ಟಾಯ್ಸ್ ಪಾರ್ಕ್ ನಿರ್ಮಾಣಕ್ಕೆ 8 ಎಕರೆ ಮೀಸಲು

KannadaprabhaNewsNetwork |  
Published : Jan 28, 2026, 01:15 AM IST
27ಕೆಆರ್ ಎಂಎನ್ 2.ಜೆಪಿಜಿರಾಮನಗರದ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ರಾಮನಗರ ಪ್ರಾದೇಶಿಕ ಅರಣ್ಯ ಉಪ ಸಂರಕ್ಷಣಾ ವಿಭಾಗ ಮತ್ತು ಕೊಳ್ಳೇಗಾಲ ಕಾವೇರಿ ಅರಣ್ಯ ವನ್ಯಜೀವಿ ಉಪ ಸಂರಕ್ಷಣಾ ವಿಭಾಗಕ್ಕೆ ಬೊಲೇರೊ ವಾಹನಗಳನ್ನು ಸಂಸದ ಡಾ.ಸಿ.ಎನ್.ಮಂಜುನಾಥ್ ಹಸ್ತಾಂತರಿಸಿದರು. | Kannada Prabha

ಸಾರಾಂಶ

ರಾಮನಗರ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಕಾರಿಡಾರ್‌ನಲ್ಲಿ ಚನ್ನಪಟ್ಟಣ-ರಾಮನಗರ ನಡುವೆ ಟಾಯ್ಸ್ ಪಾರ್ಕ್ (ಬೊಂಬೆಗಳ ಪಾರ್ಕ್) ನಿರ್ಮಾಣಕ್ಕೆ ಜಿಲ್ಲಾಡಳಿತ 8 ಎಕರೆ ಜಮೀನು ಮೀಸಲಿಟ್ಟಿದೆ. ಆ ಭೂಮಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರವಾದ ಮೇಲೆ ಪಾರ್ಕ್ ನಿರ್ಮಾಣ ಪ್ರಕ್ರಿಯೆ ಆರಂಭವಾಗಲಿದೆ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು

ರಾಮನಗರ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಕಾರಿಡಾರ್‌ನಲ್ಲಿ ಚನ್ನಪಟ್ಟಣ-ರಾಮನಗರ ನಡುವೆ ಟಾಯ್ಸ್ ಪಾರ್ಕ್ (ಬೊಂಬೆಗಳ ಪಾರ್ಕ್) ನಿರ್ಮಾಣಕ್ಕೆ ಜಿಲ್ಲಾಡಳಿತ 8 ಎಕರೆ ಜಮೀನು ಮೀಸಲಿಟ್ಟಿದೆ. ಆ ಭೂಮಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರವಾದ ಮೇಲೆ ಪಾರ್ಕ್ ನಿರ್ಮಾಣ ಪ್ರಕ್ರಿಯೆ ಆರಂಭವಾಗಲಿದೆ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು.

ನಗರದ ಜಿಪಂ ಆವರಣದಲ್ಲಿ ಮೆ.ಡಿಸ್ಕವರಿ ವಿಲೇಜ್ ಸಂಸ್ಥೆ ಸಾಮಾಜಿಕ ಹೊಣೆಗಾರಿಕೆ ಕಾರ್ಯನೀತಿ (ಸಿಎಸ್‌ಆರ್) ಯೋಜನೆಯಡಿ ರಾಮನಗರ ಪ್ರಾದೇಶಿಕ ಅರಣ್ಯ ಉಪ ಸಂರಕ್ಷಣಾ ವಿಭಾಗ ಮತ್ತು ಕೊಳ್ಳೇಗಾಲ ಕಾವೇರಿ ಅರಣ್ಯ ವನ್ಯಜೀವಿ ಉಪ ಸಂರಕ್ಷಣಾ ವಿಭಾಗಕ್ಕೆ ಬೊಲೇರೊ ವಾಹನಗಳನ್ನು ಹಸ್ತಾಂತರಿಸಿದ ಬಳಿಕ ಸಂಸದರು ಸುದ್ದಿಗಾರರೊಂದಿಗೆ ಮಾತನಾಡಿದರು.

