ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಅಂಬೇಡ್ಕರ್ ಭವನದಲ್ಲಿ ಹನಕೆರೆ ಎಂ.ಶ್ರೀನಿವಾಸ್ ಪ್ರತಿಷ್ಠಾನ ಹಾಗೂ ಕರ್ನಾಟಕ ಸಂಘದಿಂದ ಆಯೋಜಿಸಿದ್ದ ಮಾಜಿ ಶಾಸಕ ಎಂ.ಶ್ರೀನಿವಾಸ್ ೭೫ನೇ ವರ್ಷದ ಪ್ರಯುಕ್ತ ಶ್ರೀನಿಧಿ ಅಭಿನಂದನಾ ಗ್ರಂಥ ಬಿಡುಗಡೆ, ಅರಸಮ್ಮ ಮೆಣಸೇಗೌಡ ಕೃಷಿ ಪ್ರಶಸ್ತಿ, ಎಂ.ಶ್ರೀನಿವಾಸ್ ಸಮಾಜಸೇವಾ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ರಾಜಕೀಯವಾಗಿ ಮಂಡ್ಯ ರಾಷ್ಟ್ರಮಟ್ಟದಲ್ಲಿ ಹೆಸರನ್ನು ಗಳಿಸಿದೆ. ಅನೇಕ ಮುತ್ಸದ್ಧಿ ರಾಜಕಾರಣಿಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದೆ. ಹಾಗೆಯೇ ಎಚ್.ಕೆ.ವೀರಣ್ಣಗೌಡ, ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗುವ ಸಂದರ್ಭದಲ್ಲಿ ಕ್ಷೇತ್ರದ ಜನರು ಸೋಲುಣಿಸಿದ ಕೀರ್ತಿಯನ್ನೂ ಹೊಂದಿದೆ. ನಿತ್ಯ ಸಚಿವರೆನಿಸಿಕೊಂಡಿದ್ದ ಕೆ.ವಿ.ಶಂಕರಗೌಡರನ್ನು ಮತ್ತೆ ಗೆಲ್ಲುವುದಕ್ಕೆ ಜನರು ಅವಕಾಶ ನೀಡಲಿಲ್ಲ. ಹಾಗಾಗಿ ಜಿಲ್ಲೆಯೊಳಗೆ ಎಚ್ಚರಿಕೆಯಿಂದ ರಾಜಕಾರಣ ಮಾಡಬೇಕಾದ ಪರಿಸ್ಥಿತಿ ಇದೆ ಎಂದರು.ಇದರ ನಡುವೆಯೂ ಎಂ.ಶ್ರೀನಿವಾಸ್ ಶಾಸಕರಾಗಿ ಜನಪ್ರಿಯತೆ ಗಳಿಸಿರುವುದು ವಿಶೇಷ. ಸಾಮಾನ್ಯವಾಗಿ ರಾಜಕಾರಣಿಗಳಿಗೆ ಅಸಮಾಧಾನ, ವಿರೋಧವಿರುವುದನ್ನು ನೋಡಿದ್ದೇವೆ. ಆದರೆ, ಎಂ.ಶ್ರೀನಿವಾಸ್ ವಿಚಾರದಲ್ಲಿ ಪಕ್ಷದೊಳಗಾಗಲೀ, ವಿಪಕ್ಷದವರಾಗಲೀ ಹೆಚ್ಚು ಅಸಮಾಧಾನ ತೋಡಿಕೊಂಡಿದ್ದನ್ನು ನಾನು ಗಮನಿಸಿಲ್ಲ. ಅದಕ್ಕಾಗಿ ಜನಪ್ರಿಯ ಶಾಸಕರು ಎನ್ನಬಹುದು ಎಂದರು.
