ಚಿಂತಾಮಣಿ: ನಗರದ ಕಟಮಾಚನಹಳ್ಳಿ ಸಮೀಪ ಸ್ಕೂಟಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ದೀಪಿಕಾ (16) ವರ್ಷದ ಯುವತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ಬೆಂಗಳೂರು ಚಿಂತಾಮಣಿ ಮುಖ್ಯರಸ್ತೆಯ ಕಟಮಾಚನಹಳ್ಳಿ ಗೇಟ್ ಸಮೀಪದಲ್ಲಿ ಯೂಟರ್ನ್ ತೆಗೆದು ಕೊಳ್ಳಲು ಹೋದಾಗ ಹಿಂಬದಿಯಿಂದ ಬಂದ ಖಾಸಗಿ ಬಸ್ ಚಾಲಕನ ನಿಯಂತ್ರಣಕ್ಕೆ ಬಾರದೇ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿಯಲ್ಲಿ ಕುಳಿತಿದ್ದ ಶ್ರೀನಿವಾಸಪುರ ತಾಲೂಕಿನ ರಾಯಲಪಾಡು ಸಮೀಪದ ಸುಣ್ಣಕಲ್ಲು ಗ್ರಾಮದ ದೀಪಿಕಾ (16) ಸಾವನ್ನಪ್ಪಿದ್ದು, ನಗರದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಉಳಿದಂತೆ ಸ್ಕೂಟಿ ಕುಳಿತಿದ್ದ ನಗರದ ಅಗ್ರಹಾರದ ನಿವಾಸಿಯಾದ ತ್ರಿಪುರಾಂಭ (16 ) ಯುವತಿಗೆ ತಲೆಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದಲ್ಲಿ ಮತ್ತೋರ್ವ ಯುವತಿ ಸ್ಮಿತಾ ಚಿಂತಾಮಣಿಯ ಮರಿನಾಯಕಹಳ್ಳಿ ಗ್ರಾಮದ ವಾಸಿಯೆಂದು ಗುರುತಿಸಿದ್ದು, ಈಕೆಗೆ ಕಾಲು ಮುರಿದಿದ್ದು ಕೋಲಾರದ ಎಸ್‌ಎನ್‌ಆರ್ ಆಸ್ಪತ್ರೆಗೆ ರವಾನಿಸಲಾಗಿದ್ದು ಈಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಖಾಸಗಿ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿ ನಂತರ ೨ ದ್ವಿಚಕ್ರ ವಾಹನಗಳಲ್ಲಿ ೫ ಮಂದಿ ಸ್ನೇಹಿತರು ಸೇರಿಕೊಂಡು ಕೈಲಾಸಗಿರಿಗೆ ಹೋಗಲು ತೆರಳಿದ್ದು ಕಟಮಾಚನಹಳ್ಳಿ ಗೇಟ್ ಸಮೀಪ ಯೂಟರ್ನ್ ತೆಗೆದುಕೊಳ್ಳಲು ಹೋದಾಗ ಖಾಸಗಿ ಬಸ್ ಚಾಲಕನ ಅತಿವೇಗ ಮತ್ತು ಅಜಾಗರೂಕತೆಯಿಂದ ಬಂದ ಪರಿಣಾಮ ಸ್ಕೂಟಿಗೆ ಡಿಕ್ಕಿಹೊಡೆದಿದ್ದು ಈ ಘಟನೆ ಕಾರಣವೆಂದು ತಿಳಿದುಬಂದಿದೆ.

ಘಟನಾ ವಿಷಯ ತಿಳಿದ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಶಿವರಾಜ್ ಸಿಬ್ಬಂದಿ ಭೇಟಿ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.


ಚಿತ್ರಶೀರ್ಷಿಕೆ: ಖಾಸಗಿ ಬಸ್ ಚಕ್ರಕ್ಕೆ ಸಿಲುಕಿದ ಸ್ಕೂಟಿ ಚಿತ್ರ.