆ ಪೂರ್ಣಗೊಳಿಸಲಾಗಿದೆ ಎಂದು ತಾಲೂಕು ಮಟ್ಟದ ಅಧಿಕಾರಿಗಳು ಬುಧವಾರ ಮಾಹಿತಿ ನೀಡಿದರು.

ತಾಲೂಕಿನ ಕೆನ್ನಾಳು ಗ್ರಾಪಂ ಆವರಣದಲ್ಲಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ತಹಸೀಲ್ದಾರ್ ಜಿ.ಎಸ್. ಶ್ರೇಯಸ್ ಮಾತನಾಡಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಕ್ಷೇತ್ರದ ಜನತೆಗೆ ನೀಡಿದ ಮಾತಿನಂತೆ ಸರ್ಕಾರಿ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸಲು ಯಶಸ್ವಿಯಾಗಿದ್ದಾರೆ ಎಂದರು.

ಗ್ರಾಪಂ ವ್ಯಾಪ್ತಿಯಲ್ಲಿ ಪೌತಿ ಖಾತೆಗಾಗಿ 20 ಅರ್ಜಿಗಳು ಸಲ್ಲಿಕೆಯಾಗಿದ್ದವು, ಈ ಪೈಕಿ 8 ಅರ್ಜಿಗಳನ್ನು ಇತ್ಯಾರ್ಥ ಪಡಿಸಲಾಗಿದೆ. ಉಳಿದಂತೆ ಆಧಾರ್ ತಿದ್ದುಪಡಿ ಇನ್ನಿತರ ಸಮಸ್ಯೆಗಳಿಂದ ಅರ್ಜಿಗಳ ವಿಲೇವಾರಿ ತಡವಾಗಿದೆ. ಅದನ್ನು ಕೂಡ ಇನ್ನೂ ಹತ್ತು ದಿನಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದರು.

ಪೌತಿ ಖಾತೆಗಾಗಿ ಕಳೆದ ಆರು ತಿಂಗಳ ಹಿಂದೆ ಸಲ್ಲಿಸಿರುವ ಅರ್ಜಿಗಳು ವಿಲೇವಾರಿ ಆಗಿಲ್ಲ. ಆದರೆ ಈ ಕಾರ್ಯಕ್ರಮದಡಿ ಸಲ್ಲಿಕೆಯಾಗಿರುವ ಅರ್ಜಿಗಳು ಶಾಸಕರ ಒತ್ತಾಸೆಯಿಂದ ಪೂರ್ಣಗೊಂಡಿದೆ ಎಂದರು.

ಜಮೀನು ಖರಾಬು ವಿಚಾರವಾಗಿ ಸಲ್ಲಿಕೆಯಾದ 13 ಅರ್ಜಿಗಳ ಪೈಕಿ 9 ಅರ್ಜಿಗಳು ಇತ್ಯರ್ಥವಾಗಿದೆ. ಸಾಮಾಜಿಕ ಭದ್ರತೆ ಯೋಜನೆಯಡಿಯಲ್ಲಿ 31 ಅರ್ಜಿಗಳ ಪೈಕಿ 28 ಪ್ರಗತಿಯಲ್ಲಿದೆ. ಸರ್ವೇ ಇಲಾಖೆ ಅಧಿಕಾರಿಗಳು 18 ಸರ್ಕಾರಿ ಜಮೀನುಗಳನ್ನು ಗುರುತಿಸಿದ್ದು, ಈ ಜಾಗವನ್ನು ಗುರುತಿಸಿ ಕಂದಕ ನಿರ್ಮಿಸಿ ಅರಣ್ಯ ಅಧಿಕಾರಿಗಳು ಸಸಿ ನೆಡುವ ಕೆಲಸ ಮಾಡಿದ್ದಾರೆ ಎಂದರು.

