ಕನ್ನಡಪ್ರಭ ವಾರ್ತೆ ಮಂಡ್ಯ
ನಿವೇಶನವಿಲ್ಲದೆ ಕಳೆದ ೨೪ ವರ್ಷಗಳಿಂದ ತಂಗಳಗೆರೆ ಗ್ರಾಮದ ೧೨೦ ಮಂದಿ ಬಡವರು ಅರ್ಜಿ ಸಲ್ಲಿಸುತ್ತಲೇ ಇದ್ದರು. ಆದರೆ, ಕೆಲ ತಾಂತ್ರಿಕ ಕಾರಣಗಳಿಂದಾಗಿ ನಿವೇಶನ ನೀಡಲು ಸಾಧ್ಯವಾಗಿರಲಿಲ್ಲ. ಬಡವರಿಗೆ ನಿವೇಶನ ಕೊಡಲೇಬೇಕೆಂದು ಹಠಕ್ಕೆ ಬಿದ್ದ ಶಾಸಕ ಪಿ.ರವಿಕುಮಾರ್ ಅವರು ಗ್ರಾಮದಲ್ಲೇ ೪.೩೫ ಎಕರೆ ಸರ್ಕಾರಿ ಜಾಗವನ್ನು ಅಧಿಕಾರಿಗಳಿಂದಲೇ ಗುರುತಿಸಿ ೧೨೦ ನಿವೇಶನಗಳನ್ನು ಸಿದ್ಧಪಡಿಸಿದ್ದಾರೆ.
ಮೊದಲಿಗೆ ೮೦ ಮಂದಿಗೆ ನಿವೇಶನ ಹಂಚಲು ಎಲ್ಲ ಸಿದ್ಧತೆ ಮಾಡಿಕೊಂಡು, ಅದರಂತೆ ‘ರವಿಗೂಡು’ ಎಂಬ ಹೆಸರಿನಲ್ಲಿ ಆಶ್ರಯ ಮನೆ ಯೋಜನೆಯಡಿ ಹಂಚಿಕೆ ಮಾಡಲಾಗಿದೆ. ಇನ್ನುಳಿದ ೪೦ ಮಂದಿ ಸರಿಯಾಗಿ ದಾಖಲೆಗಳನ್ನು ಸಲ್ಲಿಸದ ಕಾರಣ ನಿವೇಶನ ಹಂಚಿಕೆಯಲ್ಲಿ ವಿಳಂಬವಾಗಿದೆ.ನಿವೇಶನ ರಹಿತರಿಗೆ ನಿವೇಶನ ಕೊಡಿಸುವುದು ಆದ್ಯ ಕರ್ತವ್ಯ:
‘ರವಿಗೂಡು’ ನಿವೇಶನ ಹಂಚಿಕೆ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಹಲ್ಲೇಗೆರೆ ಗ್ರಾಮ ಪಂಚಾಯ್ತಿ ವತಿಯಿಂದ ಏರ್ಪಡಿಸಿದ್ದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ರವಿಕುಮಾರ್, ದೇಶದ ಜನರು ನಿವೇಶನ ಇಲ್ಲದೆ ಇರಬಾರದು. ಎಲ್ಲರೂ ನಿವೇಶನ ಹೊಂದಿರಬೇಕು ಎನ್ನುವುದು ಈ ದೇಶದ ಕಾನೂನು. ನಿವೇಶನ ರಹಿತರಿಗೆ ನಿವೇಶನ ಕೊಡಿಸುವುದು ಸರ್ಕಾರ, ಸ್ಥಳೀಯ ಗ್ರಾಮ ಪಂಚಾಯ್ತಿ ಮತ್ತು ಶಾಸಕನ ಕರ್ತವ್ಯವಾಗಿದೆ ಎಂದರು.ನಿವೇಶನ ರೈತರಿಗೆ ನಿವೇಶನ ನೀಡುವುದು ನಮ್ಮ ಸರ್ಕಾರದ ಧ್ಯೇಯವಾಗಿದೆ, ಅದರ ಅಂಗವಾಗಿ ಅರ್ಹರಿಗೆ ನಿವೇಶನ ನೀಡಲು ಇಂದು ಶಿಲಾನ್ಯಾಸ ಮಾಡಲಾಗಿದೆ. ೧೨೦ ನಿವೇಶನಗಳನ್ನು ಜಾಗದಲ್ಲಿ ನೀಡಲಾಗುವುದು, ಈಗಾಗಲೇ ೮೦ ಹಕ್ಕುಪತ್ರಗಳು ಸಿದ್ಧವಿದೆ. ಬಾಕಿ ಇರುವ ನಿವೇಶನಗಳಿಗೆ ಅಗತ್ಯ ದಾಖಲೆ ನೀಡಿ ನಂತರ ನಾನೇ ನಿಮ್ಮ ಮನೆ ಬಾಗಿಲಿಗೆ ಬಂದು ಹಕ್ಕುಪತ್ರಗಳನ್ನು ವಿತರಿಸುತ್ತೇನೆ ಎಂದರು.