ಚನ್ನಪಟ್ಟಣ ಅಂದರೆ ಬೊಂಬೆನಾಡೆಂಬ ಪ್ರಖ್ಯಾತಿ ಪಡೆದಿದೆ. ಆದರೆ, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ನಿರ್ಮಾಣದ ಬಳಿಕ ಚನ್ನಪಟ್ಟಣಕ್ಕೆ ತೆರಳುವ ಪ್ರವಾಸಿಗರ ಸಂಖ್ಯೆ ಕ್ಷೀಣಿಸಿದೆ. ಇದರಿಂದ ಬೊಂಬೆಗಳ ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಚನ್ನಪಟ್ಟಣ ಬೊಂಬೆಗಳನ್ನು ಉತ್ತೇಜಿಸಲು, ಸ್ಥಳೀಯವಾಗಿ ಬೊಂಬೆ ತಯಾರಕರಿಗೆ ಮತ್ತು ಪ್ರವಾಸಿಗರಿಗೆ ಅನುವು ಮಾಡಿಕೊಡುವುದು ಟಾಯ್ಸ್ ಪಾರ್ಕ್ ನಿರ್ಮಾಣದ ಉದ್ದೇಶ ಎಂದರು.

ಟಾಯ್ಸ್ ಪಾರ್ಕಿನಲ್ಲಿ ಬೊಂಬೆಗಳು ಮಾತ್ರವಲ್ಲದೆ ಸಿಲ್ಕ್ ಮ್ಯೂಸಿಯಂ, ರೆಸ್ಟೋರೆಂಟ್ ನಿರ್ಮಾಣವೂ ಆಗಲಿದೆ. ಈಗಾಗಲೇ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಚರ್ಚಿಸಿದ್ದು, ಸಮ್ಮತಿಯನ್ನೂ ಸೂಚಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಭೂಮಿ ಹಸ್ತಾಂತರವಾದ ಮೇಲೆ ಪ್ರಕ್ರಿಯೆ ಶುರುವಾಗಲಿವೆ ಎಂದರು.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಪಾದಚಾರಿಗಳ ಅನುಕೂಲಕ್ಕಾಗಿ ಅಗತ್ಯ ಇರುವ ಕಡೆಗಳಲ್ಲಿ ಸ್ಕೈ ವಾಕ್ ಗಳ ನಿರ್ಮಾಣ ಕಾರ್ಯ ಶುರುವಾಗಿದೆ. ಎಂಟ್ರಿ ಎಕ್ಸಿಟ್ ಕಾಮಗಾರಿಗಳು ಮುಂದಿನ 15 ದಿನದೊಳಗೆ ಆರಂಭವಾಗಲಿದ್ದು, ಇದಕ್ಕಾಗಿ 730 ಕೋಟಿ ರುಪಾಯಿ ಅನುದಾನವೂ ಬಿಡುಗಡೆಯಗಿದೆ ಎಂದು ಮಂಜುನಾಥ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮೆಡಿಕಲ್ ಕಾಲೇಜಲ್ಲಿ ಆಸ್ಪತ್ರೆ ಇರಬೇಕು:

ಸಾಮಾನ್ಯವಾಗಿ ಮೆಡಿಕಲ್ ಕಾಲೇಜು ಆವರಣದೊಳಗೇ 450ರಿಂದ 600 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆ ಇರಬೇಕೆಂಬುದು ಸಾಮಾನ್ಯ ಜ್ಞಾನ. ಆದರೆ, ರಾಮನಗರದ ಅರ್ಚಕರಹಳ್ಳಿ ಬಳಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಆಡಳಿತ ಭವನ ಮತ್ತು ವೈದ್ಯಕೀಯ ಕಾಲೇಜು ಕಟ್ಟಡ ಮಾತ್ರ ನಿರ್ಮಾಣವಾಗುತ್ತಿದ್ದು, ಅಲ್ಲಿ ಆಸ್ಪತ್ರೆನಿರ್ಮಿಸುತ್ತಿಲ್ಲ. ಮೆಡಿಕಲ್ ಕಾಲೇಜಿಗೆ ರಾಮನಗರದ ಜಿಲ್ಲಾಸ್ಪತ್ರೆಯನ್ನು ಹೊಂದಿಸಿಕೊಂಡು ಕಾರ್ಯನಿರ್ವಹಿಸಲು ಉದ್ದೇಶಿಸಿದೆ. ಇದರಿಂದ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ಹಾಗೂ ರೋಗಿಗಳಿಗೆ ಅನನುಕೂಲವಾಗುತ್ತದೆ. ಅಲ್ಲದೆ, ಇಲ್ಲಿನ ಜಿಲ್ಲಾಸ್ಪತ್ರೆ 200ರಿಂದ 250 ಹಾಸಿಗೆ ಸಾಮರ್ಥ್ಯ ಹೊಂದಿದ್ದು, ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ ಎಂಎಸ್)ದ ಒಪ್ಪಿಗೆಯೂ ಸಿಗುವುದಿಲ್ಲ ಎಂದು ಹೇಳಿದರು.