ನಾನು ಮತ್ತು ಶ್ರೀನಿವಾಸ್ ಒಟ್ಟಿಗೆ ರಾಜಕೀಯ ಪ್ರವೇಶಿಸಿದೆವು. ಒಂದೇ ಪಕ್ಷದಲ್ಲಿದ್ದೆವು. ಆನಂತರ ಬೇರೆಯಾದವು. ಆದರೆ, ಇದುವರೆಗೂ ನನ್ನ ಮತ್ತು ಶ್ರೀನಿವಾಸ್ ನಡುವೆ ಒಂದೇ ಒಂದು ಭಿನ್ನಾಭಿಪ್ರಾಯ, ಅಸಮಾಧಾನ ಮೂಡಿಲ್ಲ. ನಾನು ಪಕ್ಷ ಬಿಟ್ಟ ನಂತರವೂ ಅವರೊಂದಿಗಿನ ವಿಶ್ವಾಸ, ಸಂಬಂಧ ಉತ್ತಮವಾಗಿದೆ ಎಂದರು.
ಎಲ್ಲರೂ ಮಂಡ್ಯ ಎಂದರೆ ಇಂಡಿಯಾ ಎನ್ನುತ್ತಾರೆ. ಆದರೆ, ವಾಸ್ತವದಲ್ಲಿ ದೇಶದ ರಾಜಕೀಯ ಒಂದು ಕಡೆ ಸಾಗುತ್ತಿದ್ದರೆ ಮಂಡ್ಯ ರಾಜಕಾರಣ ಮತ್ತೊಂದು ದಿಕ್ಕಿನಲ್ಲಿರುತ್ತದೆ. ಹಾಗಾಗಿ ಇಲ್ಲಿನ ಜಿಲ್ಲೆಯ ರಾಜಕಾರಣವೇ ವಿಭಿನ್ನ ಹಾಗೂ ವೈಶಿಷ್ಟ್ಯಪೂರ್ಣವಾಗಿದೆ ಎಂದರು.
ಎಂ.ಶ್ರೀನಿವಾಸ್ ಎಂದೂ ತಮ್ಮ ರಾಜಕೀಯ ಜೀವನದಲ್ಲಿ ಅಧಿಕಾರ ದಾಹಿಯಾಗಲಿಲ್ಲ. ಮೂರು ಬಾರಿ ಶಾಸಕರಾಗಿ ಗೆದ್ದರೂ ಅವರಿಗೆ ಸಚಿವ ಸ್ಥಾನ ಸಿಗಲಿಲ್ಲ. ಆದರೂ, ಬೇಸರಗೊಳ್ಳದೆ ಕ್ಷೇತ್ರಕ್ಕೆ ದಕ್ಷ ರೀತಿಯಲ್ಲಿ ಸೇವೆ ಸಲ್ಲಿಸಿ ಉಳಿದ ರಾಜಕಾರಣಿಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ ಎಂದು ಪ್ರಶಂಸಿಸಿದರು.
ದಿವ್ಯಸಾನ್ನಿಧ್ಯವನ್ನು ಕೆಂಗೇರಿಯ ವಿಶ್ವ ಒಕ್ಕಲಿಗರ ಮಠದ ಶ್ರೀನಿಶ್ಚಲಾನಂದನಾಥ ಸ್ವಾಮೀಜಿ ವಹಿಸಿದ್ದರು. ಮಾಜಿ ಸಚಿವ ಸಿ.ಎ.ಪುಟ್ಟರಾಜು, ಶಾಸಕ ಪಿ.ರವಿಕುಮಾರ್, ವಿಧಾನಪರಿಷತ್ ಶಾಸಕ ಮಧು ಜಿ.ಮಾದೇಗೌಡ, ಮಾಜಿ ಶಾಸಕರಾದ ಎಂ.ಶ್ರೀನಿವಾಸ್, ಕೆ.ಟಿ.ಶ್ರೀಕಂಠೇಗೌಡ, ಬಿ.ರಾಮಕೃಷ್ಣ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಹನಕೆರೆ ಎಂ.ಶ್ರೀನಿವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಸ್.ಶಿವರಾಮು, ತಗ್ಗಹಳ್ಳಿ ವೆಂಕಟೇಶ್, ಲೋಕೇಶ್ ಚಂದಗಾಲು ಮತ್ತಿತರರಿದ್ದರು.