ಜಾಗ ಕೊಟ್ಟರೆ ಉತ್ತಮ ರಸ್ತೆ:ಸರ್ಕಾರಿ ಜಾಗ ಕೇವಲ ಒಬ್ಬರದಲ್ಲ, ಅದು ಎಲ್ಲರ ಜಾಗ, ರೈತರು ತಮ್ಮ ಗದ್ದೆಗಳಲ್ಲಿ ರಸ್ತೆಗೆ ೫ ರಿಂದ ೧೦ ಅಡಿ ಜಾಗ ಬಿಟ್ಟರೆ ಉತ್ತಮ ರಸ್ತೆ ಕಲ್ಪಿಸಬಹುದು. ರೈತರ ಉತ್ಪನ್ನಗಳನ್ನು ಮಾರುಕಟ್ಟೆಗೆ ಸರಾಗವಾಗಿ ಸಾಗಣೆ ಮಾಡಬಹುದು ಎಂದು ತಿಳಿ ಹೇಳಿದರು.
ಕಳೆದ ಬಾರಿಯ ಬೂದನೂರು ಉತ್ಸವದಲ್ಲಿ ಅನೇಕರು ಹೋರಾಟ ಮಾಡಿ ನಿವೇಶನ ರಹಿತರಿಗೆ ಹಳೇಬೂದನೂರಿನಲ್ಲಿ ನಿವೇಶನ ಕಲ್ಪಿಸಿ ೧೨೦ ಮಂದಿಗೆ ಹಕ್ಕು ಪತ್ರಗಳನ್ನು ವಿತರಿಸಲಾಗಿದೆ. ಈ ಬಾರಿ ಬೂದನೂರು ಉತ್ಸವದಲ್ಲೂ ಇನ್ನೂ ೫೦ ಮಂದಿಗೆ ಹಕ್ಕು ಪತ್ರಗಳನ್ನು ನೀಡಲು ಸಿದ್ಧತೆ ಮಾಡಲಾಗಿದೆ. ಮಂಡ್ಯ ತಾಲೂಕಿನ ಅರ್ಹ ನಿವೇಶನ ರಹಿತರಿಗೆ ನಿವೇಶನ ನೀಡಲು ಕಳೆದ ಎರಡೂವರೆ ವರ್ಷದಲ್ಲಿ ಜಿಲ್ಲಾಧಿಕಾರಿ, ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ೧೦ಕ್ಕೂ ಹೆಚ್ಚು ಸಭೆಗಳನ್ನು ನಡೆಸಲಾಗಿದೆ ಎಂದರು.ಮುಂದಿನ ವಾರದಲ್ಲಿ ಹಕ್ಕುಪತ್ರ:
ಚಂದಗಾಲು ಗ್ರಾಮದಲ್ಲೂ ಏಳು ಎಕರೆ ಜಾಗ ಮತ್ತು ಗಣಿಗದಲ್ಲೂ ನಾಲ್ಕು ಎಕರೆ ಜಾಗವನ್ನು ಗುರುತಿಸಲಾಗಿದ್ದು, ನಿವೇಶನ ಹಂಚಿಕೆ ಮಾಡಲಾಗುವುದು. ಕೆರಗೋಡಿನಲ್ಲಿ ೩೦ ನಿವೇಶನ ಸಿದ್ಧವಾಗಿದ್ದು, ಮುಂದಿನ ವಾರದೊಳಗೆ ಹಕ್ಕು ಪತ್ರ ನೀಡಲಾಗುವುದು. ಮುದ್ದನಘಟ್ಟದಲ್ಲಿ ೮೦ ಎಕರೆ ಸರ್ಕಾರಿ ಪ್ರದೇಶವನ್ನು ಗುರುತಿಸಲಾಗಿದ್ದು, ಈ ಜಾಗವನ್ನು ಕೈಗಾರಿಕೆಗೆ ಮೀಸಲಿಡಲಾಗುವುದು. ಮಹಿಳೆಯರು, ಯುವಕರು, ಬಡವರಿಗೆ ಅನುಕೂಲವಾಗುವ ಕಾರ್ಖಾನೆಯನ್ನು ರಾಜ್ಯ ಸರ್ಕಾರದಿಂದಲೇ ತರಲಾಗುವುದು ಎಂದು ಭರವಸೆ ನೀಡಿದರು.ಫಲಾನುಭವಿಗಳ ಆಯ್ಕೆಯಲ್ಲಿ ಪಾರದರ್ಶಕತೆ:
ತಾಪಂ ಮಾಜಿ ಅಧ್ಯಕ್ಷ ಸಿ. ತ್ಯಾಗರಾಜು ಮಾತನಾಡಿ, ಹಲ್ಲೇಗೆರೆ ಗ್ರಾಪಂ ವ್ಯಾಪ್ತಿಯ ಫಲಾನುಭವಿಗಳಿಗೆ ನಿವೇಶನ ಕೊಡಿಸಲು ಶಾಸಕ ರವಿಕುಮಾರ್ ಅವರು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರೊಂದಿಗೆ ಹಲವು ಬಾರಿ ಸಭೆ ಮಾಡಿದ್ದಾರೆ. ಇಲ್ಲಿ ಫಲಾನುಭವಿ ಆಯ್ಕೆ ವಿಚಾರದಲ್ಲೂ ಪಾರದರ್ಶಕತೆ ಕಾಪಾಡಿಕೊಳ್ಳಲಾಗಿದೆ. ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯದಿರುವ ಗ್ರಾಮವಿಲ್ಲ. ಅಷ್ಟರಮಟ್ಟಿಗೆ ಶಾಸಕರು ಕೆಲಸ ಮಾಡುತ್ತಿದ್ದಾರೆ. ಹಿಂದೆ ಇಂದಿರಾಗಾಂಧಿ ಹೆಸರಲ್ಲಿ ಬಡಾವಣೆ ಆಗುತ್ತಿದ್ದವು, ಈಗ ರವಿಕುಮಾರ್ ಅವರ ಹೆಸರಲ್ಲಿ ಬಡಾವಣೆ ಆಗುತ್ತಿವೆ. ಇದು ಜನರು ಅವರ ಮೇಲೆ ಇಟ್ಟಿರುವ ಪ್ರೀತಿಗೆ ಸಾಕ್ಷಿ. ಈ ಹಿನ್ನೆಲೆಯಲ್ಲಿ ವಿಪಕ್ಷದವರೂ ಸಹ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪ್ರೇಮಮ್ಮ ಜಯರಾಮೇಗೌಡ, ಉಪಾಧ್ಯಕ್ಷೆ ಭಾಗ್ಯಮ್ಮ, ಸದಸ್ಯರಾದ ಆರ್.ಗೀತಾ, ಕರೀಗೌಡ, ವಿನೋದ್, ಅಶೋಕ್, ವೈಶಾಲಿ, ಎಚ್.ಎಂ.ರಮೇಶ್, ಟಿ.ಲೋಕೇಶ್, ತಾಯಮ್ಮ, ರಾಮಲಿಂಗೇಗೌಡ, ಮಾಲಾಶ್ರೀ, ನಿಂಗರಾಜು, ದಯಾನಂದ್, ಸುಧಾಮಣಿ, ತಾಪಂ ಮಾಜಿ ಸದಸ್ಯ ಚಿಕ್ಕಬಳ್ಳಿ ಕೃಷ್ಣ, ತಹಸೀಲ್ದಾರ್ ವಿಶ್ವನಾಥ್, ತಾಲೂಕು ಪಂಚಾಯ್ತಿ ಇಒ ಲೋಕೇಶ್‌ಮೂರ್ತಿ, ಮುಖಂಡ ಸಿ.ಎಂ.ದ್ಯಾವಪ್ಪ ಇತರರಿದ್ದರು.