ರಾಮನಗರ: ಆಶ್ರಯ ಯೋಜನೆ ಅಡಿಯಲ್ಲಿ ಜಿಲ್ಲೆಯ ಬಡವರು/ನಿವೇಶನ ರಹಿತರಿಗೆ 40 ಸಾವಿರ ನಿವೇಶನಗಳನ್ನು ಒದಗಿಸಲು ಜಿಲ್ಲಾದ್ಯಂತ 700 ಎಕರೆಗೂ ಹೆಚ್ಚು ಜಮೀನು ಗುರುತಿಸಲಾಗಿದೆ ಎಂದು ಪೌರಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಬಾಲಕೃಷ್ಣ ಹೇಳಿದರು.
ದಾಖಲೆ ರಹಿತ ಜನವಸತಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರಿಗೆ ಶಾಶ್ವತ ಹಕ್ಕು ದಾಖಲೆಗಳನ್ನು ಒದಗಿಸುವ ಉದ್ದೇಶದಿಂದ ಇದುವರೆಗೆ 10 ಸಾವಿರ ಫಲಾನುಭವಿಗಳಿಗೆ ಶಾಶ್ವತ ಹಕ್ಕು ಪತ್ರಗಳನ್ನು ನೀಡಲಾಗಿದ್ದು, ಇನ್ನೂ 21 ಸಾವಿರ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸುವ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 4,58 ಲಕ್ಷ ಆಕಾರಬಂದ್ ಗಣಕೀಕರಣಗೊಳಿಸಿ, ಸಾರ್ವಜನಿಕ ಬಳಕೆಗೆ ಲಭ್ಯವಾಗುವಂತೆ ಮಾಡಲಾಗಿದೆ. ರೈತರ ಜಮೀನನ್ನು ಕರಾರುವಕ್ಕಾಗಿ ಅಳತೆ ಮಾಡಲು ಭೂ ಮಾಪನಾ ಇಲಾಖೆಗೆ ಸರ್ಕಾರ 50 ರೋವರ್ ಉಪಕರಣಗಳನ್ನು ನೀಡಿದೆ ಎಂದು ಹೇಳಿದರು.
20ಕೋಟಿ ವೆಚ್ಚದಲ್ಲಿ ಆನೆ ಕ್ಯಾಂಪ್ ನಿರ್ಮಾಣ:ಅರಣ್ಯ ಇಲಾಖೆ ವತಿಯಿಂದ ಮಾನವ ವನ್ಯ-ಪ್ರಾಣಿಗಳ ಸಂಘರ್ಷ ನಿರ್ವಹಣೆಗಾಗಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ 260 ಕೋಟಿ ರು. ಹಂಚಿಕೆ ಮಾಡಲಾಗಿದೆ. ಜಿಲ್ಲೆಯಲ್ಲಿ 20 ಕೋಟಿ ರು.ಗಳ ವೆಚ್ಚದಲ್ಲಿ ಆನೆ ಕ್ಯಾಂಪ್ ನಿರ್ಮಿಸಲು ಅನುದಾನ ನೀಡಿದ್ದು, ಕನಕಪುರ ವನ್ಯಜೀವಿ ವಿಭಾಗವನ್ನು ಹೊಸದಾಗಿ ಸೃಜಿಸಲಾಗಿದೆ ಎಂದು ಹೇಳಿದರು.
ಅರಣ್ಯ ಇಲಾಖೆಯಿಂದ ಜಿಲ್ಲೆಯಲ್ಲಿ ಡಿ-ನೋಟಿಫಿಕೇಷನ್ ಪ್ರಕರಣಗಳಿಗೆ ಒತ್ತು ನೀಡಲಾಗುತ್ತಿದ್ದು, ಶೀಘ್ರವಾಗಿ ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ಸಲ್ಲಿಸಲು ಕ್ರಮ ಕೈಗೊಳ್ಳಲಾಗಿದೆ. ಮಾಗಡಿ ತಾಲೂಕಿನ ಕಸಬಾ ಹೋಬಳಿ, ಬಂಟರಕುಪ್ಪೆ ಬಿ ಬ್ಲಾಕ್ ಬಾಚೇನಹಟ್ಟಿ ಸರ್ವೇ ನಂ.52 ಮತ್ತು 53ರಲ್ಲಿ 224.5 ಎಕರೆ ಡಿ-ನೋಟಿಫೈ ಆಗಿರುವ ಪ್ರದೇಶವನ್ನು ಶೀಘ್ರವಾಗಿ ರೈತರಿಗೆ ಕಂದಾಯ ಇಲಾಖೆ ಮುಖಾಂತರ ಹಸ್ತಾಂತರಿಸಲಾಗುವುದು ಎಂದು ಬಾಲಕೃಷ್ಣ ಹೇಳಿದರು.
ಶಾಸಕ ಇಕ್ಬಾಲ್ ಹುಸೇನ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷ ಕೆ.ರಾಜು, ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತದ ಉಪಾಧ್ಯಕ್ಷ ಎಸ್.ಗಂಗಾಧರ್, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ನಟರಾಜು ಗಾಣಕಲ್, ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಚೇತನ್ ಕುಮಾರ್, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ, ಜಿಪಂ ಸಿಇಒ ಅನ್ಮೋಲ್ ಜೈನ್, ಅಪರ ಜಿಲ್ಲಾಧಿಕಾರಿ ಆರ್.ಚಂದ್ರಯ್ಯ, ಉಪವಿಭಾಗಾಧಿಕಾರಿ ಬಿನೋಯ್ ಮತ್ತಿತರರು ಉಪಸ್ಥಿತರಿದ್ದರು.
ಕನಕಪುರದಲ್ಲೂ ಅರ್ಕಾವತಿ ರಿವರ್ ಫ್ರಂಟ್ ಡೆವಲಪ್ಮೆಂಟ್
ರಾಮನಗರದಲ್ಲಿ ಅರ್ಕಾವತಿ ನದಿಯ ಇಕ್ಕೆಲಗಳಲ್ಲಿ 155 ಕೋಟಿ ರು. ಮೊತ್ತದಲ್ಲಿ ವಾಕಿಂಗ್ ಪಾತ್, ಸೈಕಲ್ ಪಾತ್ ಹಾಗೂ ಮೂಲ ಸೌಕರ್ಯ ನಿರ್ಮಾಣ ಅಭಿವೃದ್ಧಿ ಹಾಗೂ ಸೌಂದರ್ಯೀಕರಣ ಮಾಡುವ ಕಾಮಗಾರಿ ಪ್ರಗತಿಯಲ್ಲಿದ್ದು, ಶೇ.55ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದರು.
15ಕೆಆರ್ ಎಂಎನ್ 1,2.ಜೆಪಿಜಿ