ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೇಸ್ ಬುಕ್, ವಾಟ್ಸಪ್, ಟ್ವೀಟರ್ ಹೀಗೆ ಸೋಷಿಯಲ್ ಮೀಡಿಯಾಗಳಲ್ಲಿ ತಾವು ಅಲ್ಲಿ ಭೇಟಿ ಕೊಟ್ಟೆ, ಇಲ್ಲಿ ಭೇಟಿ ಕೊಟ್ಟೆ ಎಂದು ಹೇಳುವ ಮಹಿಳಾ ಆಯೋಗ ಅಧ್ಯಕ್ಷರಿಗೆ ಎಲ್ಲವೂ ಗೊತ್ತಾಗುತ್ತದೆ, ದಾವಣಗೆರೆ ಮಹಿಳಾ ಸಿಪಿಐ ಮೇಲೆ ಕಾಂಗ್ರೆಸ್ ಮುಖಂಡನ ಮಕ್ಕಳು ಹಲ್ಲೆ ಮಾಡಿರುವ ವಿಚಾರವೇ ನಿಮ್ಮ ಗಮನಕ್ಕೆ ಬಂದಿಲ್ಲವೇ ಎಂದರು.
ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌದರಿ ಮಹಿಳೆಯರ ಪರವೋ ಅಥವಾ ಆಳುವ ಸರ್ಕಾರದ ಪರವೋ? ಹಲ್ಲೆಗೈದ ರೌಡಿಗಳು ಪೊಲೀಸರ ಜೊತೆ ಯಾವೆಲ್ಲಾ ಮಾತುಗಳನ್ನು ಆಡಿದ್ದಾರೆಂಬ ಸಂಗತಿ ಆಯೋಗಕ್ಕೆ ಅರಿವಿಲ್ಲವೇ? ಕಾಂಗ್ರೆಸ್ ದಕ್ಷಿಣ ಕ್ಷೇತ್ರ ಅಧ್ಯಕ್ಷ ಅಯೂಬ್ ಪೈಲ್ವಾನ್ ಮಕ್ಕಳಾದ ಹಸನ್, ಹುಸೇನ್ ಮಹಿಳಾ ಸಿಪಿಐ ಹಾಗೂ ಇಬ್ಬರು ಕಾನ್‌ಸ್ಟೇಬಲ್ ಮೇಲೆ ಹಲ್ಲೆ ಮಾಡಿದ್ದಾರೆ. ಇದು ನಿಜಕ್ಕೂ ಆತಂಕಕಾರಿ. ಆಳುವವರ ಕೃಪೆ ಇದೆಯೆಂದು ಏನು ಬೇಕಾದರೂ ಮಾಡಬಹುದೇ? ಪೊಲೀಸರಿಗೆ ಹೆದರಿಸಿ, ಕೀಳು ಅರ್ಥದ ಮಾತುಗಳನ್ನಾಡಿದ ಸಮಾಜಘಾತುಕರ ಬಗ್ಗೆ ಮೆದುಧೋರಣೆ ಏಕೆ ಎಂದರು.ಕುಖ್ಯಾತಿಗೆ ಪ್ರಸಿದ್ಧಿಯಾಗಬೇಕೆ?:
ಶಾಂತಿ, ಸಾಮರಸ್ಯಕ್ಕೆ ಹೆಸರಾಗಿದ್ದ ದಾವಣಗೆರೆಯಲ್ಲಿ ಈಗ ದಾದಾಗಿರಿ, ಗೂಂಡಾಗಿರಿ, ಮರಳು- ಮಣ್ಣು ಮಾಫಿಯಾ, ಅನ್ನಭಾಗ್ಯ ಅಕ್ಕಿ ದಂಧೆಯವರು, ಡ್ರಗ್ಸ್ ದಂಧೆಯವರು, ಇಸ್ಪೀಟ್, ಮಟ್ಕಾ ಜೂಜಾಟ, ವರ್ಗಾವಣೆ ದಂಧೆ ಮಾಡುವವರಿಂದಾಗಿ ಪ್ರಸಿದ್ಧಿ ಪಡೆಯುತ್ತಿದೆ. ಸಮಾಜಘಾತುಕರನ್ನು ಪೊಲೀಸರು ಚಿಗುರಿನಲ್ಲೇ ಚಿವುಟಿ ಹಾಕಬೇಕು. ಮಹಿಳಾ ಸಮಾನತೆ, ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರು ಮಹಿಳಾ ಪೊಲೀಸ್ ಅಧಿಕಾರಿ ಗಾಯತ್ರಿ ಮೇಲೆ ಆದ ಹಲ್ಲೆ ಬಗ್ಗೆ ಧ್ವನಿಯೆತ್ತಲಿ. ದಾವಣಗೆರೆ ದಕ್ಷಿಣ ಉಪ ಚುನಾವಣೆ ಹಿನ್ನೆಲೆ ಇಂತಹ ಸಮಾಜಘಾತುಕರನ್ನು ಜಿಲ್ಲೆಯಿಂದಲೇ ಗಡೀಪಾರು ಮಾಡಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಬಿಜೆಪಿ ಮಹಿಳಾ ಮೋರ್ಚಾದ ಮುಖಂಡರಾದ ಭಾಗ್ಯ ಪಿಸಾಳೆ, ಚೇತನಾ ಶಿವಕುಮಾರ, ರೇಣುಕಾ ಕೃಷ್ಣ, ನೀತಾ ನಂದೀಶ ಇತರರು ಇದ್ದರು.
