ರಾಜ್ಯ ಸರ್ಕಾರದಿಂದ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ

KannadaprabhaNewsNetwork |  
Published : Jul 16, 2024, 12:31 AM ISTUpdated : Jul 16, 2024, 05:26 AM IST
ವಿಧಾನಸೌಧ | Kannada Prabha

ಸಾರಾಂಶ

ರಾಜ್ಯ ಸರ್ಕಾರವು ಕೊನೆಗೂ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದ್ದು, 7ನೇ ರಾಜ್ಯ ವೇತನ ಆಯೋಗದ ಶಿಫಾರಸುಗಳನ್ನು ಆ.1ರಿಂದ ಅನ್ವಯವಾಗುವಂತೆ ಅನುಷ್ಠಾನಗೊಳಿಸಲು ಸೋಮವಾರ ಸಂಜೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

 ಬೆಂಗಳೂರು :  ರಾಜ್ಯ ಸರ್ಕಾರವು ಕೊನೆಗೂ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದ್ದು, 7ನೇ ರಾಜ್ಯ ವೇತನ ಆಯೋಗದ ಶಿಫಾರಸುಗಳನ್ನು ಆ.1ರಿಂದ ಅನ್ವಯವಾಗುವಂತೆ ಅನುಷ್ಠಾನಗೊಳಿಸಲು ಸೋಮವಾರ ಸಂಜೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ತನ್ಮೂಲಕ ಆ.1ರಿಂದ ಅನ್ವಯವಾಗುವಂತೆ ಸರ್ಕಾರಿ ನೌಕರರ ವೇತನ ಶೇ.27.5ರಷ್ಟು ಹೆಚ್ಚಳವಾಗಲಿದೆ. 2023ರ ಮಾರ್ಚ್‌ನಿಂದಲೇ ಅನ್ವಯವಾಗುವಂತೆ ಶೇ.17ರಷ್ಟು ಮಧ್ಯಂತರ ಪರಿಹಾರವನ್ನು ಈಗಾಗಲೇ ಕಲ್ಪಿಸಿದ್ದು, ಉಳಿದಂತೆ ಶೇ.10.5ರಷ್ಟು ಹೆಚ್ಚುವರಿ ವೇತನವನ್ನು ಆ.1ರಿಂದ ಅನ್ವಯವಾಗುವಂತೆ ನೀಡಲು ನಿರ್ಧರಿಸಲಾಗಿದೆ.

ಇದರಿಂದ 12 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಹಾಗೂ ಪಿಂಚಣಿದಾರರಿಗೆ ಅನುಕೂಲವಾಗಲಿದ್ದು, ರಾಜ್ಯ ಸರ್ಕಾರದ ಬೊಕ್ಕಸಕ್ಕೆ 7,500 ಕೋಟಿ ರು. ಹೆಚ್ಚುವರಿ ಬೀಳುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಏಳನೇ ವೇತನ ಆಯೋಗದ ವರದಿ ಜಾರಿ ಮಾಡದಿದ್ದರೆ ಜು.29ರಿಂದ ಕರ್ತವ್ಯ ಬಹಿಷ್ಕರಿಸಿ ಮುಷ್ಕರ ಹೂಡುವುದಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಎಚ್ಚರಿಕೆ ನೀಡಿತ್ತು. ಶುಕ್ರವಾರ ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಪತ್ರವನ್ನೂ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರದ ಮೇಲೆ ತೀವ್ರ ಒತ್ತಡ ಉಂಟಾಗಿತ್ತು.

ಸೋಮವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿದ ಬಳಿಕ ಆ.1ರಿಂದ ಅನ್ವಯವಾಗುವಂತೆ ಜಾರಿ ಮಾಡಲು ನಿರ್ಧರಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಹಿಂದಿನ ಬಿಜೆಪಿ ಸರ್ಕಾರವು 2022ರ ನವೆಂಬರ್ ತಿಂಗಳಲ್ಲಿ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ಸುಧಾಕರರಾವ್‌ ಅಧ್ಯಕ್ಷತೆಯಲ್ಲಿ ವೇತನ ಆಯೋಗ ರಚನೆ ಮಾಡಿ ಆರು ತಿಂಗಳಲ್ಲಿ ವರದಿ ನೀಡುವಂತೆ ಆದೇಶಿಸಿತ್ತು. ಆದರೆ ಅವಧಿ ವಿಸ್ತರಣೆ ಪಡೆದ ಆಯೋಗವು 2023ರ ನವೆಂಬರ್‌ನಲ್ಲಿ ಮಧ್ಯಂತರ ವರದಿ ಸಲ್ಲಿಸಿತ್ತು.

ಈ ವರದಿ ಅನ್ವಯ 2023ರ ಮಾರ್ಚ್‌ ತಿಂಗಳಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಶೇ.17ರಷ್ಟು ಮಧ್ಯಂತರ ಪರಿಹಾರ ನೀಡಲು ಆದೇಶಿಸಲಾಗಿತ್ತು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದ ಬಳಿಕ ಮಾ.16ರಂದು ಅಂತಿಮ ವರದಿ ಸಲ್ಲಿಸಿ, ಶೇ.27.5ರಷ್ಟು ವೇತನ ಪರಿಷ್ಕರಣೆಗೆ ಶಿಫಾರಸು ಮಾಡಿದ್ದು, ಕನಿಷ್ಠ ವೇತನವನ್ನು 17,000 ದಿಂದ 27,000 ರು.ಗಳಿಗೆ ಪರಿಷ್ಕರಣೆ ಮಾಡಲು ಶಿಫಾರಸು ಮಾಡಿತ್ತು.

ಇದರ ಬೆನ್ನಲ್ಲೇ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾಗಿದ್ದರಿಂದ ರಾಜ್ಯ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಲೋಕಸಭೆ ಚುನಾವಣೆ ಬಳಿಕ ಸರ್ಕಾರಿ ನೌಕರರ ಸಂಘವು ಮೂರು ಹಂತದ ಹೋರಾಟದ ಎಚ್ಚರಿಕೆ ನೀಡಿದ್ದವು. ಈ ಹಿನ್ನೆಲೆಯಲ್ಲಿ ಸೋಮವಾರದ ಸಚಿವ ಸಂಪುಟ ಸಭೆಯಲ್ಲಿ 7ನೇ ವೇತನ ಆಯೋಗದ ವರದಿ ಅನುಷ್ಠಾನಕ್ಕೆ ನಿರ್ಧರಿಸಲಾಗಿದೆ.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