ಕೆನ್ನಾಳು ಗ್ರಾಪಂ ವ್ಯಾಪ್ತಿಗೆ ಸೇರಿದ ಪ್ರಮುಖ ಕೆಲಸಗಳು ಮುಗಿದಿದ್ದು, ಪಹಣಿಗೆ ಆಧಾರ್ ಲಿಂಕ್ ಮಾಡುವ ಕೆಲಸ ಕೂಡ ಆಗಿದ್ದು, ಇದರಿಂದ ನಕಲಿ ದಾಖಲೆಗಳ ಸೃಷ್ಠಿ ಕಡಿಮೆಯಾಗುತ್ತದೆ. ಜತೆಗೆ ಬ್ಯಾಂಕ್‌ಗಳಲ್ಲಿ ಸುಲಭವಾಗಿ ಸಾಲ ಸೌಲಭ್ಯ ಸಿಗುತ್ತದೆ ಎಂದು ಮಾಹಿತಿ ನೀಡಿದರು.

ತಾಪಂ ಇಒ ಲೋಕೇಶ್‌ಮೂರ್ತಿ ಮಾತನಾಡಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಭಿಲಾಷೆಯಂತೆ ನಡೆದ ಕಾರ್ಯಕ್ರಮದಲ್ಲಿ ನಿವೇಶನ ಕೋರಿ 209 ಅರ್ಜಿಗಳು ಸಲ್ಲಿಕೆಯಾಗಿದೆ. ಮನೆ ನಿರ್ಮಾಣಕ್ಕಾಗಿ 23, ಇ-ಸ್ವತ್ತಿಗಾಗಿ 65 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ 23 ಇ-ಸ್ವತ್ತು ಮಾಡಿಕೊಡಲಾಗಿದೆ ಎಂದರು.

ಚರಂಡಿ ಸ್ವಚ್ಛತೆ, ತೆಂಗಿನ ಮರ ತೆರವುಗೊಳಿಸುವಂತೆ ದೂರುಗಳು ಬಂದಿದೆ. ಕಾರ್ಯಕ್ರಮದಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು 1487 ಮನೆಗಳನ್ನು ಭೇಟಿ ಮಾಡಿ ಜನರು ಎದುರಿಸುತ್ತಿರುವ ಕೊರೆತಗಳನ್ನು ಪಟ್ಟಿ ಮಾಡಿಕೊಂಡು ಬಂದಿದ್ದಾರೆ. ಅದರಂತೆ ತಾಲೂಕು ಮಟ್ಟದ ಅಧಿಕಾರಿಗಳು ಕೆಲಸ ಮಾಡಿದ್ದಾರೆ ಎಂದರು.

ಪಂಚಾಯಿತಿ ವ್ಯಾಪ್ತಿಯಲ್ಲಿ ಕೇವಲ 15 ದಿನಗಳಲ್ಲಿ 35 ಅಂಗವಿಕಲರಿಗೆ ಅಂಗವಿಕಲತೆ ಕಾರ್ಡ್ ನೀಡಲಾಗಿದೆ. ವ್ಹೀಲ್ ಚೇರ್, ವಾಕಿಂಗ್ ಸ್ಟಿಕ್ ವಿತರಿಸಲಾಗಿದೆ. ದೀನ್ ದಯಾಳ್ ಕೌಶಲ್ಯ ಯೋಜನೆ ಒದಗಿಸಲಾಗಿದೆ. ಉದ್ಯೋಗ ಮತ್ತು ತರಭೇತಿಗೆ ಸಂಬಂದಿಸದಂತೆ 67 ಅರ್ಜಿಗಳು ಸಲ್ಲಿಕೆಯಾಗಿದೆ ಎಂದು ವಿವರಿಸಿದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಟಿ.ಎಸ್.ಮಂಜುನಾಥ್ ಮಾತನಾಡಿ, ಗ್ರಾಪಂ ವ್ಯಾಪ್ತಿ ಪ್ರತಿ ಮನೆಗಳಿಗೆ ತೆರಳಿ ರೈತರು ಯಾವ ಬೆಳೆ ಹೆಚ್ಚಿಗೆ ಬೆಳೆಯುತ್ತಿದ್ದಾರೆ ಎಂಬ ಮಾಹಿತಿ ಪಡೆದು ಪರಿಸ್ಥಿತಿಗೆ ಅನುಗುಣವಾಗಿ ಬೆಳೆ ಬೆಳೆಯುವಂತೆ ಅರಿವು ಮೂಡಿಲಾಗಿದೆ. ಈ ಭಾಗದ ಮಣ್ಣು ಸಂಗ್ರಹಿಸಿ ಪರೀಕ್ಷೆಗಾಗಿ ಲ್ಯಾಬ್‌ಗೆ ಕಳುಹಿಸಿದ್ದು ವರದಿ ಬಂದ ಬಳಿಕ ಮಣ್ಣಿನ ಫಲವತ್ತತೆ ಆಧಾರದ ಮೇಲೆ ಯಾವ ಬೆಳೆ ಬೆಳೆದರೆ ಸೂಕ್ತ ಎಂಬುದನ್ನು ರೈತರಿಗೆ ತಿಳಿಸಲಾಗುವುದು ಎಂದರು.