ಮೆಡಿಕಲ್ ಕಾಲೇಜು ನಿರ್ಮಾಣವಾಗುತ್ತಿರುವ ಅರ್ಚಕರಹಳ್ಳಿಯಿಂದ ರಾಮನಗರ ಜಿಲ್ಲಾಸ್ಪತ್ರೆಗೆ 3 ಕಿಲೋ ಮೀಟರ್ ಅಂತರ ಇದೆ. ಇದರಿಂದ ಶೈಕ್ಷಣಿಕ ಸಮನ್ವಯ, ರೋಗಿಗಳ ಆರೈಕೆ, ತುರ್ತು ಸೇವೆ ಹಾಗೂ ಮೂಲಸೌಕರ್ಯ, ಮಾನವ ಸಂಪನ್ಮೂಲಗಳ ಸಮರ್ಪಕ ಬಳಕೆಗೆ ಅಡಚಣೆ ಉಂಟಾಗುತ್ತದೆ. 2008ರ ಪ್ರಸ್ತಾವನೆಯಲ್ಲಿ ಮೆಡಿಕಲ್ ಕಾಲೇಜು, ವಿವಿ ಮಾತ್ರವಲ್ಲದೆ 1 ಸಾವಿರ ಹಾಸಿಗೆಗೆ ಮೇಲ್ದರ್ಜೆಗೇರಿಸುವಷ್ಟು ಸಾಮರ್ಥ್ಯದ ಆಸ್ಪತ್ರೆಯೂ ಸೇರಿದೆ. ನರ್ಸಿಂಗ್ ಕಾಲೇಜು, ಫಿಜಿಯೋಥೆರಪಿ ಕಾಲೇಜು ಕಟ್ಟಡಗಳ ನಿರ್ಮಾಣವೂ ಆಗಬೇಕಿದೆ. ಇದರ ಸಂಪೂರ್ಣ ವೆಚ್ಚವನ್ನು ರಾಜೀವ್ ಗಾಂಧಿ ಆರೋಗ್ಯ ವಿವಿಯೇ ಭರಿಸುತ್ತಿದೆ ಎಂದರು.

ವಿವಿಗೆ ಉದ್ದೇಶಿಸಿರುವ ಸ್ಥಳದಲ್ಲಿ ಜಮೀನಿಗೆ ಕೊರತೆ ಇಲ್ಲ. ಬೇಕಾದಷ್ಟು ಜಮೀನು ಲಭ್ಯವಿದೆ. ಯಾವ ಉದ್ದೇಶದಿಂದ ಆಸ್ಪತ್ರೆ ನಿರ್ಮಾಣಕ್ಕೆ ಹಿಂದೇಟು ಹಾಕುತ್ತಿದ್ದಾರೊ ಗೊತ್ತಿಲ್ಲ. ಈ ವಿಚಾರವಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಹಾಗೂ ವಿವಿಯ ಕುಲಪತಿ ಡಾ.ಬಿ.ಸಿ.ಭಗವಾನ್ ಅವರಿಗೆ ಪತ್ರ ಬರೆದಿದ್ದೇನೆ. ಸಿಂಡಿಕೇಟ್‌ನಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ತಡೆಗೋಡೆ ನಿರ್ಮಾಣ ಟೆಂಡರ್ ಅಂತಿಮ ಹಂತ:

ಅರಣ್ಯದೊಳಗೆ ಸಂಚರಿಸಲು ಜೀಪ್‌ ಗಳ ಅವಶ್ಯಕತೆ ಇದೆಯೆಂದು ಇಲಾಖೆ ಅಧಿಕಾರಿಗಳು ಗಮನಕ್ಕೆ ತಂದಿದ್ದರು. ಹೀಗಾಗಿ ಡಿಸ್ಕವರಿ ವಿಲೇಜ್ ಸಂಸ್ಥೆ ಸಿಎಸ್‌ಆರ್ ಅಡಿಯಲ್ಲಿ ಜೀಪ್‌ಗಳನ್ನು ಕೊಡಲಾಗುತ್ತಿದೆ. ಕಾಡಾನೆಗಳ ಹಾವಳಿಯಿಂದ ಬೆಳೆ ಮಾತ್ರವಲ್ಲದೆ ಪ್ರಾಣ ಹಾನಿಯೂ ಹೆಚ್ಚಾಗುತ್ತಿದೆ. ಇದರ ಬಗ್ಗೆಯೂ ಅರಣ್ಯ ಇಲಾಖೆ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ ಕಾಡಂಚಿನಲ್ಲಿ ತಡೆಗೋಡೆ ನಿರ್ಮಿಸಲಾಗುತ್ತಿದೆ. ಟೆಂಡರ್ ಕರೆದಿದ್ದು, ಅದು ಅಂತಿಮ ಹಂತದಲ್ಲಿದೆ ಎಂದು ಮಂಜುನಾಥ್ ತಿಳಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಮುಖಂಡರಾದ ಗೌತಮ್ ಗೌಡ, ಪ್ರಸಾದ್ ಗೌಡ, ಪಿಚ್ಚನಗೆರೆ ಜಗದೀಶ್ , ಜೆಡಿಎಸ್ ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ, ಹೋಟೆಲ್ ಉಮೇಶ್, ಸುಗ್ಗನಹಳ್ಳಿ ರಾಮಕೃಷ್ಣಯ್ಯ ಇತರರು ಹಾಜರಿದ್ದರು.

ಕೋಟ್ .............

1960ರಿಂದಲೂ ಯೋಜನೆ ಹೆಸರು ಉದ್ಯೋಗ ಭರವಸೆ, ರೋಜ್ಗಾರ್ ಹೀಗೆ ಆಯಾಯ ಕಾಲಘಟ್ಟದಲ್ಲಿ ಮನರೇಗಾ ಹೆಸರು ಬದಲಾವಣೆಯಾಗುತ್ತಾ ಬಂದಿದೆ. ಮೊದಲು ಯೋಜನೆಗೆ ಕೇಂದ್ರ ಸರ್ಕಾರ ಶೇ.90 ಮತ್ತು ರಾಜ್ಯ ಸರ್ಕಾರ ಶೇ.10ರಷ್ಟು ಅನುಪಾತ ಇತ್ತು. ಈಗ ಅದು ಶೇ. 60-40ರಷ್ಟು ಮಾಡಲಾಗಿದೆ. ರಾಜ್ಯ ಸರ್ಕಾರದ ಜವಾಬ್ದಾರಿಯೂ ಇರಬೇಕೆಂಬುದು ಇದರ ಉದ್ದೇಶ. ಮಾನವ ದಿನಗಳನ್ನು 100ರಿಂದ 125ಕ್ಕೆ ಹೆಚ್ಚಿಸಲಾಗಿದೆ. ಕೇಂದ್ರದೊಂದಿಗೆ ರಾಜ್ಯ ಸರ್ಕಾರ ಚರ್ಚಿಸಿದರೆ ಪರಿಹಾರ ಸಿಗುತ್ತದೆ.

- ಡಾ.ಸಿ.ಎನ್.ಮಂಜುನಾಥ್, ಸಂಸದರು

27ಕೆಆರ್ ಎಂಎನ್ 2.ಜೆಪಿಜಿ

ರಾಮನಗರದ ಜಿಪಂ ಆವರಣದಲ್ಲಿ ಪ್ರಾದೇಶಿಕ ಅರಣ್ಯ ಉಪ ಸಂರಕ್ಷಣಾ ವಿಭಾಗ ಮತ್ತು ಕೊಳ್ಳೇಗಾಲ ಕಾವೇರಿ ಅರಣ್ಯ ವನ್ಯಜೀವಿ ಉಪ ಸಂರಕ್ಷಣಾ ವಿಭಾಗಕ್ಕೆ ಬೊಲೇರೊ ವಾಹನಗಳನ್ನು ಸಂಸದ ಡಾ.ಸಿ.ಎನ್.ಮಂಜುನಾಥ್ ಹಸ್ತಾಂತರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

400 ಕೋಟಿ ರು. ದರೋಡೆ ಪ್ರಮುಖ ಆರೋಪಿ ಬಂಧನ
ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