* ಕೇಂದ್ರ ಆಯೋಗಕ್ಕೂ ಮನವಿ ಕೊಡ್ತೇವೆದಾವಣಗೆರೆಯಲ್ಲಿ ಇಂತಹ ಘಟನೆಗಳು ಮರುಕಳಿಸಬಾರದೆಂದು ಬಿಜೆಪಿ ಮಹಿಳಾ ಮೋರ್ಚಾದಿಂದ ಮಹಿಳೆಯರ ಪರವಾಗಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ ಅವರನ್ನು ಭೇಟಿ ಮಾಡಿ, ಸೂಕ್ತ ಕ್ರಮಕ್ಕೆ ಒತ್ತಾಯಿಸುತ್ತೇವೆ. ಮಹಿಳಾ ಸಿಪಿಐ ಗಾಯತ್ರಿ ಅವರಿಗೆ ನೈತಿಕ ಸ್ಥೈರ್ಯ ಮೂಡಿಸುತ್ತೇವೆ. ರಾಜ್ಯ ಮತ್ತು ಕೇಂದ್ರ ಮಹಿಳಾ ಆಯೋಗಕ್ಕೂ ದಾವಣಗೆರೆ ಪ್ರಕರಣದ ಬಗ್ಗೆ ಮನವಿ ಅರ್ಪಿಸುತ್ತೇವೆ ಎಂದು ಎಚ್.ಸಿ.ಜಯಮ್ಮ ತಿಳಿಸಿದರು.ಹಲ್ಲೆಗೊಳಗಾದರೂ ಧೈರ್ಯದಿಂದ ಕರ್ತವ್ಯ ನಿರ್ವಹಿಸಿದ ಸಿಪಿಐ ಗಾಯತ್ರಿ ಪರವಾಗಿ ಎಸ್‌ಪಿ, ಐಜಿಪಿ ನಿಲ್ಲಬೇಕು. ಹಲ್ಲೆ ಮಾಡಿದ ಎಲ್ಲ ಆರೋಪಿಗಳನ್ನು 48 ಗಂಟೆಯಲ್ಲೇ ಬಂಧಿಸಬೇಕು. ಒಂದುವೇಳೆ ಬಂಧಿಸದಿದ್ದರೆ ದಾವಣಗೆರೆ ಬಿಜೆಪಿ ಕಚೇರಿಯಿಂದ ಮಹಿಳಾ ಮೋರ್ಚಾ ಆರೋಪಿಗಳ ಮನೆವರೆಗೆ ಪಾದಯಾತ್ರೆ ನಡೆಸಿ ಮುತ್ತಿಗೆ ಹಾಕಲಿದೆ. ಮುಂದೆ ಆಗುವಂತಹ ಘಟನೆಗೆ ಪೊಲೀಸ್ ಇಲಾಖೆ, ಜಿಲ್ಲಾಡಳಿತವೇ ನೇರ ಹೊಣೆ.
- ಎಚ್.ಸಿ.ಜಯಮ್ಮ, ರಾಜ್ಯ ಉಪಾಧ್ಯಕ್ಷೆ, ಬಿಜೆಪಿ ಮಹಿಳಾ ಮೋರ್ಚಾ.