ರೈತರು ಹೆಚ್ಚಾಗಿ ಕಬ್ಬು ಬೆಳೆಯುತ್ತಿದ್ದು, ಇದು ವಾರ್ಷಿಕ ಬೆಳೆಯಾಗಿರುವ ಕಾರಣ ಹೆಚ್ಚು ಆದಾಯ ಸಿಗುತ್ತಿಲ್ಲ. ಬದಲಾಗಿ ವ್ಯವಸಾಯ ಪದ್ಧತಿ ಬದಲಿಸಿಕೊಂಡು ಕಬ್ಬಿನ ಗದ್ದೆಯಲ್ಲಿ ಅಂತರ ಬೆಳೆ ಬೆಳೆಯಬೇಕು. ಅಲಸಂದೆ, ಉದ್ದು, ಬಿನ್ನಿಸ್, ಸೊಪ್ಪನ್ನು ಕಬ್ಬಿನ ಬೆಳೆ ನಡುವೆ ಬೆಳೆಯುವುದ್ದರಿಂದ ರೈತರ ಆದಾಯ ದ್ವಿಗುಣವಾಗುತ್ತದೆ ಎಂದರು.

ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಾಮಾಜಿಕ ಭದ್ರತೆ ಯೋಜನೆಗಳಾದ ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕತೆ ಇತರೆ ಯೋಜನೆಗಳ ಫಲಾನುಭವಿಗಳಿಗೆ ಆರ್ಡರ್ ಪತ್ರ ವಿತರಿಸಲಾಯಿತು.

ಈ ವೇಳೆ ಸೆಸ್ಕ್ ಎಇಇ ವಿ.ಪುಟ್ಟಸ್ವಾಮಿ, ಬಿಇಒ ಬಿ.ಚಂದ್ರಶೇಖರ್, ಉಪ ತಹಸೀಲ್ದಾರ್ ಎಸ್.ಸಂತೋಷ್, ಬಿಇಒ ಬಿ.ಚಂದ್ರಶೇಖರ್, ಗ್ರಾಪಂ ಅಧ್ಯಕ್ಷ ಪ್ರಕಾಶ್, ಉಪಾಧ್ಯಕ್ಷೆ ದೇವಿಕಾ, ರೈತಸಂಘ ಮುಖಂಡರಾದ ರಾಘವೇಂದ್ರ, ಚಿಕ್ಕಾಡೆ ವಿಜಯೇಂದ್ರ, ಕೆನ್ನಾಳು ನಾಗರಾಜು, ವಿಜಯಕುಮಾರ್ ಇತರರು ಇದ್ದರು.

Share this article